ವಿಶೇಷ ಸೂಚನೆ

ಕಲಾಗ್ರಾಮ

ಕರ್ನಾಟಕ ಕಲಾಗ್ರಾಮ

ಕನ್ನಡ ನಾಡಿನ ಇತಿಹಾಸ, ಪರಂಪರೆಯನ್ನು ಪರಿಚಯಿಸುವ ವಿಶಾಲ ವ್ಯಾಪ್ತಿಯ ದರ್ಶನ ನೀಡುವ ಒಂದು ಕೇಂದ್ರದ ಕಲ್ಪನೆಯೇ ಕಲಾಗ್ರಾಮ. ಈ ಆಶಯದ ಕ್ರಿಯಾ ರೂಪನೇ ಕರ್ನಾಟಕ ಕಲಾಗ್ರಾಮದ ಸ್ಥಾಪನೆ, ಇತಿಹಾಸ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ, ರಂಗಭೂಮಿ, ಚಲನಚಿತ್ರ ಹಾಗೂ ರಾಜ್ಯದ ಅಭಿವೃದ್ಧಿಯ ಪ್ರಗತಿಯನ್ನು ಪ್ರತಿಬಿಂಬಿಸುವ ಮತ್ತು ಸಮಗ್ರ ಮಾಹಿತಿಯನ್ನು ಒದಗಿಸುವ ದೃಶ್ಯಾತ್ಮಕ ಹಾಗೂ ಕಲಾತ್ಮಕ ಅಭಿವ್ಯಕ್ತಿ ವಿಧಾನಗಳು ಜೊತೆಗೆ, ಕರ್ನಾಟಕದ ವೈವಿಧ್ಯಪೂರ್ಣ ಪ್ರಾದೇಶಿಕ ಕಲಾ ವೈಶಿಷ್ಟ್ಯವನ್ನು ಬಿಂಬಿಸುವ ದರ್ಶನಾಲಯಗಳು ಇಲ್ಲಿ ಒಳಗೊಳ್ಳುತ್ತವೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು 20 ಎಕರೆ ಜಮೀನನ್ನು ನೀಡಿದ್ದು, ಇದರಲ್ಲಿ 13 ಎಕರೆ ಕಲಾಗ್ರಾಮ ಮತ್ತು 7 ಎಕರೆ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರಕ್ಕೆ ನೀಡಲಾಗಿದೆ. ಜೊತೆಗೆ ಕರ್ನಾಟಕದ ಶ್ರೇಷ್ಠ ಮತ್ತು ಅನನ್ಯ ಸಾಹಿತ್ಯ ಕೃತಿಗಳನ್ನು ಅನ್ಯ ಭಾಷೆಗೆ, ಅನ್ಯ ಭಾಷೆಯಿಂದ ಜ್ಞಾನ ಸಂಪತ್ತನ್ನು ಕನ್ನಡಕ್ಕೆ ತರುವ ಕೆಲಸವನ್ನು ನಿರ್ವಹಿಸುವ ಸಲುವಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಯಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪಕ್ಕದಲ್ಲಿ ರಾಷ್ಟ್ರೀಯ ನಾಟಕ ಶಾಲೆಗಾಗಿ 3 ಎಕರೆಯನ್ನು ನೀಡಲಾಗಿದ್ದು, ಇದೂ ಕೂಡ ಕಲಾಗ್ರಾಮದಲ್ಲಿ ಪೂರಕ ಚಟುವಟಿಕೆಗಾಗಿ ಮೈದಾಳಲಿದೆ.

ಕಲಾಗ್ರಾಮದ ವಿವರ

ಬಯಲು ರಂಗಮಂದಿರ: ಬಯಲು ರಂಗಮಂದಿರವು ಚಟುವಟಿಕೆಗಳಿಗಾಗಿ ಪೂರ್ಣವಾಗಿ ಸಿದ್ಧವಾಗಿದೆ. ಈಗಾಗಲೇ ಹಲವಾರು ಇಲಾಖೆಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ.

ಕುಟೀರಗಳು: ಸಾಹಿತಿಗಳು, ಕಲಾವಿದರು, ಶಿಲ್ಪಿಗಳು ಕಾರ್ಯ ಚಟುವಟಿಕೆಗಳನ್ನು ನಡೆಸಲು 4 ಕುಟೀರಗಳನ್ನು ನಿರ್ಮಿಸಲಾಗಿದೆ.

