ವಿಶೇಷ ಸೂಚನೆ

ನಾಡು-ನುಡಿ

ಕನ್ನಡ ನಾಡು : ಇತಿಹಾಸ
ಕರ್ನಾಟಕ ರಾಜ್ಯವು ಪ್ರಾಚೀನವೂ ವೈಶಿಷ್ಟ್ಯಪೂರ್ಣವೂ ಆದ ಇತಿಹಾಸವನ್ನು ಹೊಂದಿದೆ.
ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಅಲ್ಲಿದೊರೆಯುವ ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕಡತ ಮತ್ತು ಬಖೈರುಗಳು ಹಾಗೂ ಸಾಹಿತ್ಯ ಕೃತಿಗಳು ನೆರವಾಗುತ್ತವೆ. ಇಂತಹ ದಾಖಲೆಗಳಿಲ್ಲದ, ಕೇವಲ ಪಳೆಯುಳಿಕೆಗಳ ಮೂಲಕವೇ ತಿಳಿಯಬೇಕಾದ ಕಾಲವೊಂದಿದೆ. ಅದು ಇತಿಹಾಸಪೂರ್ವ ಅಥವಾ ಪ್ರಾಗಿತಿಹಾಸ ಕಾಲ.
ಕರ್ನಾಟಕದಲ್ಲೂ ಪ್ರಾಗಿತಿಹಾಸ ಕಾಲದಲ್ಲಿ ಜನ ವಾಸಿಸುತ್ತಿದ್ದರು. ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಉತ್ಖನನಗಳ ಮೂಲಕ ಆ ಕಾಲದ ಜನರ ಬದುಕಿನ ಬಗ್ಗೆ ತಿಳಿಯಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗ ಮತ್ತು ಲೋಹಯುಗಗಳಲ್ಲಿ ಮಾನವ ಜೀವಿಸಿದ್ದುದಕ್ಕೆ ಕುರುಹಾಗಿ ಅನೇಕ ಪ್ರಾಗಿತಿಹಾಸ ಕಾಲದ ಜನವಸತಿಯ ನೆಲೆಗಳು ದೊರೆತಿವೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ, ಕಾವೇರಿ ನದಿಗಳ ಬಯಲು ಪ್ರದೇಶಗಳಲ್ಲಿ ಮತ್ತು ಕೆಲವು ಬೆಟ್ಟ, ಗುಡ್ಡಗಳ ತಪ್ಪಲಿನಲ್ಲಿ ಪ್ರಾಗಿತಿಹಾಸ ಕಾಲದ ಮಾನವ ನೆಲೆಸಿ, ಬೇಟೆ ಪಶುಪಾಲನೆಗಳಲ್ಲಿ ನಿರತನಾಗಿ ಬದುಕಿದ್ದನ್ನು ಅನೇಕ ವಿದ್ವಾಂಸರು ಪತ್ತೆಹಚ್ಚಿದ್ದಾರೆ. ಬೃಹತ್ ಶಿಲಾಯುಗದ ಕಾಲದಲ್ಲಿ ಕಬ್ಷಿಣದ ಆಯುಧಗಳ ಉಪಯೋಗವನ್ನು ಚೆನ್ನಾಗಿ ತಿಳಿದಿದ್ದ ಜನರು ಸತ್ತವರನ್ನು ಸಮಾಧಿ ಮಾಡುತ್ತಿದ್ದ ಅಥವಾ ಅಸ್ಥಿಗಳನ್ನು ರಕ್ಷಿಸಿಡುತ್ತಿದ್ದ ಗೋರಿಗಳೇ ಪಾಂಡವರ ಗುಡಿಗಳು ಅಥವಾ ಮೋರಿಯರ ಮನೆಗಳು ಎಂದು ಗುರುತಿಸಲ್ಪಟ್ಟಿವೆ. ಇವೇ ಮೆಗಾಲಿಥ್‍ಗಳು.
