ವಿಶೇಷ ಸೂಚನೆ

ನಾಡು-ನುಡಿ

 

ಕನ್ನಡ ಭಾಷೆ
ಕನ್ನಡ - ಕರ್ನಾಟಕ
ದಕ್ಷಿಣ ಭಾರತದಲ್ಲಿ ಬಳಕೆಯಲ್ಲಿರುವ ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದು. ಕರ್ನಾಟಕದ ಬಹುಸಂಖ್ಯಾಕರ ಭಾಷೆಯು ಆಗಿರುವುದಲ್ಲದೆ, ಅದನ್ನು ಆಡುವ ಸಾಕಷ್ಟು ಸಂಖ್ಯೆಯ ಜನರು ಕರ್ನಾಟಕದ ನೆರೆಹೊರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿದ್ದಾರೆ. ಆ ಭಾಷೆಯನ್ನಾಡುವ ಒಟ್ಟು 21.7 ಮಿಲಿಯನ್ ಜನಸಂಖ್ಯೆಯಲ್ಲಿ ಶೇಕಡ ಎಂಬತ್ತಾರರಷ್ಟು ಜನ ಕರ್ನಾಟಕದಲ್ಲಿದ್ದಾರೆ. ಕನ್ನಡವನ್ನು ದಕ್ಷಿಣ ಮತ್ತು ಪೂರ್ವಗಳಲ್ಲಿ ಮೂರು ಸಾಹಿತ್ಯ ಸಂಪನ್ನ ದ್ರಾವಿಡ ಭಾಷೆಗಳೂ (ಮಲಯಾಳ, ತಮಿಳು, ತೆಲುಗು) ಪಶ್ಚಿಮದಲ್ಲಿ ಅದೇ ದ್ರಾವಿಡ ವಂಶದ ನಿಗ್ರ್ರಾಂಥಿಕ ಭಾಷೆಗಳಾದ ಕೊಡಗು, ತುಳುಗಳೂ, ಉತ್ತರದಲ್ಲಿ ಇಂಡೋ ಆರ್ಯನ್ ವಂಶದ ಮರಾಠಿ ಭಾಷೆಯೂ ಸುತ್ತುವರೆದಿದೆ. ಇದರಿಂದಾಗಿ, ಕನ್ನಡವು ಆರ್ಯನ್ ಅಂಶಗಳ ತೀವ್ರ ಪ್ರಭಾವಕ್ಕೆ ಒಳಗಾಗಿದ್ದರೂ, ಅದರ ಜೊತೆ ಜೊತೆಗೇ ಶಬ್ದಭಂಡಾರ, ಸಾಹಿತ್ಯಪ್ರಕಾರ ಇವೇ ಮುಂತಾದೆಡೆಗಳಲ್ಲಿ ತನ್ನ `ದ್ರಾವಿಡತನ'ವನ್ನು ಉಳಿಸಿಕೊಳ್ಳುವಂತಾಗಿದೆ.
`ಕನ್ನಡ' ಮತ್ತು `ಕರ್ಣಾಟಕ'ಗಳನ್ನು ಕೆಲವೊಮ್ಮೆ ಸಮಾನಾರ್ಥಕಗಳಾಗಿ ಭಾವಿಸಿರುವುದುಂಟು. ಅವೆರಡೂ ಭಾಷೆಯನ್ನೂ ದೇಶವನ್ನೂ ಸೂಚಿಸುವಂತೆ ಬಳಕೆಯಾಗಿರುವುದು ನಿಜ. ಕನ್ನಡ ನಾಡು/ ಕರ್ನಾಟ ದೇಶ, ಕನ್ನಡ ನುಡಿ/ ಕರ್ನಾಟ ಭಾಷೆ. ಆದರೂ ಅಧಿಕೃತವಾಗಿ ಮತ್ತು ವಾಸ್ತವ ಬಳಕೆಯಲ್ಲಿ `ಕನ್ನಡ'ವು ಭಾಷೆಯನ್ನೂ `ಕರ್ನಾಟಕ' ದೇಶವನ್ನೂ ಸೂಚಿಸುತ್ತದೆ.
ಐತಿಹಾಸಿಕ ಹಿನ್ನೆಲೆ
`ಕನ್ನಡ', `ಕರ್ನಾಟಕ' ಮಾತುಗಳಿಗೆ ಬಹುಪ್ರಾಚೀನವಾದ ಇತಿಹಾಸವಿದೆ. ಕ್ರಿ.ಪೂ. 3-4ನೇ ಶತಮಾನಗಳಿಗಿಂತ ಹಿಂದಿನ ಮಹಾಭಾರತದಲ್ಲಿ ಒಂದು ರಾಜ್ಯದ ಅಥವಾ ಪ್ರಾಂತದ ಹೆಸರಾಗಿ ಕರ್ನಾಟಕ ಪದವು ಬಳಕೆಯಾಗಿದೆ. (ಆ ಪದಕ್ಕೆ ಎತ್ತರದ ಪ್ರದೇಶ ಎಂಬರ್ಥದ `ಉನ್ನತ್ಯಕ' ಎಂಬ ಪಾಠಾಂತರವೂ ಉಂಟು) ಶಾಸನಗಳಲ್ಲಿ `ಕರ್ನಾಟಕ' ಪದದ ಪ್ರಯೋಗದ ಪ್ರಾಚೀನತೆಯು ಪಶ್ಚಿಮಗಂಗ ದೊರೆ ಭೂವಿಕ್ರಮನ ಬೇಡಪುರ ತಾಮ್ರಶಾಸನಗಳಷ್ಟು (7ನೇ ಶ.) ಹಿಂದಕ್ಕೆ ಹೋಗುತ್ತದೆ.
ನಿಷ್ಪತ್ತಿ

