ವಿಶೇಷ ಸೂಚನೆ

ನಾಡು-ನುಡಿ

ಹಳಗನ್ನಡ

ಕನ್ನಡವು ಎಂದು ತನ್ನ ಪಿತೃಭಾಷೆಯಿಂದ ಕವಲೊಡೆದು ತನ್ನ ಸ್ವತಂತ್ರ ಬದುಕನ್ನು ಆರಂಭಿಸಿತೆಂಬುದನ್ನು ಸುಲಭವಾಗಿ ನಿರ್ಣಯಿಸಲಾಗುವುದಿಲ್ಲ. ಅದು ಬಹುಶಃ ಕ್ರಿ.ಪೂ. 4ನೇ ಶತಮಾನದಲ್ಲೇ ಅಥವಾ ಅದಕ್ಕೆ ಹಿಂದೋ ಮೂಲಭಾಷೆಯಿಂದ ಬೇರ್ಪಟ್ಟು ಸ್ವತಂತ್ರಭಾಷೆಯಾಗಿರಬಹುದು. ಕನ್ನಡ ಭಾಷೆಯ ಪ್ರಾಚೀನತೆಯ ಬಗ್ಗೆ ಮಾತ್ರ ನಾವು ಗಟ್ಟಿ ನೆಲದ ಮೇಲೆ ನಿಂತು ಮಾತನಾಡಬಹುದು. ಪೆÇ್ರ. ಡಿ.ಎಲ್. ನರಸಿಂಹಾಚಾರ್ಯರ ಪ್ರಕಾರ, ಕಾಲನಿರ್ಣಯ ಸಾಧ್ಯವಿರುವ ಪ್ರಪ್ರಾಚೀನ ಕನ್ನಡ ಪದವೆಂದರೆ ಕ್ರಿ.ಪೂ. 3ನೇ ಶತಮಾನದ ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬರುವ `ಇಸಿಲ' ಎಂಬ ಸ್ಥಳನಾಮದ ಹೆಸರು. `ಇಸಿಲ'ವು ನಿಶ್ಚಿತವಾಗಿಯೂ ಕನ್ನಡ ಪದ ಮತ್ತು ಅದು ಬಾಣಪ್ರಯೋಗ ಮಾಡು ಎಂಬರ್ಥದ `ಎಯ್' ಅಥವಾ `ಎಸು' ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. `ಇಸಿಲ ' ಬಾಣ ಬಿಡುವ ಜಾಗ ಅಥವಾ ಕೋಟೆಯಿಂದ ಆವೃತವಾಗಿದ್ದ ಒಂದು ಪಟ್ಟಣವಿರಬೇಕು. ಗೋವಿಂದ ಪೈಯವರು ಹಾಲನ `ಗಾಥಾಸಪ್ತಶತಿ' ಯಲ್ಲಿ (ಕ್ರಿ.ಶ. 1ನೇ ಶ.) ಬರುವ `ಅತ್ತ' (ನೋಡಿ - ಅತ್ತೆ), `ಪೆÇಟ್ಟ' (ನೋಡಿ `ಪೆÇಟ್ಟಿ' >>>>>>> ಹೊಟ್ಟಿ) `ತುಪ್ಪ' ಇದೇ ಮುಂತಾದ ಕನ್ನಡ ಪದಗಳನ್ನು ಗುರುತಿಸಿದ್ದಾರೆ. ಇವೆಲ್ಲವೂ ಕನ್ನಡ ಭಾಷೆಯ ಬಿಡಿ ಬಿಡಿ ಪದಗಳು. ಆದರೆ ಕನ್ನಡದ ಒಂದು ಅಧಿಕೃತ ಸಮಗ್ರ ಪಾಠವು ನಮಗೆ ಮೊದಲು ದೊರಕುವುದು ಸು. ಕ್ರಿ.ಶ. 450ರ ಹಲ್ಮಿಡಿ ಶಾಸನದಲ್ಲಿ. ಆ ಶಾಸನವು ಪಶುಪತಿ ಮತ್ತು ನಾಗ ಎಂಬ ಇಬ್ಷರು ಅಧಿಕಾರಿಗಳು ವಿಜ ಅರಸ ಎಂಬ ಯುದ್ಧವೀರನಿಗೂ, ಆ ವೀರನು ಮತ್ತೆ ಕೆಲವು ಬ್ರಾಹ್ಮಣರಿಗೂ ದತ್ತಿಗಳನ್ನು ಬಿಟ್ಟುಕೊಟ್ಟ ದಾನಗಳನ್ನು ದಾಖಲಿಸುತ್ತದೆ. ಶಾಸನಭಾಷೆಯನ್ನು ಪೂರ್ವದ ಹಳಗನ್ನಡವೆಂದು ಹೆಸರಿಸಲಾಗಿದೆ. ಆದರೆ ಓದುಗರಿಗೆ ಆಶ್ಚರ್ಯವನ್ನುಂಟುಮಾಡುವ ಸಂಗತಿಯೆಂದರೆ ಆ ಹೊತ್ತಿಗಾಗಲೇ ಕನ್ನಡದ ಶಬ್ದಭಂಡಾರ, ಪದರಚನೆ ಮತ್ತು ವಾಕ್ಯರಚನೆಗಳ ಮೇಲೆ ಆಗಿದ್ದ ಸಂಸ್ಕತದ ತುಂಬುಪ್ರಭಾವ. `ಪೆತ್ತಜಯನ್' ಎಂಬ ಕಸಿ ಕ್ರಿಯಾಸಮಾಸದಲ್ಲಿ `ಪೆತ್ತ' ಎಂಬ ಕನ್ನಡ ಕ್ರಿಯಾರೂಪದ ಜೊತೆ `ಜಯ' ಎಂಬ ಸಂಸ್ಕತ ಪದವು ಸೇರಿಕೊಂಡಿದೆ. ಅದಲ್ಲದೆ, ದ್ರಾವಿಡ ವಾಕ್ಯರಚನೆಗೆ ಹೊರತಾದ ಒಂದು ಕರ್ಮಣಿ ಪ್ರಯೋಗವು ಆಡುಮಾತಾಗಿದ್ದ ಕನ್ನಡವು ರೂಢಗೊಳ್ಳುವ ಮೊದಲೇ ಪಡೆದಿದ್ದ ಸಂಸ್ಕತದ ಪ್ರಭಾವಕ್ಕೆ ಒಂದು ಒಳ್ಳೆಯ ನಿದರ್ಶನವಾಗಿದೆ.

ಕನ್ನಡ ಭಾಷೆಯ ಒಂದು ಪ್ರಪ್ರಾಚೀನ ಮಾದರಿಯಾಗಿ ಹಲ್ಮಿಡಿ ಶಾಸನದ ಪ್ರಾಮುಖ್ಯವನ್ನು ಎತ್ತಿ ಹೇಳಿದರೆ ಸಾಲದು; ಅದಕ್ಕೆ ಇನ್ನೂ ಹೆಚ್ಚಿನ ಮಹತ್ವವಿದೆ. ಕರ್ನಾಟಕವನ್ನು ಆಳಿದ ಮೊತ್ತ ಮೊದಲ ಕನ್ನಡ ದೊರೆಗಳೆಂದು ಇತಿಹಾಸಕಾರರು ಭಾವಿಸಿರುವ ಕದಂಬರು ಹಾಕಿಸಿರುವ ಆ ಶಾಸನವು ಕ್ರಿ.ಶ. ಐದನೆಯ ಶತಮಾನದಲ್ಲಿ ಕನ್ನಡವು ಪಡೆದುಕೊಳ್ಳುತ್ತಿದ್ದ ಪ್ರಾಮುಖ್ಯವನ್ನೂ ಎತ್ತಿಹೇಳುತ್ತದೆ. ಕದಂಬರಿಗಿಂತ ಮೊದಲು ಕರ್ನಾಟಕವನ್ನು ಆಳುತ್ತಿದ್ದವರ ಅಧಿಕೃತ ಭಾಷೆ ಪ್ರಾಕೃತವಾಗಿತ್ತು. ಕನ್ನಡಿಗರಾಗಿದ್ದ ಕದಂಬರು ಸ್ವತಂತ್ರರಾಜ್ಯವನ್ನು ಸ್ಥಾಪಿಸಿ ಕನ್ನಡವನ್ನು ಆಡಳಿತ ಇತ್ಯಾದಿಗಳಿಗಾಗಿ ಬಳಸಲು ಆರಂಭಿಸಿದ್ದು ಬಹು ಮುಖ್ಯ ಸಂಗತಿ. ಆಡುಭಾಷೆಯಾಗಿದ್ದ ಕನ್ನಡವು ಅವರ ಕಾಲದಲ್ಲಿ ಆಸ್ಥಾನದ ಭಾಷೆಯೂ ಆಯಿತು. ಏಕೆಂದರೆ ಹಲ್ಮಿಡಿ ಶಾಸನದಿಂದ ಆರಂಭಗೊಂಡಂತೆ ದಾನದತ್ತಿಗಳ ವಿಷಯವನ್ನು ಹೇಳುವ ರಾಜಾಜ್ಞೆಗಳ ಘೋಷಣೆಯ ಕನ್ನಡ ಶಾಸನಗಳ ಒಂದು ನಿರಂತರ ಪ್ರವಾಹವೇ ಮುಂದೆ ಹರಿಯಿತು. ಆಡಳಿತ ವಲಯಗಳಲ್ಲಿ ಕನ್ನಡವು ನೆಲೆಗೊಂಡಂತೆ ಅದರ ಅಭಿವ್ಯಕ್ತಿ ಸಾಮಥ್ರ್ಯವೂ ವೃದ್ಧಿಯಾಯಿತು. ಮುಂದೆ, ಚಕ್ರವರ್ತಿಗಳಾದ ಬಾದಾಮಿ ಚಾಲುಕ್ಯರ ಕಾಲದಲ್ಲಿ ಬಹುಶಃ ಕನ್ನಡವು ಪ್ರಪ್ರಥಮವಾಗಿ ಕಲಾತ್ಮಕ ಉದ್ದೇಶಗಳಿಗಾಗಿ ಬಳಕೆಯಾಯಿತು. ಇತಿಹಾಸಕಾರರು ಒಮ್ಮತದಿಂದ ಅಭಿಪ್ರಾಯಪಟ್ಟಿರುವಂತೆ, ಬಾದಾಮಿ ಚಾಲುಕ್ಯರ ಕಾಲದಲ್ಲಿ - ಆರು ಏಳನೆಯ ಶತಮಾನಗಳಲ್ಲಿ `ಕರ್ನಾಟಕ ಸಂಸ್ಕತಿ'ಯು ರೂಪುಗೊಂಡಿತು. ಈ ಚಾಲುಕ್ಯರ ರಾಜಾಶ್ರಯದಲ್ಲಿ ಮೊತ್ತಮೊದಲ ಸಾಹಿತ್ಯಕೃತಿಗಳು ರಚನೆಗೊಂಡಿರಬೇಕು. ಸಾಹಿತ್ಯಕ ಮೌಲ್ಯದ ಮೊದಲ ಕನ್ನಡ ಶಾಸನಗಳು ಏಳನೆಯ ಶತಮಾನದಿಂದ ಲಭ್ಯವಾಗುತ್ತವೆ. ಇದು ಕನ್ನಡದಲ್ಲಿ ಸಾಹಿತ್ಯ ಕೃಷಿ ಆರಂಭವಾಗಿದ್ದುದರ ಸ್ಪಷ್ಟ ಪ್ರಬಲಸೂಚನೆ. ಏಕೆಂದರೆ, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಶಾಸನಗಳ ಭಾಷೆಯು ಸಾಹಿತ್ಯಕೃತಿಗಳ ಭಾಷೆ ಶೈಲಿಗಳಿಂದ ರೂಪಿತಗೊಂಡಿದೆ. ಚಾಲುಕ್ಯರ ರಾಜಧಾನಿಯಾದ ಬಾದಾಮಿಯ ಸುತ್ತಮುತ್ತಣ ಪ್ರದೇಶದಲ್ಲಿನ ಕನ್ನಡವು ಶಿಷ್ಟ ಮತ್ತು ರಾಜಾಸ್ಥಾನದ ಭಾಷೆಯಾಗಿ ಪರಿಣಮಿಸಿ, ಆ ಉಪಭಾಷೆಯೇ ಕಾವ್ಯಭಾಷೆಯೂ ಆಗಿ ಪರಿಣಮಿಸಿತು. ಇದು ಎಷ್ಟರ ಮಟ್ಟಿಗೆ ಕನ್ನಡದಲ್ಲಿ ನೆಲೆಯೂರಿತೆಂದರೆ, ಚಾಲುಕ್ಯರ ಕಾಲವಾದ ಮೇಲೆ ಬಂದ ರಾಷ್ಟ್ರಕೂಟರ ಕಾಲದ ಶ್ರೀವಿಜಯನ `ಕವಿರಾಜಮಾರ್ಗ'ದಲ್ಲಿ (ಸು. 850). ತಿರುಳ್ಗನ್ನಡದ ನಾಡು ಎಂಬುದಾಗಿ ಗುರುತಿಸುವಾಗ ಬಾದಾಮಿ, ಪಟ್ಟದಕಲ್ಲು, ಕೊಪ್ಪಳ, ಒಕ್ಕುಂದಗಳ ಮಧ್ಯದ ಪ್ರದೇಶವನ್ನು ಹೆಸರಿಸಲಾಗಿದೆ. ಹತ್ತನೇ ಶತಮಾನದ ಪಂಪ ರನ್ನರೂ ಕೂಡ ಪುಲಿಗೆರೆಯ (ಈಗಿನ ಲಕ್ಷೆ ್ಮೀಶ್ವರದ) ಸುತ್ತಮುತ್ತಣದ ಕನ್ನಡವಷ್ಟೇ ತಮ್ಮ ಕಾವ್ಯಭಾಷೆಯಾಗಿ ಆರಿಸಿಕೊಂಡಿರುವುದನ್ನು ಸ್ಮರಿಸಿದ್ದಾರೆ.
ಕನ್ನಡದ ಮೊತ್ತಮೊದಲ ಲಭ್ಯಕೃತಿ `ಕವಿರಾಜಮಾರ್ಗ'ವು ಒಂದು ಅಂಲಕಾರ ಶಾಸ್ತ್ರ ಸಂಬಂಧಿ ಕೃತಿಯಾಗಿದ್ದು `ಹಳಗನ್ನಡ' ದಲ್ಲಿ ರಚಿತವಾಗಿದೆ. ಸು. ಕ್ರಿ. ಶ. 450ರಿಂದ ಸು.800ರ ವರೆಗಿನ ಶಾಸನಭಾಷೆಯನ್ನು `ಪೂರ್ವದ ಹಳಗನ್ನಡ' ವೆಂದು ಕರೆಯುವುದು ರೂಢಿ. ಪೂರ್ವದ ಹಳಗನ್ನಡ ರೂಪಗಳು ಹಳೆಯ ತಮಿಳಿಗೆ ಸಮೀಪವಾಗಿವೆ. ಪೂರ್ವದ ಹಳಗನ್ನಡವೇ ಬದಲಾವಣೆ ಹೊಂದಿ ಹಳಗನ್ನಡವಾಯಿತು. ಪೂರ್ವದ ಹಳಗನ್ನಡಕ್ಕೂ ಹಳಗನ್ನsಡಕ್ಕೂ ಹಲವು ಸ್ವನಾತ್ಮಕ ಮತ್ತು ಆಕೃತಿಮಾತ್ಮಕ ಅಂಶಗಳಲ್ಲಿ ವ್ಯತ್ಯಾಸದೆ. ಒಂದು ಉದಾಹರಣೆ ಕೊಡುವುದಾದರೆ, ಘೋಷ ಮೂರ್ಧನ್ಯ ಘರ್ಷ ವ್ಯಂಜನ ``¿ï'' ವು (ಇದು