ವಿಶೇಷ ಸೂಚನೆ

ಶ್ರೀ ಮಾಸ್ತಿ ವೆಂಕಟೇಶ್ ಅಯ್ಯಂಗಾರ್

ಮಾಸ್ತಿ ಒಂದು ಹಿರಿಯ ಸಂಸ್ಕತಿಯ ಸಾಕಾರರೂಪ. ಎತ್ತರದ ಬದುಕು, ವಿಸ್ತಾರದ ಅನುಭವ, ಉದಾತ್ತ ವಿಚಾರ, ಅಪಾರ ದೈವ ನಂಬಿಕೆಯಿಂದ ಪರಿಪಕ್ವಗೊಂಡ ಅಸಾಧಾರಣ ವ್ಯಕ್ತಿತ್ವ. ಕಷ್ಟ ಕಂಗೆಡಿಸದ ಬದುಕಿನ ಸುಖ ದುಃಖಗಳಿಗೆ ಆರೋಗ್ಯವಾಗಿ ಸ್ಪಂದಿಸಿ, ಆದರ್ಶಪ್ರಾಯರಾದ ಮಹಾನುಭಾವರು. ಜಗತ್ತಿನ ಶ್ರೇಷ್� ಕಥೆಗಳ ಸಾಲಿನಲ್ಲಿ ನಿಲ್ಲಿಬಲ್ಲ ಸಣ್ಣ ಕಥೆಗಳನ್ನು ರಚಿಸಿ, ಸಣ್ಣಕಥೆಗಳಿಗೆ ಪರ್ಯಾಯ ಹೆಸರೇ ಮಾಸ್ತಿ ಎನಿಸಿಕೊಂಡವರು. ಕಥೆ, ಕವನ, ಕಾದಂಬರಿ, ಆತ್ಮಚರಿತ್ರೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಬದುಕಿದಂತೆ ಬರೆದವರು. ಮಾಸ್ತಿಯವರ ಕಥೆಗಳೆಂದರೆ ಒಬ್ಬ ಹಿರಿಯ ಕಿರಿಯನಿಗೆ, ಗೆಳೆಯ ಗೆಳೆಯನಿಗೆ, ತಾತ ಮೊಮ್ಮಗನಿಗೆ ಹೇಳಿದ ಆತ್ಮೀಯ ಮಾತುಗಳು. ಆದರ್ಶ ಮತ್ತು ಮೌಲ್ಯಗಳ ಪರಿಚಯ, ತಮ್ಮ ಬದುಕಿನ ಮತ್ತು ಅಧಿಕಾರದ ಅವಧಿಯಲ್ಲಿ ಬಂದುಹೋದ ಸಾಮಾನ್ಯ ಪಾತ್ರಗಳಮೂಲಕ. ಪಾತ್ರಗಳು ಬೆಳೆಯುತ್ತಲೇ ಹತ್ತಿರವಾಗುವುದು, ಆದರ್ಶವಾಗುವುದು ಅವರ ಬರವಣಿಗೆಯ ಸಾರ್ಥಕತೆ. ಸರಳ ಕಾವ್ಯಗಳಲ್ಲಿ ಸಂಗೀತದಂತೆ ಮಧುರವಾಗಿ ವಿಷಯವನ್ನು ಕಡಿಮೆ ಮಾತಿನಲ್ಲಿ ಅದೂ ಪ್ರೀತಿಯಿಂದ ಹೇಳುವ ಅವರ ಪರಿ ಕನ್ನಡ ಸಾಹಿತ್ಯದಲ್ಲಿ ಅನನ್ಯ.

ದುಡ್ಡಿರದಿದ್ದರೂ ದೊಡ್ಡಮನೆಯವರು (ಪೆರಿಯಾನ) ಎನಿಸಿಕೊಂಡ ಮನೆತನದಲ್ಲಿ, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ೬/೬/೧೮೮೬ ರಂದು ಜನಿಸಿದರು. ಬಡಗನವನ್ನು ಹೆಗಲಿಗೆ ಕಟ್ಟಿಕೊಂಡು ಹುಟ್ಟಿದ ಮಾಸ್ತಿಯವರ ಎಳೆತನವೆಲ್ಲಾ ಹೋರಾಟವೆ. ವಾರಾನ್ನದ ವಿದ್ಯಾರ್ಥಿಜೀವನ. ಅಪಾರ ಪ್ರತಿಭೆಯ ಮಾಸ್ತಿ ಓರಿಸ್ಸದಲ್ಲಿ ಮೊದಲಿಗರಾಗಿ ವಿದ್ಯಾಭ್ಯಾಸ ಮುಗಿಸಿ ೧೯೧೯ರಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ, ಹಂತ ಹಂತವಾಗಿ ಮೇಲೇರಿ ೧೯೪೪ರಲ್ಲಿ ಅಬಕಾರಿ ಕಮಿಷನರ್ ಆದರು.ಸರ್ಕಾರದ ನಿರ್ಧಾರ ತಮಗೆ ಒಪ್ಪಿಗೆಯಾಗದಿದ್ದಾಗ ನಿರ್ಯೋಚನೆಯಿಂದ ರಾಜೀನಾಮೆ ಕೊಟ್ಟರು. ಸಂಪೂರ್ಣ ಸಾಹಿತ್ಯ ಸೇವೆಗೆ ತಮ್ಮನ್ನು ತೆತ್ತುಕೊಂಡವರು.

ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ನಾಡಿನಲ್ಲಿ ಉದ್ದಗಲಕ್ಕೆ ಸಂಚರಿಸಿ ಕನ್ನಡದ ಅಭಿಮಾನ ಬೆಳೆಸಿದರು. ಅವರಿಗೆ ಸಂದ ಪ್ರಶಸ್ತಿಗಳು ಹಲವಾರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಫೆಲೋಶಿಪ್, ದಕ್ಷಿಣ ಭಾಷೆಗಳ ಸಮ್ಮೇಳನದ ಅಧ್ಯಕ್ಷತೆ ಹಾಗೂ ಅವರ ಚಿಕ್ಕವೀರ ರಾಜೇಂದ್ರ ಕಾದಂಬರಿಗಾಗಿ ಜ್ನಾನಪೀ� ಪ್ರಶಸ್ತಿ.

ಮಾಸ್ತಿ ತಾವು ಬೆಳೆಯುವುದರ ಜೊತೆಗೆ ಆಗಿನ ಕಾಲದ ಎಲ್ಲ ಲೇಖಕರಿಗೂ ಒಂದಲ್ಲ ಒಂದು ರೀತಿಯ ಸಹಾಯ ಮಾಡಿದವರು ಹಾಗೂ ಜೀವನ ಪತ್ರಿಕೆಯ ಮೂಲಕ ಅವರ ಪ್ರತಿಭೆಯನ್ನು ಬೆಳಕಿಗೆ ತಂದವರು. ಅವರ ಹೆಸರಾಂತ ಕಥೆಗಳಲ್ಲಿ ಕೆಲವು ಮೊಸರಿನ ಮಂಗಮ್ಮ, ಅಂಬಿಗನ ಹೆಂಡತಿ, ನಿಜಗಲ್ಲಿನ ರಾಣಿ, ರಂಗಪ್ಪನ ದೀಪಾವಳಿ, ಕವಿಯ ಬಾಳ ಕೊನೆಯ ದಿನ, ಬೀದಿಗಳಲ್ಲಿ ಹೋಗುವ ನಾರಿ, ಬೋಗ್ಯದ ಅಂಜಪ್ಪನ ಕೋಳಿಕತೆ, ಗೌತಮ ಹೇಳಿದ ಕತೆ ಅವರ ನೀಳ್ಗತೆ ಸುಬ್ಷಣ್ಣ ಹೆಸರುವಾಸಿಯಾದ ಕೃತಿ. ಕಾಕನಕೋಟೆ, ಶಿವಛತ್ರಪತಿ, ಉಷಾ, ಸಾವಿತ್ರಿ ಯಶೋಧರ ನಾಟಕಗಳು, ಕೊಡಗಿನ ದೊರೆಯಾದ ಚಿಕ್ಕವೀರ ರಾಜೇಂದ್ರನ ಕಾದಂಬರಿ ಐತಿಹಾಸಿಕ ಕಾದಂಬರಿಗಳಿಗೆ ಮಾರ್ಗದರ್ಶಕ ಕೃತಿ. ಇನ್ನೊಂದು ಐತಿಹಾಸಿಕ ಕಾದಂಬರಿ ಚೆನ್ನಬಸವನಾಯಕ ಮಾಸ್ತಿಯವರ ಇತಿಹಾಸ ಪ್ರಜ್ಞೆಗೆ ಸಾಕ್ಷಿ.

ಎಂದೂ ನಗೆಮಾಸದ ನಗೆಮುಖದ ಅಜ್ಜ ಮಾಸ್ತಿಯವರ ಬಗ್ಗೆ ಡಿ.ವಿ.ಜಿ. ಹೇಳಿದ ಮಾತು. "ಭಗವಂತನು ಸಾಧು ಸಜ್ಜನರಿಗೆ ತೋರುವ ಅನುಗೃಹವು ಲೋಕಾನುಗ್ರಹವಾಗುತ್ತದೆ. ವೆಂಕಟೇಶ ಅಯ್ಯಂಗಾರರು ಧನ್ಯಜೀವಿ. ಅವರು ಚಿರಂಜೀವಿಯಾಗುವಂತೆ ಭಗವಂತನು ಕೃಪೆ ಮಾಡಲಿ". ಎಂಬ ಆಶೀರ್ವಾದ ಫಲಿಸಿದೆ. ಮಾಸ್ತಿ ಕನ್ನಡಿಗರಿಗೆ ಅಮರ. ವರಕವಿ ಹೇಳಿದ್ದು ನಾನು ಬೆಳೆಯುವ ತಮ್ಮ ನೀನು ಬೆಳೆದಣ್ಣ ಅಣ್ಣನಾಗಿ, ಅಜ್ಜನಾಗಿ ಶ್ರೀನಿವಾಸ ಕನ್ನಡದ ಅಪರೂಪದ ಆಸ್ತಿ.