ಸುವರ್ಣ ಸಾಂಸ್ಕøತಿಕ ಸಮುಚ್ಚಯ: ಕರ್ನಾಟಕ ಏಕೀಕರಣಗೊಂಡು 50 ವರ್ಷಗಳ ಸವಿನೆನಪಿಗೆ ಸುವರ್ಣ ಸಾಂಸ್ಕøತಿಕ ಸಮುಚ್ಚಯವನ್ನು ನಿರ್ಮಿಸಲಾಗಿದೆ. ಪ್ರಸಿದ್ಧ ಐಹೊಳೆ ದುರ್ಗಾದೇವಿ ಗುಡಿಯ ಮಾದರಿಯ ಶಿಲ್ಪದ ಪ್ರತಿರೂಪವಾಗಿ ಮೂಡಿಬರುತ್ತಿದ್ದು, ತಳಮಹಡಿಯಲ್ಲಿ ವಸ್ತುಪ್ರದರ್ಶನ ಹಾಗೂ ವಿವಿಧ ಕಲೆಗಳ ಪ್ರದರ್ಶನ, ನೆಲಮಹಡಿಯಲ್ಲಿ 300 ಆಸನಗಳುಳ್ಳ ಸಭಾಂಗಣ ಹಾಗೂ ಮೊದಲ ಮಹಡಿಯಲ್ಲಿ 10 ಜಿಲ್ಲೆಗಳ ಸಂಸ್ಕøತಿಯನ್ನು ಬಿಂಬಿಸುವ ಪ್ರದರ್ಶನಾಲಯಗಳು ಹಾಗೂ 2ನೆಯ ಮಹಡಿಯಲ್ಲಿ ಉಳಿದ ಪ್ರದರ್ಶನಾಲಯಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ದಿನಾಂಕ:21.03.2013ರಂದು ಉದ್ಘಾಟನೆಗೊಂಡಿದ್ದು. ಇನ್ನು ಕೆಲವು ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.

ಸುವರ್ಣ ಸಮುಚ್ಚಯದ ರಂಗಮಂದಿರ: ಕಲಾವಿದರು / ಸಂಘ ಸಂಸ್ಥೆಗಳು / ಸಾರ್ವಜನಿಕರು ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸಲು ಸರ್ಕಾರ ನಿಗದಿ ಮಾಡಿದ ಬಾಡಿಗೆ ದರದಂತೆ ಪ್ರಸಕ್ತ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಬಾಡಿ ನೀಡಲಾಗುತ್ತಿದೆ. ಈ ಸಂಬಂಧ ರಂಗಮಂದಿರವನ್ನು ಕಾದಿರಿಸಲು, ವ್ಯವಸ್ಥಾಪಕರು, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇವರನ್ನು ಸಂಪರ್ಕಿಸಬಹುದಾಗಿರುತ್ತದೆ. ದೂರವಾಣಿ ಸಂಖ್ಯೆ:080-22221271.

ಆಡಳಿತ ವಿಭಾಗ: ಈ ವಿಭಾಗದಲ್ಲಿ ಕಲಾಗ್ರಾಮದ ಆಡಳಿತ ಕಚೇರಿ, ಮಾಹಿತಿ ಕೇಂದ್ರ ಹಾಗೂ ಕಿರು ಸಭಾಂಗಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಆಡಳಿತ ಕಚೇರಿಯನ್ನು ಕೊಡವರ ಐನ್ ಮನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಕಟ್ಟಡಕ್ಕೆ ಇದೀಗ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಕಾಮಗಾರಿಯು ಮುಕ್ತಾಯದ ಹಂತದಲ್ಲಿರುತ್ತದೆ.

• ಒಟ್ಟಾರೆ ಕಲಾಗ್ರಾಮ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಸುವರ್ಣ ಸಾಂಸ್ಕøತಿಕ ಸಮುಚ್ಚಯಕ್ಕೆ ಲೋಕೋಪಯೋಗಿ ಇಲಾಖೆ, ಬೆಂಗಳೂರು ಇವರಿಗೆ ಹಣ ಬಿಡುಗಡೆ ಮಾಡಿ, ಮುಖ್ಯ ವಾಸ್ತುಶಿಲ್ಪಿ, ಬೆಂಗಳೂರು ಇವರು ನೀಡಿದ ನೀಲಿನಕ್ಷೆಯಂತೆ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ.

