ವಿಶೇಷ ಸೂಚನೆ

ಗುಬ್ಬಿ ವೀರಣ್ಣ


ಕನ್ನಡ ರಂಗಭೂಮಿಯ ಚಲಿಸುವ ವಿಶ್ವವಿದ್ಯಾಲಯ, ವರ್ಸಟೈಲ್ ಕಮೆಡಿಯನ್, ನಾಟಕರತ್ನ, ಹಾಸ್ಯಕಲಾ ಪ್ರವೀಣ, ರಸಿಕ ಶಿಖಾಮಣಿ, ವಿನೋದ ರತ್ನಾಕರ ಮುಂತಾದ ಬಿರುದುಗಳ ಒಡೆಯ ಡಾ||ಗುಬ್ಬಿವೀರಣ್ಣನವರು ಜನಿಸಿದ್ದು ೧೮೯೧ರಲ್ಲಿ. ತಂದೆ ಹಂಪಣ್ಣ, ತಾಯಿ ರುದ್ರಮ್ಮ. ತಂದೆ ಹಂಪಣ್ಣನವರ ಮರುಮದುವೆಯಿಂದಾಗಿ ತಾಯಿ ಮಕ್ಕಳು ಅನಾಥರಾದರು. ಜೀವನ ಸಾಗಿಸಲು ಬಾಲಕ ವೀರಣ್ಣ ಗುಬ್ಬಿಯ ಶ್ರೀ ಚೆನ್ನಬಸವೇಶ್ವರ ಥಿಯೇಟ್ರಿಕಲ್ ಕಂಪನಿಯಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡರು. ಆಟ - ಪಾ� ಗಳಲ್ಲಿ ಮೈ ಮರೆಯಬೇಕಾದ ಬಾಲಕ ಎರಡು ಹೊತ್ತಿನ ತುತ್ತಿಗಾಗಿ ಊರೂರು ಸುತ್ತುವಂತಾಯಿತು. ಆಗಲೇ ಅವರು ಬಾಲನಟರಾಗಿ ರಂಗ ಪ್ರವೇಶಿಸಿದರು. ಮುಂದೆ ಕಂಪನಿಯ ಯಜಮಾನರ ಸಾವಿನ ನಂತರ, ಗಣ್ಯನಾಗರಿಕರ ಒತ್ತಾಯಕ್ಕೆ ಮಣಿದು ಕಂಪನಿಯ ಮಾಲಿಕರಾದರು. ಅಷ್ಟು ಹೊತ್ತಿಗಾಗಲೇ ಅಕ್ಷರಾಭಾಸ್ಯದ ಜೊತೆಗೆ, ರಂಗಭೂಮಿಗೆ ಬೇಕಾದ ಸಂಗೀತಾಭ್ಯಾಸವನ್ನು ಮಾಡಿದ್ದರು.

ಆ ದಿನಗಳಲ್ಲಿ ದೋಷಪೂರ್ಣವಾಗಿದ್ದ ರಂಗಭೂಮಿಯ ತಂತ್ರಗಳನ್ನು ಸರಿಪಡಿಸುವ ನಿರ್ಧಾರ ಕೈಕೊಂಡ ವೀರಣ್ಣನವರು ನಾಟಕವನ್ನು ಏಕಪಾತ್ರಾಭಿನಯವಾಗಿಸದೆ, ಎಲ್ಲ ಪಾತ್ರಗಳ ಪೋಷಣೆಗೆ ಒತ್ತು ಕೊಟ್ಟು ನಾಟಕಗಳಿಗೆ ಜೀವ ತುಂಬಿದರು. ಇದರಿಂದ ಜನರಲ್ಲಿ ಗುಬ್ಷಿ ಕಂಪನಿಯ ಯಾವುದೇ ನಾಟಕಗಳಿಗೆ ಕಾಸು ಕೊಟ್ಟು ಹೋಗುವವರಿಗೆ ಮೋಸವಿಲ್ಲ ಎಂಬ ವಿಶ್ವಾಸ ಬೆಳೆಯಿತು.

