ವಿಶೇಷ ಸೂಚನೆ

ಕೆ.ವಿ.ಪುಟ್ಟಪ್ಪ

'ಕುವೆಂಪು' ಎಂಬ ಹೆಸರಿನಿಂದ ಖ್ಯಾತ ನಾಮರಾಗಿರುವ ಶ್ರೀ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು ಸಮಕಾಲೀನ ಕನ್ನಡ ಸಾಹಿತ್ಯದ ಕೆಲವೇ ಕೆಲವು ಶಿಖರ ಸಾಹಿತಿಗಳಲ್ಲಿ ಅತ್ಯಂತ ಪ್ರಮುಖರಾದವರು. ತುಂಗಾತೀರದ ಸಹ್ಯಾದ್ರಿ ಗಿರಿಶ್ರೇಣಿಗಳ ದಟ್ಟವಾದ ಅರಣ್ಯ ಪರಿಸರದಿಂದ ಮೂಡಿಬಂದ ಈ ಕಾಡಿನ ಕವಿ, ನಮ್ಮ ನಾಡಿನ ಪ್ರೀತಿಯ ಕವಿಯಾಗಿ, ಇಡೀ ರಾಷ್ಟ್ರದ ಕವಿಯಾಗಿ, ವಿಶ್ವಮಾನವ ಪ್ರಜ್ಞೆಯನ್ನು ಜೀವಂತವಾಗಿ ಮೈಗೂಡಿಸಿಕೊಂಡ ಮಹಾ ವ್ಯಕ್ತಿ.
ಕುವೆಂಪು ಅವರ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯಕ್ಕೆ ಸಂದ ಕೊಡುಗೆ ಅನನ್ಯವಾದದ್ದು. ಕುವೆಂಪು ಅವರ ಸೃಜನಶೀಲ ವ್ಯಕ್ತಿತ್ವ ಪ್ರಾಚ್ಯ - ಪಾಶ್ಚಾತ್ಯ ಸಾಹಿತ್ಯ ಹಾಗೂ ವಿವಿಧ ಜ್ಞಾನ ಶಾಖೆಗಳ ಪರಂಪರೆಯಿಂದ ಸತ್ವ ಸಂಪನ್ನವಾಗಿ, ಕನ್ನಡ ಸಾಹಿತ್ಯದ ಸಮಸ್ತ ಪ್ರಕಾರಗಳಲ್ಲಿಯೂ ನಿಶ್ಚಿತವಾದ ಎತ್ತರದ ಕೃತಿಗಳನ್ನು ನಿರ್ಮಿಸಿ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಸಾಹಿತ್ಯದಲ್ಲಿ ಸುಭದ್ರವಾದ ಸ್ಥಾನವನ್ನು ಗಳಿಸಿಕೊಟ್ಟಿದೆ.

 

ಭಾರತೀಯ ರಾಷ್ಟ್ರೀಯ ಆಂದೋಲನದ ಸಮಯದಲ್ಲಿ ಒಂದು ನಿರ್ಭಯ ಪ್ರತಿಭಟನೆಯ ಪ್ರಮುಖ ವಾಣಿಯಾಗಿ ಅಂದಿನ ಹೋರಾಟಕ್ಕೆ ಸ್ಫೂರ್ತಿಯನ್ನು ನೀಡಿದ ಕುವೆಂಪು ಅವರ ಸಾಹಿತ್ಯ ನಿರ್ಮಿಸಿ ಈ ರಾಷ್ಟ್ರದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದ ಆಶೋತ್ತರಗಳನ್ನು,ಸ್ಥಿತ್ಯಂತರಗಳನ್ನೂ ಪ್ರತಿಬಿಂಬಿಸಿದ ಹಾಗೂ ವಿಮರ್ಶೆಗೆ ಗುರಿಪಡಿಸಿದ ಮೂಲದ್ರವ್ಯವನ್ನಾಗಿ ಮಾಡಿಕೊಂಡ ಅವರ ಸಾಹಿತ್ಯವೂ, ಶ್ರೀಸಾಮಾನ್ಯರ ಬದುಕನ್ನು ನಿಯಂತ್ರಿಸುವ ಹಾಗೂ ಶೋಷಿಸುವ ಸಂಪ್ರದಾಯವನ್ನು ಉಗ್ರವಾದ ಚಿಕಿತ್ಸೆಗೆ ಗುರಿಪಡಿಸಿ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಯ ನೆಲೆಯಲ್ಲಿ ಮನುಷ್ಯನ ವ್ಯಕ್ತಿತ್ವವು ನಿರಂಕುಶವಾಗಿ ಹಾಗೂ ಅನಿಕೇತನವಾಗಿ ವಿಕಾಸಗೊಳ್ಳುವ ಕಳಕಳಿಯನ್ನು ಅನನ್ಯವಾಗಿ ಪ್ರತಿಪಾದಿಸವ ಸ್ವರೂಪದ್ದಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಆನಂತರ ಕುಲಪತಿಗಳಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಕನ್ನಡದ ಅಧ್ಯಯನಕ್ಕೆ ಹೊಸ ಆಯಾಮಗಳನ್ನು ಕಲ್ಪಿಸಿದ ಶ್ರೀ ಪುಟ್ಟಪ್ಪನವರು, ಕನ್ನಡ ನಾಡಿನಲ್ಲಿ ಕನ್ನಡವೇ ಎಲ್ಲ ಹಂತಗಳಲ್ಲಿಯೂ ಸಾರ್ವಭೌಮ ಸ್ಥಾನವನ್ನು ಪಡೆಯುವುದರಿಂದ ಮಾತ್ರವೇ ಈ ನಾಡಿನ ