ವಿಶೇಷ ಸೂಚನೆ

ಡಿ.ವಿ. ಗುಂಡಪ್ಪ

ಸಹೃದಯತೆ, ದಾರ್ಶನಿಕತೆ ಲೌಕಿಕಾಸಕ್ತಿ, ವೈಚಾರಿಕತೆ ಪರಂಪರಾಶ್ರದ್ಧೆ, ಪ್ರತಿಭೆ - ಪರಿಶ್ರಮ ಹೀಗೆ ವಿವಿಧ ಗುಣಗಳ ಸಂಗಮ ಡಿ.ವಿ.ಜಿ. ಇವರು ಹುಟ್ಟಿದ್ದು ೧೮೮೭ರ ಮಾರ್ಚ್ ೧೭ರಂದು.
೧೯೦೬-೦೭ರ ಸುಮಾರಿಗೆ ಡಿ.ವಿ.ಜಿಯವರು ತಮ್ಮ ಪತ್ರಿಕಾವೃತ್ತಿಯನ್ನು ಪ್ರಾರಂಭಿಸಿದರು. ಆಗಿನ ಸೂರ್ಯೋದಯ ಪ್ರಕಾಶಿಕಾ, ಮೈಸೂರು ಸ್ಟ್ಯಾಂಡರ್ಡ್, ಈವನಿಂಗ್ ಮೈಲ್, ಮೈಸೂರು ಟೈಮ್ಸ್, ಪತ್ರಿಕೆಗಳ ಆಶ್ರಯದಲ್ಲಿ. ನಂತರ ನವರತ್ನ ಕೃಷ್ಣಾಸ್ವಾಮಿಯವರೊಡನೆ, ಭಾರತಿ ಎಂಬ ದಿನಪತ್ರಿಕೆಯೊಂದನ್ನು ತಾವೇ ಹೊರಡಿಸುವ ಸಾಹಸ ಮಾಡಿದರು. ೧೯೧೩ರಲ್ಲಿ ಕರ್ನಾಟಕ ಅರ್ಧವಾರ ಪತ್ರಿಕೆಯನ್ನು ಆರಂಭಿಸಿ ಏಳೆಂಟು ವರ್ಷ ನಡೆಸಿದರು. ೧೯೨೧ರಲ್ಲಿ ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್ ಇಂಗ್ಲೀಷ್ ಮಾಸಪತ್ರಿಕೆಯನ್ನು ಆರಂಭಿಸಿದರು. ೧೯೨೩ರಿಂದಾಚೆಗೆ ಡಿ.ವಿ.ಜಿ. ನಡೆಸಿದ ಪತ್ರಿಕೆ ಕರ್ನಾಟಕ ಜನ-ಜೀವನ ಮತ್ತು ಅರ್ಥಸಾಧಕ ಪತ್ರಿಕೆ. ೧೯೪೫ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆಂಗ್ಲಪತ್ರಿಕೆ ಪಬ್ಲಿಕ್ ಅಫೇರ್ಸ್ ಮೂಲಕ ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ಕುರಿತು ಸತತವಾಗಿ ವ್ಯಾಖ್ಯೆ ನೀಡಿದರು.

ದೇಶಿಯ ಸಂಸ್ಥಾನಗಳ ವಿಶಿಷ್ಟ ಸಮಸ್ಯೆಗಳನ್ನು ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಭಾರತೀಯರಲ್ಲಿ ಡಿ.ವಿ.ಜಿ ಅಗ್ರಗಣ್ಯರಾಗಿದ್ದರು. ಇವರು ಬರಿಯ ವಿದ್ವತ್ಕಾರ್ಯಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಳ್ಳದೆ, ತಮ್ಮ ಧ್ಯೇಯಗಳ ಪ್ರವರ್ತನೆಗಾಗಿ ಅನೇಕ ಸಂಘ - ಸಂಸ್ಥೆಗಳನ್ನು ಕಟ್ಟಿ ಬೆಳಸಿದ್ದಾರೆ.

ಅವುಗಳಲ್ಲಿ ಸೋಷಿಯಲ್ ಸರ್ವೀಸ್ ಲೀಗ್, ಪಾಪ್ಯುಲರ್ ಎಜುಕೇಶನ್ ಲೀಗ್ ಪ್ರಮುಖವಾದುವು. ಅಷ್ಟೆಯಲ್ಲದೇ ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದಾಗ, ಆ ಸಂಸ್ಥೆಯ ಕಾರ್ಯವಿಸ್ತರಣೆಗೆ ಕಾರಣರಾದರು. ವಸಂತ ಸಾಹಿತ್ಯೋತ್ಸವ, ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಅವರ ಉತ್ಸಾಹದ ಫಲ. ಹೀಗೆ ಬಿಡುವಿಲ್ಲದ ಸಾರ್ವಜನಿಕ ಜೀವನದ ಚಟುವಟಿಕೆಗಳ ನಡುವೆಯೂ ಅನೇಕ ಸಾಹಿತ್ಯ ಕೃತಿಗಳು ಹೊರಬಂದಿವೆ.

ಜೀವನಚರಿತ್ರೆ, ತತ್ವಚಿಂತನೆ, ರಾಜ್ಯ ವಿಷಯಕ ಪ್ರಸಂಗಗಳು, ಕಾವ್ಯ, ಗೇಯ ಪ್ರಬಂಧ, ನಾಟಕ, ಸಂಸ್ಕತಿ ದರ್ಶನ, ದಾರ್ಶನಿಕ ಜಿಜ್ಞಾಸೆ, ಆಧ್ಯಾತ್ಮ ಪ್ರತಿಪಾದನೆ ಹೀಗೆ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ವಿಪುಲ ಸಂಖ್ಯೆಯಲ್ಲಿ ಡಿ.ವಿ.ಜಿ ಕನ್ನಡನಾಡಿಗೆ ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು
 ೧. ಜೀವನ ಚರಿತ್ರೆ - ದಿವಾನ್ ರಂಗಾಚಾರ್ಯ, ಗೋಪಾಲಕೃಷ್ಮ ಗೋಖಲೆ
 ೨. ಕವನ ಸಂಕಲನಗಳು - ವಸಂತ ಕುಸುಮಾಂಜಲಿ, ನಿವೇದನ
 ೩. ಅನುವಾದ - ಉಮರನ ಒಸಗೆ, ಮ್ಯಾಕ್ಬೆತ್
 ೪. ಕಾವ್ಯ - ಅಂತಃಪುರದ ಗೀತೆ

ಡಿ.ವಿ.ಜಿ ಎಂದೆಂದಿಗೂ ಕನ್ನಡಿಗರ ಹೃದಯದಲ್ಲಿ ನೆಲೆಸುವಂತೆ ಮಾಡಿದ ಅವರ ಮಂಕುತಿಮ್ಮನ ಕಗ್ಗ ಕನ್ನಡ ಭಾಷೆಯ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದು. ಎಲ್ಲ ಸನ್ಮಾನಗಳನ್ನು ದೂರವಿರಿಸ ಬಯಸಿದ ಡಿ.ವಿ.ಜಿ ಯವರಿಗೆ ಸಹಜವಾಗಿಯೇ ಕೆಲವಾರು ಪ್ರಶಸ್ತಿಗಳು ಅರಸಿ ಬಂದವು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ೧೯೬೭ರಲ್ಲಿ ಶ್ರೀಮದ್ ಭಗವದ್ಗೀತಾ ತಾತ್ಪರ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೭೦ರಲ್ಲಿ ನಾಗರಿಕರಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ, ೧೯೭೪ರಲ್ಲಿ ರಾಷ್ಟ್ರಾಧ್ಯಕ್ಷರ ಪದ್ಮಭೂಷಣ ಪ್ರಶಸ್ತಿ. ತಮ್ಮ ಅಸಾಧಾರಣ ಪ್ರತಿಭೆ, ಸಾಮಾಜಿಕ ಕಳಕಳಿಯಿಂದ ಕನ್ನಡಿಗರ ಮನೆ ಮಾತಾಗಿದ್ದ ಡಿ.ವಿ.ಜಿ ೧೯೭೫ರಲ್ಲಿ ವಿಧಿವಶರಾದರು.