ಸಿನಿಮಾ ಗಾಳಿಯಿಂದಾಗಿ, ಹೊಸ ವೈಚಿತ್ರ್ಯಕ್ಕೆ ಜನ ಆಕರ್ಷಿತರಾಗುತ್ತಿದ್ದ ಆ ಕಾಲದಲ್ಲಿ, ವೀರಣ್ಣನವರು ಹೊಸ ಹೊಸ ನಾಟಕಗಳಿಂದ, ಅವುಗಳ ಪಾತ್ರಕ್ಕೆ ತಕ್ಕ ಕಲಾವಿದರಿಂದ, ನಾಟಕಕ್ಕೆ ತಕ್ಕ ಪರದೆ, ಸೀನರಿ ಸೆಟ್ಗಳಿಂದ, ಹೊಸ ಹೊಸ ರಂಗತಂತ್ರಗಳ ಪ್ರಯೋಗದಿಂದ ರಂಗಭೂಮಿಯತ್ತ ಪ್ರೇಕ್ಷಕರನ್ನು ಆಕಷರ್ಿಸುವಲ್ಲಿ ಯಶಸ್ವಿಯಾದರು. ನಾಟಕದಿಂದ ನಾಟಕಕ್ಕೆ ಹೊಸ ಅನುಭವ ನೀಡುತ್ತಿದ್ದ ವೀರಣ್ಣನವರು ನಾಡಿನ ಒಳ - ಹೊರಗೆ ತಮ್ಮ ನಾಟಕಗಳನ್ನು ಪ್ರದರ್ಶಿಸಿ, ಭಾಷೆ - ಪ್ರಾಂತ್ಯದ ಗಡಿ ಮೀರಿ ನಿಂತು ಜಯಭೇರಿ ಭಾರಿಸಿದರು.

ಉತ್ತಮ ಫಲ ಪಡೆಯಲು ಉತ್ತಮ ಬೀಜ ಬಿತ್ತಬೇಕೆಂಬುದನ್ನು ಮನಗಂಡಿದ್ದ ವೀರಣ್ಣನವರೂ, ಶಿವರಾಮಕಾರಂತ, ಬೆಳ್ಳಾವೆ ನರಹರಿ ಶಾಸ್ತ್ರಿ, ಎ. ಪುಟ್ಟಸ್ವಾಮಯ್ಯ, ಹುಣಸೂರು ಕೃಷ್ಣಮೂರ್ತಿಯವರಿಂದ ನಾಟಕಗಳನ್ನು ಬರೆಯಿಸಿ ಪ್ರದರ್ಶಿಸಿದರು. ನಾಟಕ ಕ್ಷೇತ್ರದಲ್ಲಿ ಇವರ ಸಮ ಬೇರೊಬ್ಷರಿಲ್ಲ ಎನ್ನುವಾಗಲೇ ಇವರು ಸಿನಿಮಾದತ್ತ ಒಲವು ತೋರಿದರು. ಸುಭದ್ರ, ಹೇಮರೆಡ್ಡಿಮಲ್ಲಮ್ಮ, ಗುಣಸಾಗರಿ ಮುಂತಾದ ಟಾಕಿ ಚಿತ್ರಗಳೂ ಸೇರಿದಂತೆ ಒಟ್ಟು ೧೩ ಕನ್ನಡ, ತಮಿಳು ಚಿತ್ರಗಳನ್ನು ನಿರ್ಮಿಸಿದರು. ಅಷ್ಟೇ ಅಲ್ಲದೆ, ಪ್ರಥಮ ಬಾರಿಗೆ ಕನ್ನಡಿಗನೊಬ್ಷ ಇಂಗ್ಲೀಷಿನಲ್ಲಿ ಚಿತ್ರ ನಿರ್ಮಿಸಿದ ಹಿರಿಮೆಯೂ ಇವರದು.

ವೀರಣ್ಣನವರ ಕಲೆಯ ಸಾಧನೆಗಾಗಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ರಂಗಭೂಮಿ ಇರುವವರೆಗೂ ಚಿರಂಜೀವಿಯಾಗಿರುವ ವೀರಣ್ಣನವರು ತಮ್ಮ ೮೧ನೇ ವಯಸ್ಸಿನಲ್ಲಿ ೧೯೭೨ರ ಅಕ್ಟೋಬರ್ ೧೮ರಂದು ದೈವಾಧೀನರಾದರು.