ಮೌರ್ಯರು
ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಅಶೋಕನ ಶಾಸನಗಳು ದೊರೆತಿವೆ. ಧರ್ಮ ಲಿಪಿಗಳೆಂದೇ ಪ್ರಸಿದ್ಧಿ ಪಡೆದಿರುವ ಅಶೋಕನ ಶಾಸನಗಳು ಬ್ರಾಹ್ಮೀಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿದ್ದು, ಇವು ದೊರೆತಿರುವ ಸ್ಥಳಗಳು ಮೌರ್ಯ ಸಾಮ್ರಾಜ್ಯದ ಗಡಿ ಎಂದು ಪರಿಗಣಿತವಾಗಿವೆ. ಕ್ರಿ.ಪೂ. 3ನೆಯ ಶತಮಾನದ ವೇಳೆಗೆ, ಅಂದರೆ ಅಶೋಕನ ಕಾಲಕ್ಕಾಗಲೇ ಕರ್ನಾಟಕವು ಮೌರ್ಯ ಸಾಮ್ರಾಜ್ಯದ ಗಡಿ ಪ್ರಾಂತವಾಗಿತ್ತು ಎಂದು ತಿಳಿಯುತ್ತದೆ. ಅಶೋಕನಿಗೂ ಮೊದಲೇ ಅವನ ತಾತ ಚಂದ್ರಗುಪ್ತನು ಭದ್ರಬಾಹು ಮುನಿಗಳ ಜೊತೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ಅಲ್ಲೇ ಸಮಾಧಿ ಆದನೆಂದು ಶಾಸನವೊಂದು ಸೂಚಿಸುತ್ತದೆ. ಅಶೋಕನು ಕರ್ನಾಟಕದ ವನವಾಸಕ(ಬನವಾಸಿ)ಕ್ಕೆ ಬೌದ್ಧಧರ್ಮ ಪ್ರಚಾರಕರನ್ನೂ ಕಳುಹಿಸಿದ್ದ.
ಶಾತವಾಹನರು
ಮೌರ್ಯರ ನಂತರ ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಶ. 3ನೆಯ ಶತಮಾನದವರೆಗೆ ಕರ್ನಾಟಕದ ಬಹುಭಾಗಗಳನ್ನು ಶಾತವಾಹನರು ಆಳಿದರು. ಅವರ ಕಾಲದಲ್ಲಿ ಸನ್ನತಿಯು ಒಂದು ಪ್ರಮುಖ ಬೌದ್ಧ ನೆಲೆಯಾಗಿತ್ತು. ಶಾತವಾಹನ ವಂಶದ ಗೌತಮೀಪುತ್ರ ಶಾತಕರ್ಣಿಯ ಕಾಲದ ನಾಣ್ಯಗಳು ಬನವಾಸಿಯಲ್ಲಿ ದೊರೆತಿವೆ. ಗೌತಮೀಪುತ್ರ ಶಾತಕರ್ಣಿಯ ಮಗ ವಾಸಿಷ್ಠೀಪುತ್ರ ಪುಳುಮಾವಿಯ ಕಾಲದ ನಾಣ್ಯಗಳು ಚಿತ್ರದುರ್ಗದ ಸಮೀಪವಿರುವ ಚಂದ್ರವಳ್ಳಿಯಲ್ಲಿ ದೊರೆತಿವೆ. ಸಾತವಾಹನರ ಶಾಖೆಯವರಾದ ಶಾತಕರ್ಣಿಗಳು ಮತ್ತು ಚುಟುಗಳೂ ಸಹ ಕರ್ನಾಟಕವನ್ನಾಳಿದರು.
ಕದಂಬರು
ಶಾತವಾಹನರ ನಂತರ ಕರ್ನಾಟಕದ ಉತ್ತರಭಾಗವನ್ನು ಸ್ವತಂತ್ರವಾಗಿಯೇ ಆಳಿದ ಪ್ರಥಮ ಕನ್ನಡ ರಾಜವಂಶವೇ `ಕದಂಬ ವಂಶ'. ಮಯೂರವರ್ಮ ಆ ವಂಶದ ಮೊದಲ ದೊರೆ. ಬನವಾಸಿಯು ಕದಂಬರ ರಾಜಧಾನಿ. ಆದ್ದರಿಂದ ಇವರನ್ನು ಬನವಾಸಿಯ ಕದಂಬರು ಎಂದೇ ಗುರುತಿಸಲಾಗಿದೆ. ತಾಳಗುಂದ ಅವರ ಕಾಲದ ಪ್ರಮುಖ ಸ್ಥಳ. ಕಾಂಚಿಯ ಘಟಿಕಾಸ್ಥಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಯೂರವರ್ಮನಿಗೆ, ಅಲ್ಲಿಯ ಪಲ್ಲವ ಅಶ್ವಸಂಸ್ಥೆಯವರೊಡನೆ ಜಗಳವಾಗಿ, ಸ್ವತಂತ್ರ ರಾಜನಾಗುವ ಛಲ ಹುಟ್ಟಿತು. ಅಂತೆಯೇ ಬೃಹದ್ಭಾಣರನ್ನು ಮತ್ತು ಪಲ್ಲವರನ್ನು ಸೋಲಿಸಿ, ಪಲ್ಲವರಿಂದ ಮಾನ್ಯತೆ ಪಡೆದು ಸ್ವತಂತ್ರ ರಾಜನಾಗಿ, ರಾಜ್ಯವಾಳಿದ ಕದಂಬ ಮಯೂರವರ್ಮ (ಕ್ರಿ.