ವಿಶೇಷ ಸೂಚನೆ

ಟಿ. ಚೌಡಯ್ಯ


ತಮ್ಮ ಅದ್ಭುತ ಪಿಟೀಲು ವಾದನದಿಂದ ಕರ್ನಾಟಕಕ್ಕೆ ಕೀರ್ತಿ ತಂದ ಟಿ.ಚೌಡಯ್ಯನವರು ಜನಿಸಿದ್ದು ೧೮೯೪ರ ಜನವರಿ ೧ ರಂದು ಮೈಸೂರು ಸಮೀಪದ ತಿರಮಕೂಡಲು ನರಸೀಪುರದಲ್ಲಿ. ತಂದೆ ಅಗಸ್ತೇಗೌಡರು, ತಾಯಿ ಸುಂದರಾಂಬಿಕೆ.
ಬಾಲಕ ಚೌಡಯ್ಯನ ಸಂಗೀತದ ಮೂಲ ಸೆಳೆತ ನರಸೀಪುರದ ಅಗಸ್ತೇಶ್ವರ ದೇವಾಲಯದ ಬಾಗಿಲ ಬಳಿ ಕಂಬವೊಂದರಲ್ಲಿದ್ದ ಶಿಲಾಬಾಲಿಕೆಯ ಕೈಯಲ್ಲಿದ್ದ ಧನುರ್ವೀಣೆ. ಸಂಗೀತದ ಗುಂಗಿನಿಂದ ಮಗನ ವಿದ್ಯಾಭ್ಯಾಸ ಕುಂಠಿತವಾಗುವುದೆಂದು ತಂದೆ ತಾಯಿಗಳು ಆತಂಕದಲ್ಲಿದ್ದಾಗ, ಬಾಲಕನ ಕಂಠ ಮಾಧುರ್ಯಕ್ಕೆ ಮೆಚ್ಚಿದ ಸೋಸಲೆ ವ್ಯಾಸರಾಯ ಮಠ ದ ಸ್ವಾಮಿಗಳು "ಸಂಗೀತವೂ ವಿದ್ಯೆ, ಮಕ್ಕಳ ಅಭಿರುಚಿಗೆ ತಕ್ಕಂಥ ವಿದ್ಯೆ ಕಲಿಸಬೇಕಾದದ್ದು ತಂದೆ - ತಾಯಿಗಳ ಕರ್ತವ್ಯ" ಎಂದು ಬುದ್ಧಿ ಹೇಳಿದರು. ಆಗ ಚೌಡಯ್ಯನವರಿಗೆ ಸುಬ್ಬಣ್ಣ ಹಾಗೂ ರಾಮಣ್ಣ ಎಂಬ ಗುರುಗಳಿಂದ ಸಂಗೀತ ಪಾಠ ಪ್ರಾರಂಭವಾಯಿತು.

ನಂತರ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದ ಬಿಡಾರಂ ಕೃಷ್ಣಪ್ಪನವರಲ್ಲಿ, ಚೌಡಯ್ಯನವರು ಹೆಚ್ಚಿನ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ತಮ್ಮ ಶಿಷ್ಯ ತಮ್ಮನ್ನು ಮೀರಿಸುವಂತಾಗಬೇಕೆಂದು, ಸತತ ಎಂಟು ವರ್ಷ ಪಿಟೀಲು ವಾದನ ತರಬೇತಿ ನೀಡಿ, ಅನೇಕ ಸಲ ಶಿಷ್ಯನೊಂದಿಗೆ ಸಾರ್ವಜನಿಕ ವೇದಿಕೆಯ ಮೇಲೆ ಕಾರ್ಯಕ್ರಮ ನೀಡಿದರು. ಇಂಥ ಕಾರ್ಯಕ್ರಮಗಳಲ್ಲಿ ತಪ್ಪು ಮಾಡಿದ ಶಿಷ್ಯನಿಗೆ ಕಪಾಳಮೋಕ್ಷವಾಗಿದ್ದೂ ಉಂಟು. ಚೌಡಯ್ಯನವರು ಗುರುಗಳ ಶಿಕ್ಷೆಯನ್ನು ಪ್ರಸಾದವೆಂದು ತಿಳಿದು ತಮ್ಮ ಸಾಧನೆಯನ್ನು ಮುಂದುವರೆಸಿ, ದಕ್ಷಿಣ ಭಾರತದುದ್ದಕ್ಕೂ ಪ್ರಸಿದ್ಧಿ ಪಡೆದರು. ಮುಸುರಿ ಸುಬ್ರಮಣ್ಯಂ ಹಾಗೂ ಚೌಡಯ್ಯನವರ ಜೋಡಿ ಆ ಕಾಲದ ಸಂಗೀತ ರಸಿಕರ ಮನ ಸೊರೆಗೊಂಡಿತ್ತು.