 

ಸುವರ್ಣ ಕರ್ನಾಟಕ

ಕರ್ನಾಟಕವು ಏಕೀಕರಣಗೊಂಡು 50 ವರ್ಷಗಳು ಸಂದಿರುವ ಸಂದರ್ಭದಲ್ಲಿ 2006ರ ನವೆಂಬರ್ 1ರಂದು ಸುವರ್ಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು. ಈ ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಸುವರ್ಣ ಸಂಸ್ಕೃತಿ ದಿಬ್ಬಣ, ಜಾನಪದ ಜಾತ್ರೆ, ಸುವರ್ಣ ಪ್ರಕಟಣೆಗಳು, ಸುವರ್ಣ ಸಾಹಿತ್ಯ ಮಾಲೆಯಡಿ 103 ಪುಸ್ತಕಗಳ ಮುದ್ರಣ, ಹೊನ್ನಾರು ಮಾಲೆಯಡಿ 40 ಗ್ರಂಥಗಳ ಪ್ರಕಟಣೆ, ಕನ್ನಡ ವಿಶ್ವಕೋಶ, ಸುವರ್ಣ ಸಾಂಸ್ಕೃತಿಕ ಸಮುಚ್ಚಯಗಳು, ಗಡಿಭಾಗಗಳಲ್ಲಿ ಸುವರ್ಣ ಭಾವೈಕ್ಯತೆ ಸಂಸ್ಕೃತಿ ಸಂಭ್ರಮ, ಗಡಿಭಾಗಗಳಲ್ಲಿ ಕನ್ನಡ ಭವನ ನಿರ್ಮಾಣ, ಸುವರ್ಣ ರಂಗಮಂದಿರ ನಿರ್ಮಾಣ, ಆಡಳಿತ ವ್ಯಾಪ್ತಿಯ ಸಂಸ್ಥೆಗಳ ಮೂಲಕ ಸ್ವರ್ಣ ಜಯಂತಿ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸುವರ್ಣ ಸಂಸ್ಕೃತಿ ವೈಭವ, ರಾಜಧಾನಿಯಲ್ಲಿ ಸುವರ್ಣ ಜಯಂತಿ, ಏಕೀಕರಣ ಪ್ರಶಸ್ತಿಗಳು, ರಾಷ್ಟ್ರಕವಿ ಪುರಸ್ಕಾರ, ವಿಶ್ವ ಕನ್ನಡ ಸಮ್ಮೇಳನ, ಹೊರ ರಾಜ್ಯಗಳಲ್ಲಿ ಸುವರ್ಣ ಜಯಂತಿ ಆಚರಣೆ, ಸುವರ್ಣ ಅಂಚೆಚೀಟಿ ಮುದ್ರಣ, ಸುವರ್ಣ ಕರ್ನಾಟಕ ಶಿಲ್ಪವನ, ಸುವರ್ಣ ಕರ್ನಾಟಕದ ನೃತ್ಯರೂಪಕ, ಸುವರ್ಣ ಕರ್ನಾಟಕ ಕಲಾಮೇಳ, ಸುವರ್ಣ ಕರ್ನಾಟಕ ಆಶಯಗೀತೆ, ಜಿಂಗಲ್ಸ್ ಮತ್ತು ದಿಬ್ಬಣದ ಹಾಡುಗಳು, ಸುವರ್ಣ ಗೀತ ಸಂಭ್ರಮ, ಸುವರ್ಣ ಸಿಂಚನ, ಬಹುಮಾಧ್ಯಮ ಪ್ರಚಾರಾಂದೋಲನ, ಇ-ಪ್ರಗತಿ ರೂಪಕ, ರಂಗಾಯಣದ ರಂಗಯಾತ್ರೆ ಯೋಜನೆ, ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಾನಪದ ಜಾತ್ರೆ