ಶ325ರಿಂದ 345ರ ವರೆಗೆ) ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯ ಕೆರೆಯನ್ನು ದುರಸ್ತಿ ಮಾಡಿಸಿದನೆಂದು, ಅಲ್ಲೇ ಇರುವ ಅವನ ಶಾಸನ ದಾಖಲಿಸಿದೆ. ಮಯೂರವರ್ಮನ ನಂತರ ಕಂಗವರ್ಮ, ಭಗೀರಥ ಮತ್ತು ರಘು ಒಬ್ಷರ ನಂತರ ಒಬ್ಷರು ಕ್ರಿ.ಶ. 405ರ ವರೆಗೆ ಆಳ್ವಿಕೆ ನಡೆಸಿದರು. ರಘುವಿನ ತಮ್ಮ ಕಾಕುಸ್ಥವರ್ಮ(ಕ್ರಿ.ಶ. 405 - 430)ನ ಕಾಲದಲ್ಲಿ ಕದಂಬ ರಾಜ್ಯ ವಿಸ್ತಾರವಾಯಿತು. ದಕ್ಷಿಣದ ಪಲ್ಲವರು, ಗಂಗರು ಮತ್ತು ಉತ್ತರದ ಗುಪ್ತರೊಡನೆ ವೈವಾಹಿಕ ಸಂಬಂಧ ಬೆಳೆಸಿದ ಕಾಕುಸ್ಥವರ್ಮನ ಕಾಲದ ಹಲ್ಮಿಡಿ ಶಾಸನವು ಈವರೆಗೆ ದೊರೆತಿರುವ ಮೊದಲ ಕನ್ನಡ ಶಾಸನವಾಗಿದೆ. ತಾಳಗುಂದದಲ್ಲಿ ಒಂದು ಕೆರೆಯನ್ನೂ ಕಟ್ಟಿಸಿದ ಕಾಕುಸ್ಥವರ್ಮನ ನಂತರ ಕದಂಬ ಸಾಮ್ರಾಜ್ಯವು ಎರಡು ಭಾಗಗಳಾಗಿ ಒಡೆದು ಹೋಗಿ, ಒಂದು ಭಾಗವನ್ನು ಅವನ ಮಗ 1ನೆಯ ಕೃಷ್ಣವರ್ಮನು ತ್ರಿಪರ್ವತದಿಂದಲೂ, ಮತ್ತೊಂದು ಭಾಗವನ್ನು ಮತ್ತೊಬ್ಷ ಮಗ ಶಾಂತಿವರ್ಮನು ಬನವಾಸಿಯಿಂದಲೂ ಆಳಿದರು. ಶಾಂತಿವರ್ಮನ ಮಗ ಮೃಗೇಶವರ್ಮನು ಪಲ್ಲವರು ಮತ್ತು ಗಂಗರ ಮೇಲೆ ಯುದ್ಧ ಮಾಡಿ ರಾಜ್ಯ ವಿಸ್ತಾರ ಮಾಡಿದ. ಅವನ ಕಾಲದಲ್ಲಿ ಹಲಸಿ (ಬೆಳಗಾವಿ ಜಿಲ್ಲೆ)ಯು 2ನೆಯ ರಾಜಧಾನಿಯಾಯಿತು. ಮೃಗೇಶವರ್ಮನ ಮಗ ರವಿವರ್ಮನು ಗುಡ್ನಾಪುರದಲ್ಲಿ ಕಾಮಜಿನಾಲಯವನ್ನು ಕಟ್ಟಿಸಿದ. ತ್ರಿಪರ್ವತದಿಂದ ಆಳಿದ ಕದಂಬರ ಮತ್ತೊಂದು ಶಾಖೆಯು ಮತ್ತೆ 2ನೆಯ ಕೃಷ್ಣವರ್ಮನ ಕಾಲದಲ್ಲಿ ಮೂಲ ಶಾಖೆಗೆ ಸೇರಿತು. ಇವರು ಕ್ರಿ.ಶ. 325ರಿಂದ 540ರ ವರೆಗೆ ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರದೇಶವನ್ನು ಆಳಿದರು. ಕದಂಬರು ಹಲವಾರು ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದರು. ಕೆರೆಗಳನ್ನು ಕಟ್ಟಿಸಿದರು. ಕರ್ನಾಟಕ ಸಾಮ್ರಾಜ್ಯಕ್ಕೆ ರಾಜಕೀಯವಾದ ಮತ್ತು ಸಾಂಸ್ಕತಿಕವಾದ ಭದ್ರಬುನಾದಿಯನ್ನು ಹಾಕಿದ ಕೀರ್ತಿ ಕದಂಬರಿಗೆ ಸಲ್ಲುತ್ತದೆ.