ವಿಶೇಷ ಸೂಚನೆ

ಪಿ. ಕಾಳಿಂಗರಾವ್


ಸುಗಮ ಸಂಗೀತದ ಆದ್ಯಪ್ರವರ್ತಕ, ಕಿನ್ನರ ಕಂಠ ದ ಕನ್ನಡದ ಕೋಗಿಲೆ ಎಂಬ ಬಿರುದಿಗೆ ಪಾತ್ರರಾದ ಪಿ.ಕಾಳಿಂಗರಾವ್ ಜನಿಸಿದ್ದು, ೧೯೧೪ರಲ್ಲಿ ಉಡುಪಿ ಜಿಲ್ಲೆಯ ಆರೂರಿನಲ್ಲಿ. ತಂದೆ ನಾರಾಯಣರಾವ್, ತಾಯಿ ನಾಗರತ್ನಮ್ಮ.
ಚಿಕ್ಕಂದಿನಲ್ಲಿಯೇ ಕಲೆಯ ಗೀಳನ್ನಂಟಿಸಿಕೊಂಡ ಬಾಲಕ ಕಾಳಿಂಗ, ಒಮ್ಮೆ ಶಾಲೆಯಲ್ಲಿ ಆಡಿದ ಚಂದ್ರಹಾಸ ನಾಟಕದಲ್ಲಿ, ಚಂದ್ರಹಾಸನ ಪಾತ್ರಾಭಿನಯದಿಂದ ಬ್ರಿಟಿಷ್ ಅಧಿಕಾರಿಯೊಬ್ಷನ ಮೆಚ್ಚುಗೆಗೆ ಪಾತ್ರರಾಗಿ ಚಿನ್ನದ ಪದಕ ಪಡೆದರು. ಮುಂದೆ ಇವರು ಅಂಬಾಪ್ರಸಾದಿತ ನಾಟಕ ಮಂಡಲಿ ಸೇರಿ ಕೃಷ್ಣ, ಲೋಹಿತಾಶ್ವ, ಧೃವ ಮುಂತಾದ ಬಾಲ ಪಾತ್ರಗಳಲ್ಲಿ ಮಿಂಚುವುದರ ಜೊತೆಗೆ ಕನರ್ಾಟಕ ಸಂಗೀತ ಶಿಕ್ಷಣವನ್ನೂ ಮುಂದುವರೆಸಿದರು. ಜೊತೆಗೆ ರಾಮಚಂದ್ರಬುವ, ಮಳೇಕರ್, ವೆಂಕಟರಾವ್ ರಾಮದುರ್ಗ ಅವರುಗಳಲ್ಲಿ ಹಿಂದುಸ್ತಾನಿ ಸಂಗೀತವನ್ನೂ ಅಭ್ಯಾಸ ಮಾಡಿದರು.

ನಂತರ ಗುಬ್ಷಿ ಕಂಪನಿಗೆ ಸೇರಿದ ಕಾಳಿಂಗರಾಯರು "ದಶಾವತಾರ" ನಾಟಕಕ್ಕೆ ಸಂಗೀತ ನೀಡಿದರು. ಅಷ್ಟೇ ಅಲ್ಲದೆ, ರಾಯರ ಸೊಸೆ, ವಸಂತಸೇನಾ, ಕೃಷ್ಣಲೀಲಾ, ಜೀವನ ನಾಟಕ, ಮಹಾನಂದ ಮುಂತಾದ ಚಲನಚಿತ್ರಗಳಲ್ಲಿ ನಟನೆಯ ಜೊತೆಗೆ ಸಂಗೀತವನ್ನೂ ನೀಡಿದರು. ಇವರ ಅಸಾಧಾರಣ ಸಂಗೀತ ಪ್ರತಿಭೆಯನ್ನು ಗುರುತಿಸಿ ಮದ್ರಾಸಿನ ದಕ್ಷಿಣ ಹಿಂದಿ ಪ್ರಚಾರ ಸಭಾ ಸಂಗೀತ ಶಾಲೆಗೆ ಪ್ರಾಂಶುಪಾಲರನ್ನಾಗಿ ನೇಮಿಸಿಕೊಂಡಿತು.

ಸದಾ ಹೊಸ ಅನ್ವೇಷಣೆಯ ತವಕದಿಂದ ತುಡಿಯುತ್ತಿದ್ದ ರಾಯರು, ಶಿಷ್ಯಂದಿರಾದ ಸೋಹನಕುಮಾರಿ ಹಾಗೂ ಮೋಹನಕುಮಾರಿಯವರ ಜೊತೆಗೂಡಿ ಹಾಡುವುದರೊಂದಿಗೆ ಸುಗಮ ಸಂಗೀತಕ್ಕೆ, ಜಾನಪದ ಗೀತೆಗಳಿಗೆ ಹೊಸ ಬೆಡಗು ನೀಡುವುದರಲ್ಲಿ ಯಶಸ್ವಿಯಾದರು. ನಾಡಿನ ಉದ್ದಗಲಕ್ಕೂ ಹುಯಿಲಗೋಳ ನಾರಾಯಣರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಹಾಡುವ ಮೂಲಕ ಕರ್ನಾಟಕ ಏಕೀಕರಣಕ್ಕೆ ತಮದೇ ಆದ ಕಾಣಿಕೆಯನ್ನರ್ಪಿಸಿದ್ದಾರೆ.

ಜಾನಪದ ಗೀತೆಗಳಿಗೆ ಹೊಸಧಾಟಿ ಹಾಕಿ ಹಾಡುವ ಮೂಲಕ ಜನಪ್ರಿಯಗೊಳಿಸಿದ ರಾಯರು, ವಚನ, ದಾಸರ ಪದ ಹಾಗೂ ಭಾವಗೀತೆಗಳಿಗೂ ಹೊಸ ರೀತಿಯಲ್ಲಿ ಸ್ವರ ಸಂಯೋಜಿಸಿದರು. ಅಷ್ಟೇ ಆಲ್ಲದೆ ರಾಜರತ್ನಂ ಅವರ ’ರತ್ನನಪದ' ಗಳಿಗೆ ಪಾಶ್ಚಿಮಾತ್ಯ ಸಂಗೀತದ ಧಾಟಿ ಬಳಸಿರುವುದು ಇವರ ಪ್ರಯೋಗಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ರಾಯರು ’ಕಿತ್ತೂರು ಚೆನ್ನಮ್ಮ', ’ಅಬ್ಷಾ ಆ ಹುಡುಗಿ', ’ಅಣ್ಣ - ತಂಗಿ', ’ತುಂಬಿದ ಕೊಡ' ಮುಂತಾದ ಚಿತ್ರಗಳಲ್ಲೂ ಹಾಡಿ ಜನಮನ ಸೂರೆಗೊಂಡಿದ್ದಾರೆ. ಇವರ ಗಾನಮಾಧುರ್ಯಕ್ಕೆ ಬೆರಗಾದ ಜವಹರಲಾಲ್ ನೆಹರೂರೆ, ರಾಯರ ಬೆನ್ನು ತಟ್ಟಿ "ಯು ಹ್ಯಾವ್ ಗಾಟ್ ಗೋಲ್ಡ್ ಮೈನ್ ಇನ್ ಯುವರ್ ವಾಯ್ಸ್" ಎಂಬ ನುಡಿಗಳು ಇವರ ಪ್ರತಿಭೆಯ ಕಿರೀಟಕ್ಕೆ ಮೂಡಿಸಿದ ಚಿನ್ನದ ಗರಿ ಎಂದರೆ ಅತಿಶಯೋಕ್ತಿಯಲ್ಲ. ತಮ್ಮ ಮಧುರಕಂಠ ದಿಂದ ಅಪಾರ ಅಭಿಮಾನಿಗಳನ್ನು ಮೋಡಿ ಮಾಡಿದ ಕಾಳಿಂಗರಾಯರು ೧೯೮೧ರಲ್ಲಿ ಇಲ್ಲವಾದರು.