ಸದಾ ಹೊಸ ಅನ್ವೇಷಣೆಯ ತವಕದಿಂದ ತುಡಿಯುತ್ತಿದ್ದ ರಾಯರು, ಶಿಷ್ಯಂದಿರಾದ ಸೋಹನಕುಮಾರಿ ಹಾಗೂ ಮೋಹನಕುಮಾರಿಯವರ ಜೊತೆಗೂಡಿ ಹಾಡುವುದರೊಂದಿಗೆ ಸುಗಮ ಸಂಗೀತಕ್ಕೆ, ಜಾನಪದ ಗೀತೆಗಳಿಗೆ ಹೊಸ ಬೆಡಗು ನೀಡುವುದರಲ್ಲಿ ಯಶಸ್ವಿಯಾದರು. ನಾಡಿನ ಉದ್ದಗಲಕ್ಕೂ ಹುಯಿಲಗೋಳ ನಾರಾಯಣರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಹಾಡುವ ಮೂಲಕ ಕರ್ನಾಟಕ ಏಕೀಕರಣಕ್ಕೆ ತಮದೇ ಆದ ಕಾಣಿಕೆಯನ್ನರ್ಪಿಸಿದ್ದಾರೆ.

ಚೌಡಯ್ಯನವರು ಮುಂದೆ ನಾಲ್ಕು ತಂತಿ, ಏಳು ತಂತಿ ಹಾಗೂ ಹತ್ತೊಂಬತ್ತು ತಂತಿಗಳ ಪಿಟೀಲುಗಳನ್ನು ಆವಿಷ್ಕರಿಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಅಷ್ಟೇ ಅಲ್ಲದೆ, ಪ್ರಯೋಗದ ಮೂಲಕ ಸಂಗೀತವನ್ನಾಲಿಸಿ ಪ್ರಾಣಿಗಳು ಹೆಚ್ಚು ಹಾಲು, ಸಸ್ಯಗಳು ಹೆಚ್ಚು ಫಲಕೊಡುತ್ತವೆಂದು ಸಾಧಿಸಿ ತೋರಿಸಿದರು.

ವಾಣಿ ಪಿಕ್ಚರ್ಸ್ ಸಂಸ್ಥೆಯನ್ನು ೧೯೪೨ರಲ್ಲಿ ಸ್ಥಾಪಿಸಿ, ’ವಾಣಿ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ಹಿರಿಮೆಯೂ ಇವರದು. ಇವರು ಅನೇಕ ತಿಲ್ಲಾನಗಳನ್ನು ಹಾಗೂ ಕೃತಿಗಳನ್ನು ’ತ್ರಿಮುಕುಟ' ಎಂಬ ಅಂಕಿತನಾಮದಿಂದ ರಚಿಸಿದ್ದಾರೆ. ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದ ಚೌಡಯ್ಯನವರಿಗೆ ಮಹಾರಾಜರು ”ಸಂಗೀತರತ್ನ', ಮದರಾಸಿನ ಸಂಗೀತ ಅಕಾಡಮಿ ’ಸಂಗೀತ ಕಲಾನಿಧಿ', ಮೈಸೂರು ಸಂಗೀತ ಪರಿಷತ್ತಿನಿಂದ ”ಗಾನ ಕಲಾಸಿಂಧು' ಪ್ರಶಸ್ತಿಗಳಲ್ಲದೆ ರಾಷ್ಟ್ರಪ್ರಶಸ್ತಿಯು ದೊರಕಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕೊಡುಗೈದಾನಿ ಎಂದು ಖ್ಯಾತರಾಗಿದ್ದ ಚೌಡಯ್ಯನವರು ೧೯ನೇ ಜನವರಿ ೧೯೬೭ರಂದು ದೈವಾಧೀನರಾದರು.