ವಿಶೇಷ ಸೂಚನೆ

ನಾಡು-ನುಡಿ

ವ್ಯಾಕರಣ
ಕನ್ನಡದಲ್ಲಿ ಲಿಂಗ ಮತ್ತು ವಚನಗಳು ಒಂದೇ ಬಗೆಯ ಪ್ರತ್ಯಯದಿಂದ ಸೂಚಿತವಾಗುತ್ತದೆ. ಬುದ್ಧಿ ಇದೆಯೇ ಇಲ್ಲವೇ ಎಂಬುದರ ಮೇಲೆ ಲಿಂಗವು ನಿರ್ಣೀತವಾಗುತ್ತದೆ. ಆಲೋಚಿಸುವ ಶಕ್ತಿಯುಳ್ಳದೆಲ್ಲ ಮಹತ್ ವರ್ಗಕ್ಕೂ ಉಳಿದುವೆಲ್ಲ ಅಮಹತ್ ವರ್ಗಕ್ಕೂ ಸೇರ್ಪಡೆಯಾಗುತ್ತದೆ. ಮಹತ್ ವರ್ಗದಲ್ಲಿ ಮಾತ್ರ ಏಕವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಭೇದಗಳುಂಟು. ಬಹುವಚನದಲ್ಲಿ ಭೇದವಿಲ್ಲ. ಅಮಹತ್ ಬಹುತೇಕ ಎಲ್ಲವೂ ನಪುಂಸಕಲಿಂಗ. ಇದರಿಂದ ಕೆಲವೊಮ್ಮೆ ಸಂಸ್ಕತ ಸ್ವೀಕರಣಗಳ ಲಿಂಗದ ವಿಷಯದಲ್ಲಿ ಗೊಂದಲವೇರ್ಪಡುವ ಸಾಧ್ಯತೆಗಳೂ ಇವೆ. ಉದಾಹರಣೆಗೆ, ಸಂಸ್ಕತದಲ್ಲಿ `ಸೂರ್ಯ' ಪದವು ಪುಲ್ಲಿಂಗ; ಆದರೆ ಆ ಪದವು ಕನ್ನಡಕ್ಕೆ ಸ್ವೀಕೃತವಾಗಿ ಬಂದಾಗ, ಅದನ್ನು ಪುಲ್ಲಿಂಗದಲ್ಲೂ ಬಳಸಬಹುದು. ನಪುಂಸಕದಲ್ಲೂ ಬಳಸಬಹುದು. ಪುಲ್ಲಿಂಗದಲ್ಲಿ ಏಕೆಂದರೆ ಅದು ಮೂಲತಃ ಸಂಸ್ಕತ ಪದ; ನಪುಂಸಕ ಲಿಂಗದಲ್ಲಿ ಏಕೆಂದರೆ ಅದನ್ನು ಸ್ವೀಕರಿಸುವ ಕನ್ನಡ ವ್ಯಾಕರಣದ ಪ್ರಕಾರ ಅದು ಅಮಹತ್ ಪದ, ಆದ್ದರಿಂದ ನಪುಂಸಕಲಿಂಗ. ಸೂರ್ಯ ಅರ್ಥದ `ಹೊತ್ತು' ಎಂಬ ದೇಶ್ಯ ಪದ ಕನ್ನಡದಲ್ಲಿ ನಿಯತವಾಗಿ ನಪುಂಸಕ.
ಕನ್ನಡದಲ್ಲಿ ಪ್ರಥಮಾ ವಿಭಕ್ತಿ ಇಲ್ಲ; ಲಿಂಗ/ವಚನ ಸೂಚಕ ಪ್ರತ್ಯಯ ಸಮೇತವಾದ ಪ್ರಕೃತಿರೂಪವೇ ಪ್ರಥಮಾ ವಿಭಕ್ತಿಯಲ್ಲಿ ಬಳಕೆಯಾಗುತ್ತದೆ. ಆ ಭಾಷೆಯಲ್ಲಿ ಸ್ಪಷ್ಟವಾಗಿ ದ್ವಿತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿಗಳಲ್ಲದೆ ಸಹವಿಭಕ್ತಿಗೂ (Sociative case) ಸ್ಪಷ್ಟ ಪ್ರತ್ಯಯಗಳಿವೆ. ತೃತೀಯೆಯನ್ನು ಪಂಚಮಿ ವಿಭಕ್ತಿ ಪ್ರತ್ಯಯದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಲಿಂಗ, ವಚನ ಯಾವುದೇ ಆಗಿದ್ದರೂ ಎಲ್ಲಕ್ಕೂ ಒಂದೇ ಬಗೆಯ ವಿಭಕ್ತಿ ಪ್ರತ್ಯಯಗಳ ಸೇರ್ಪಡೆಯಾಗುತ್ತವೆ. ವಿಭಕ್ತಿ ಪ್ರತ್ಯಯಗಳನ್ನು ಲಿಂಗ ಅಥವಾ ವಚನ ಸೂಚಕ ಪ್ರತ್ಯಯಗಳ ಮೇಲೆ ಹತ್ತಿಸಲಾಗುತ್ತದೆ.
