ವಿಶೇಷ ಸೂಚನೆ

ತಿರುಮಲಾಂಬಾ

ಕರ್ನಾಟಕದಲ್ಲಿ ಮಹಿಳಾ ಚಳುವಳಿಗೆ ನಾಂದಿ ಹಾಡಿದ ಪ್ರೇರಕ ಶಕ್ತಿಗಳಲ್ಲೊಬ್ಷರಾದ ತಿರುಮಲಾಂಬ ಅವರು ೨೦ನೇ ಶತಮಾನದ ಮೊಟ್ಟಮೊದಲ ಕನ್ನಡ ಲೇಖಕಿ, ಪತ್ರಕರ್ತೆ, ಪ್ರಕಾಶಕಿ ಹಾಗೂ ಮುದ್ರಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಮಾರ್ಚ್ ೨೫, ೧೮೮೭ರಲ್ಲಿ ನಂಜನಗೂಡಿನಲ್ಲಿ ಜನಿಸಿದ ತಿರುಮಲಾಂಬಾ ತಮ್ಮ ಹತ್ತನೆಯ ವಯಸ್ಸಿಗೆ ಮದುವೆಯಾದರು. ದುರ್ದೈವಶಾತ್ ಹದಿನಾಲ್ಕನೇ ವಯಸ್ಸಿಗೆ ವಿಧವೆಯಾದ ತಿರುಮಲಾಂಬಾ ಅವರು, ವಿಧಿ ಎಸಗಿದ ಅಪಚಾರಕ್ಕೆ ಅಳುತ್ತ, ತಮ್ಮ ಬಾಳನ್ನು ಬರಡಾಗಿಸದೆ, ಹೆಣ್ಣುಮಕ್ಕಳ ಸಂಕಷ್ಟಗಳ ವಿರುದ್ಧ ಹೋರಾಡಲು ಕಂಕಣಬದ್ಧರಾದರು. ಅವರ ಈ ಹೋರಾಟಕ್ಕೆ ತಂದೆಯವರು ಪ್ರೋತ್ಸಾಹದ ನೀರೆರದರು. ತಂದೆಯ ಮನೆಯನ್ನೇ ತಮ್ಮ ಹೋರಾಟದ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಹೆಣ್ಣುಮಕ್ಕಳ ಕಣ್ಣೀರು ಒರೆಸಲು ಮುಂದಾದರು.

ತಿರುಮಲಾಂಬಾ ಅವರು ತಮ್ಮ ಸಮಾಜ ಸೇವೆಯ ಉದ್ದೇಶದ ಬಗ್ಗೆ ೧೯೧೩ರಲ್ಲಿ ಆರಂಭಿಸಿದ 'ಹಿತೈಷಿಣಿ' ಪ್ರಕಾಶನ ಗ್ರಂಥಮಾಲೆಯಲ್ಲಿ ಪ್ರಕಟವಾದ ಅವರ ಮೊದಲ ಕಾದಂಬರಿ 'ಸುಶೀಲೆ'ಯ ಪ್ರಸ್ತಾವನೆಯಲ್ಲಿ ಹೀಗೆ ಹೇಳಿದ್ದಾರೆ."ನಾನು ವಿದ್ಯಾಗ್ರಂಥವನ್ನು ತಿಳಿಯದ ಅಲ್ಪಮತಿಯಾದ ಸಾಮಾನ್ಯ ಸ್ತ್ರೀ, ನವನಾಗರೀಕತೆಯ ಸುಳಿವಾಗಲಿ, ತಿಳುವಳಿಕೆಯ ತಿರುಳಾಗಲಿ ತಿಳಿಯದ ಬಾಲಿಕೆ. ಆದರೂ ನಮ್ಮ ಸೋದರಿ ವರ್ಗಕ್ಕೆ ನನ್ನ ಕೈಯಲ್ಲಾಗುವ ಸೇವೆ ಮಾಡಬೇಕೆಂಬ ಅತ್ಯುತ್ಕಟೇಚ್ಛೆಯು ನನ್ನನ್ನು ಬಿಡಲೊಲ್ಲದು" - ಇದು ಅವರಲ್ಲಿದ್ದ ಸ್ತ್ರೀ ಪರಕಾಳಜಿಗೆ ಉದಾಹರಣೆ.

ಮಹಿಳಾ ಪರ ವಿಚಾರ ವೇದಿಕೆಯೆಂಬಂತೆ ಪ್ರಾರಂಭಿಸಿದ ಅವರ ಸತಿ ಹಿತೈಷಿಣಿ ಗ್ರಂಥ ಮಾಲೆಯಲ್ಲಿ ಒಟ್ಟು ೪೧ ಪುಸ್ತಕಗಳೂ ಪ್ರಕಟವಾಗಿದ್ದು, ಅವುಗಳಲ್ಲಿ ೨೮ ಪುಸ್ತಕಗಳು ತಿರುಮಲಾಂಬಾರ ಸ್ವಂತ ರಚನೆಗಳು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ ತಿರುಮಲಾಂಬಾ ಅವರು ಸುಶೀಲೆ, ನಾಭಾ ಮುಂತಾದ ಕಾದಂಬರಿಗಳು, ಚಂದ್ರವದನೆ ಎಂಬ ನಾಟಕ ಇತ್ಯಾದಿಗಳನ್ನು ಕನ್ನಡ ಆಧುನಿಕ ಗದ್ಯ ಸಾಹಿತ್ಯಕ್ಕೆ ನೀಡಿದ ಕೊಡುಗೆ. ಇವರ ಕೃತಿಗಳಲ್ಲಿ ಬಾಲವಿಧವೆ ಸಮಸ್ಯೆ, ಸ್ತ್ರೀಶಿಕ್ಷಣ, ಸತೀತ್ವದ ಮಹತ್ವ ಮುಂತಾದವು ಪ್ರಮುಖ ವಸ್ತು.

'ಕರ್ನಾಟಕ ನಂದಿನಿ' ಹಾಗೂ 'ಸನ್ಮಾರ್ಗದರ್ಶಿ' ಎಂಬ ಎರಡು ಮಾಸ ಪತ್ರಿಕೆಗಳ ಪ್ರಕಟಣೆ ತಿರುಮಲಾಂಬರ ಮಹತ್ವದ ಸಾಧನೆ. ಇವರ ಸಾಹಿತ್ಯ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಲಭಿಸಿವೆ. ಜೀವನದುದ್ದಕ್ಕೂ ಸಮಾಜ ಹಾಗೂ ಸಾಹಿತ್ಯ ಸೇವೆಯನ್ನು ಗುರಿಯಾಗಿಸಿಕೊಂಡು ದುಡಿದ ತಿರುಮಲಾಂಬರು ೩೧ ಆಗಸ್ಟ್ ೧೯೮೨ರಂದು ನಿಧನರಾದರು.