`ಕರ್ನಾಟಕ', `ಕನ್ನಡ' ಪದಗಳ ನಿಷ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಬಹುವಿದ್ವಾಂಸರು `ಕರ್ನಾಟಕ'ವು ದೇಶ್ಯಪದವಾದ `ಕನ್ನಡ'ದ (ಅಥವಾ `ಕನ್ನಡ' ಪದದ ಪ್ರಾಚೀನ ರೂಪವೊಂದರ) ಸಂಸ್ಕತೀಕರಣವಾಗಿದೆಯೆಂದು ಭಾವಿಸುತ್ತಾರೆ. `ಕರ್ನಾಟ(ಕ)ವು' ಕರ್ + ನಾಟ್ + ಅ + ಕ(ಗ)ವು (ಕಪ್ಪುಮಣ್ಣಿನ ಪ್ರದೇಶ) ಎಂದೂ, ಕರು + ನಾಡು (ಎತ್ತರದ ಪ್ರದೇಶ) ಎಂದೂ ಭಾವಿಸಲಾಗಿದೆ.

ದ್ರಾವಿಡ ಭಾಷೆಗಳಲ್ಲಿ ಕನ್ನಡವು ದಕ್ಷಿಣ ದ್ರಾವಿಡವೆಂದು ಕರೆಯುವ ಉಪವರ್ಗಕ್ಕೆ ಸೇರಿದೆ. ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಪದಾದಿಯು ಚ್-/ಸ್-ವ್ಯಂಜನವು ಲೋಪವಾಗುವ ಸಾಧ್ಯತೆಯಿದ್ದು, ಆ ಲಕ್ಷಣವು ತಮಿಳು, ಮಲಯಾಳಗಳಂತೆ ಕನ್ನಡದಲ್ಲೂ ಕಾಣಿಸಿಕೊಂಡಿದೆ. ಕನ್ನಡವು ತನ್ನ ಹಲವು ಶತಮಾನಗಳ ಇತಿಹಾಸದ ಅವಧಿಯಲ್ಲಿ ಹಲವು ಮಾರ್ಪಾಟುಗಳನ್ನು ಹೊಂದಿದೆಯಾದರೂ, ಎಲ್ಲ ದ್ರಾವಿಡ ಭಾಷೆಗಳಿಗೂ ಪಿತೃಸ್ಥಾನದಲ್ಲಿರುವ ಮೂಲದ್ರಾವಿಡದ ಹಲವಾರು ಲಕ್ಷಣಗಳನ್ನು ಉಳಿಸಿಕೊಂಡು ಬಂದಿದೆ. ಆ ಕೆಲವು ಲಕ್ಷಣಗಳು ಉಳಿದ ಭಾಷೆಗಳಲ್ಲಿ ಮರೆಯಾಗಿ ಹೋಗಿರಲೂಬಹುದು. ತಾಲವ್ಯೀಕರಣವನ್ನು ಒಂದು ಉದಾಹರಣೆಯಾಗಿ ನೋಡಬಹುದು. ಸಾಹಿತ್ಯಸಂಪನ್ನ ಭಾಷೆಗಳಾದ ತಮಿಳು, ಮಲಯಾಳ, ತೆಲುಗುಗಳಲ್ಲಿ `ಕ್-' ವ್ಯಂಜನವು `ಚ್-' ಆಗುವ ತಾಲವ್ಯೀಕರಣ ಕ್ರಿಯೆಯು ಕೆಲವು ನಿರ್ದಿಷ್ಟ ಸ್ವನಪರಿಸರಗಳಲ್ಲಿ ನಡೆಯುತ್ತದೆ. ಆದರೆ ಕನ್ನಡವು ಎಲ್ಲ ಕಡೆಗೂ `ಕ್-' ವ್ಯಂಜನವನ್ನು ಮಾರ್ಪಡಿಸದೆ ಉಳಿಸಿಕೊಳ್ಳುವುದರಿಂದ, ಮೂಲದ್ರಾವಿಡದ ಕ್ - ವ್ಯಂಜನದ ಪುನಾರಚನೆಯ ಸಂದರ್ಭದಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ. ಜೊತೆ ಜೊತೆಗೆ, `ಪ್' ವ್ಯಂಜನವು, `ಹ್' ಆಗುವಂತಹ ವಿಶಿಷ್ಟ ಸ್ವನವ್ಯತ್ಯಾಸಗಳನ್ನೂ ಹೊಂದಿದೆ. ಈ `ಪ್' > `ಹ್' ಸ್ವನ ವ್ಯತ್ಯಾಸವು ಹಳಗನ್ನಡವು ನಡುಗನ್ನಡವಾಗಿ ಬಳಿಕ ಹೊಸಗನ್ನಡವಾಗಿ ವಿಕಾಸ ಹೊಂದುವಲ್ಲಿ ಮುಖ್ಯ ನಿಮಿತ್ತವಾಯಿತೆಂಬುದನ್ನು ಸ್ಮರಿಸಬಹುದು.