ಕರ್ತೃಪದಕ್ಕನುಗುಣವಾದ ಲಿಂಗ ವಚನಗಳನ್ನು ಕ್ರಿಯಾಪದವು ಪಡೆದಿರುತ್ತದೆ. ಧಾತು ಕಾಲಸೂಚಕ ಲಿಂಗ/ವಚನ ಸೂಚಕ ಇದು ಕ್ರಿಯಾಪದದ ರಚನೆ. ಕಾಲ ಇರುವುದು ಎರಡೇ ಭೂತ ಮತ್ತು ಭೂತೇತರ. ವರ್ತಮಾನ ಮತ್ತು ಭವಿಷ್ಯಗಳನ್ನು ಹೇಳಲು ಬಳಕೆಯಾಗುವ ರೂಪ ಒಂದೇ. ಎಲ್ಲ ವಾಕ್ಯರಚನಾತ್ಮಕ ಸಂಬಂಧಗಳನ್ನು ಪ್ರತ್ಯಯಗಳ ಮೂಲಕ ವ್ಯಕ್ತಮಾಡುವುದರಿಂದ, ಇಂಗ್ಲಿಷಿನಲ್ಲಿ ಇರುವ ಪದಾನುಕ್ರಮಣಿಕೆ (Word order) ಕನ್ನಡದಲ್ಲಿಲ್ಲ. ಕನ್ನಡದಲ್ಲಿ ``ರಾಮ ರಾವಣನನ್ನು ಕೊಲ್ಲುತ್ತಾನೆ'' ಎಂಬ ವಾಕ್ಯದಲ್ಲಿನ ಪದಗಳನ್ನು ಯಾವ ಕ್ರಮದಲ್ಲಿ ಬೇಕಾದರೂ ಬರೆಯಬಹುದು. ಸಾಧಾರಣ ಕ್ರಮವೆಂದರೆ ಕರ್ತೃಪದ + ಕರ್ಮಪದ + ಕ್ರಿಯಾಪದ. ಆಡುಮಾತಿನಲ್ಲಿ ಕರ್ತೃ, ಕರ್ಮಪದಗಳು ಸ್ಥಾನಗಳನ್ನು ಬದಲಾಯಿಸಿಕೊಳ್ಳಬಹುದು.
ಶಬ್ದಕೋಶ
ಕನ್ನಡದ ಮೂಲಭೂತ ಶಬ್ದಕೋಶ ದೇಶೀಯ ಅಥವಾ ದ್ರಾವಿಡವೇ ಆಗಿದೆ. ಜೊತೆಗೆ, ಅದು ಇಂಡೋ ಆರ್ಯನ್‍ನಿಂದ, ವಿಶೇಷವಾಗಿ ಸಂಸ್ಕತದಿಂದ ಬಹುಸಂಖ್ಯೆಯ ಶಬ್ದಗಳನ್ನು ಸ್ವೀಕರಿಸಿದೆ. ಸರಳವಲ್ಲದ ಒಂದು ಕನ್ನಡ ವಾಕ್ಯವನ್ನು ಸಂಸ್ಕತದ ಸಹಾಯವಿಲ್ಲದೆ ಬರೆಯಲು ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ಸ್ವೀಕರಣ ನಡೆದಿದೆ. ಪ್ರಾಚೀನ ವ್ಯಾಕರಣಕಾರರು ಮಾರ್ಪಾಟಿಲ್ಲದೆ ಅಥವಾ ಕನ್ನಡಕ್ಕೆ ಹೊಂದಿಕೊಳ್ಳುವಂತಹ ಮಾರ್ಪಾಟಿನೊಡನೆ ಯಾವುದೇ ಸಂಸ್ಕತ ಪದವನ್ನೂ ಸ್ವೀಕರಿಸಲು ಸ್ವಾತಂತ್ರ ್ಯವನ್ನು ಕೊಟ್ಟಿದ್ದಾರೆ. ಆದರೆ, ಸಾಹಿತ್ಯ ರಚನೆಗಳಲ್ಲಿ ಸಂಸ್ಕತದ ವಿಪರೀತ ಬಳಕೆ ಕಂಡಾಗಲೆಲ್ಲ, ಆ ಪ್ರವೃತ್ತಿಯ ವಿರುದ್ಧವಾಗಿಯೂ ಹಿಂದೆ ಧ್ವನಿಯನ್ನೂ ಎತ್ತಲಾಗಿದೆ. ಸಂಸ್ಕತದಂತೆಯೇ ಪ್ರಾಕೃತ, ಮರಾಠಿ, ಹಿಂದೂಸ್ತಾನಿ, ಅರೇಬಿಕ್, ಪೆÇೀರ್ಚುಗೀಸ್ ಇವೇ ಮೊದಲಾದ ಭಾಷೆಗಳಿಂದಲೂ ಆಧುನಿಕ ಕಾಲದಲ್ಲಿ ವಿಶೇಷವಾಗಿ ಇಂಗ್ಲಿಷಿನಿಂದಲೂ ಕನ್ನಡವು ಬಹುಸಂಖ್ಯೆಯಲ್ಲಿ ಪದಗಳನ್ನು ಸ್ವೀಕರಿಸಿದೆ. ಕನ್ನಡವು `ಆಧುನೀಕೃತ'ಗೊಳ್ಳಲು ಇಂಗ್ಲಿಷ್ ಬಹುಮಟ್ಟಿಗೆ ಕಾರಣ. ತಾಂತ್ರಿಕ ಅಥವಾ ವೈಜ್ಞಾನಿಕ ಬರಹಗಳಲ್ಲಿ ಇಂಗ್ಲಿಷ್ ಪದಗಳನ್ನು ಇಲ್ಲವೇ ಅನುವಾದಿಸಿ, ಕೆಲವೊಮ್ಮೆ ಅಲ್ಪಮಾರ್ಪಾಟಿನೊಂದಿಗೆ ಸ್ವೀಕರಿಸಲಾಗುತ್ತಿದೆ. ಅನುವಾದ ಮಾಡಿಕೊಳ್ಳುವ ಸಂದರ್ಭದಲ್ಲಿ ಆಗ ಸಂಸ್ಕತವು ಅಂತಹ ಪದಗಳನ್ನು ಒದಗಿಸುವ ಒಂದು ದೊಡ್ಡ ಆಕರವಾಗಿರುತ್ತದೆ.