ಕರ್ನಾಟಕದಲ್ಲಿ ಸುಮಾರು ಒಂದು ನೂರ ಎಂಬತ್ತಕ್ಕೂ ಹೆಚ್ಚಿನ ಜನಪದ ಕಲೆಗಳು ಅಸ್ತಿತ್ವದಲ್ಲಿವೆ. ಜೊತೆಗೆ ಕರಕುಶಲ, ಕೌಶಲ್ಯ ಮತ್ತು ಪ್ರಸಾದನ ಕಲೆಗಳ ಭಂಡಾರವೂ ಸಂಮೃದ್ಧವಾಗಿದೆ. ಈ ಎಲ್ಲ ಕಲಾ ಸಂಮೃದ್ಧತೆಯನ್ನು ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಗಳಿಗೆ ಪರಿಚಯಿಸುವ ಮೂಲಕ ಆಧುನಿಕ ಸಮಾಜಕ್ಕೆ ನಮ್ಮ ಪರಂಪರೆಯ ಮಹತ್ವವನ್ನು ಮನಗಾಣಿಸುವುದು ಜಾನಪದ ಜಾತ್ರೆಯ ಪ್ರಮುಖ ಉದ್ದೇಶ. ಜಾನಪದ ಜಾತ್ರೆ ಎಂದರೆ ಅದೊಂದು ನಗರ ಮತ್ತು ಗ್ರಾಮೀಣ ಸಮಾಜಗಳ ಅರ್ಥಪೂರ್ಣ ತಿಳುವಳಿಕೆಯ ಸಮ್ಮಿಲನ. ಆಧುನಿಕ ಬದುಕು ಮನುಷ್ಯನಲ್ಲಿ ಏಕತಾನತೆಯನ್ನು ತುಂಬಿದೆ. ಯಾಂತ್ರಿಕ ಜೀವನ ಅವನಿಗೆ ನಿರಂತರ ಬೇಸರವನ್ನು ಉಂಟುಮಾಡಿದೆ. ಅಂಥ ಮನಸ್ಸುಗಳು ತಮ್ಮ ಮನಸ್ಸಿನ ಹಗುರಕ್ಕಾಗಿ ಹೊಸ ದಾರಿಗಳ ಕಡೆಗೆ ಹೊರಳುತ್ತಿವೆ. ಎಲ್ಲೋ ಕಳೆದುಹೋಗುತ್ತಿರುವ ನಮ್ಮ ಸಾಂಸ್ಕೃತಿಕ ಬದುಕಿನ ಕಡೆಗೆ ವಿಕ್ಷಿಪ್ತಗೊಂಡ ಮನಸ್ಸುಗಳನ್ನು ಹೊರಳಿಸುವುದು ಈ ಜಾತ್ರೆಯಿಂದ ಸಾಧ್ಯ. ರಜಾ ದಿನಗಳಲ್ಲಿ ಇಂಥ ಜಾತ್ರೆಗಳನ್ನು ಏರ್ಪಡಿಸುವ ಮೂಲಕ ಹಳ್ಳಿಗಾಡಿನ ದೇಸಿ ಪ್ರಜ್ಞೆಯನ್ನು ಹಾಗೂ ಅವರ ಪ್ರತಿಭಾಶಕ್ತಿಯನ್ನು ನಗರದ ಜನತೆಗೆ ಪರಿಚಯಿಸುವುದು ಈ ಜಾತ್ರೆಯ ಮತ್ತೊಂದು ಉದ್ದೇಶ. ಇದೊಂದು ಪರಸ್ಪರ ಕೊಳು-ಕೊಡುಗೆಯ ವಿಚಾರ. ವಿವಿಧ ಜನಪದ ಕಲಾ ತಂಡಗಳು ರಾಜಧಾನಿ ಬೆಂಗಳೂರು ಮತ್ತು ಇತರ ಜಿಲ್ಲಾ ಕೇಂದ್ರಗಳಿಗೆ ಆಗಮಿಸಿ ನಿರ್ದಿಷ್ಟ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತವೆ. ಅದೇ ಸಂದರ್ಭದಲ್ಲಿ ನಗರದ ಜನತೆ ತಮ್ಮ ನೆಲದ ಮೂಲ ಸಂಸ್ಕೃತಿಯ ಬಗ್ಗೆ ಎಚ್ಚರಗೊಳ್ಳುತ್ತಾರೆ. ಒಂದು ರೀತಿಯಲ್ಲಿ ಇದೊಂದು ಸುವರ್ಣ ಸಮ್ಮಿಲನ.