ದ್ರಾವಿಡ ಭಾಷೆಗಳಿಗೇ ವಿಶಿಷ್ಟವಾದ ಸ್ವನ) ಪೂರ್ವದ ಹಳಗನ್ನಡದಲ್ಲಿ ಬಳಕೆಯಲ್ಲಿದ್ದುದು, ಹಳಗನ್ನಡ ಕಾಲದ ಹೊತ್ತಿಗೆ ಒಡೆದು ``ಳ್'' ಮತ್ತು ``ರ್'' ಎಂಬ ಸ್ವನಿಮಗಳಲ್ಲಿ ವಿಲೀನ ಹೊಂದುವ ಪ್ರವೃತ್ತಿಯನ್ನು ತೋರುತ್ತದೆ. ಒಂಬತ್ತು ಹತ್ತನೆಯ ಶತಮಾನಗಳಲ್ಲಿ ಕನ್ನಡಕ್ಕೆ ಪ್ರಾಕೃತ, ಸಂಸ್ಕತಗಳಿಂದ ಬಹುಸಂಖ್ಯೆಯ ಸ್ವೀಕರಣಗಳು ಹರಿದುಬಂದು ಸೇರಿದವು.
ನಡುಗನ್ನಡ
ಒಂಬತ್ತನೇ ಶತಮಾನದ ಆದಿ ಅಥವಾ ಹತ್ತನೇ ಶತಮಾನದ ಆರಂಭದ ಹೊತ್ತಿಗೆ ಹಳಗನ್ನಡವು ನಡುಗನ್ನಡವಾಗಿ ಬದಲಾವಣೆ ಹೊಂದುವ ಕಾರ್ಯವು ನಡೆದಿತ್ತು. ಹನ್ನೊಂದನೆಯ ಶತಮಾನದಲ್ಲಿ ಆ ಕಾರ್ಯವು ಹೆಚ್ಚು ಕಡಮೆ ಮುಕ್ತಾಯಕ್ಕೆ ಬಂದಿತು. ಈ ಸಂದರ್ಭದಲ್ಲಿ ನಡೆದ ಎರಡು ಸ್ವನಾತ್ಮಕ ವ್ಯತ್ಯಾಸಗಳೆಂದರೇ (1) `ಪ್' ವ್ಯಂಜನವು `ಹ್' ಆಯಿತು. (2) ವ್ಯಂಜನಾಂತ ಪದಗಳೂ ಪ್ರತ್ಯಯಗಳೂ ಸ್ವರಾಂತಗಳಾದುವು. (ಉದಾ : ಪಲ್ >> ಹಲ್ಲು, ಪಾಲ್ >> >>ಹಾಲು).
ನಡುಗನ್ನಡವು ಹಳಗನ್ನಡ ಮತ್ತು ಹೊಸಗನ್ನಡಗಳ ಮಧ್ಯದ ಸಂಕ್ರಮಣ ಸ್ಥಿತಿಯೆಂದು ಭಾಷಾವಿಜ್ಞಾನಿಗಳು ಭಾವಿಸುತ್ತಾರೆ. ಹೊಸಗನ್ನಡಕ್ಕೂ ನಡುಗನ್ನಡಕ್ಕೂ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆಧುನಿಕ ವಿದ್ಯಾವಂತರು ಹೆಚ್ಚು ಶ್ರಮವಿಲ್ಲದೆ ನಡುಗನ್ನಡ ಕೃತಿಗಳನ್ನು (12-19 ಶತಮಾನ) ಅರ್ಥಮಾಡಿಕೊಳ್ಳಬಲ್ಲರು; ಆದರೆ ಅವರು ಹಳಗನ್ನಡ ಕೃತಿಗಳನ್ನು (9-10 ಶತಮಾನ) ಅರ್ಥ ಮಾಡಿಕೊಳ್ಳಲು ಹೆಚ್ಚಿನ ಪರಿಶ್ರಮ ಅಗತ್ಯ.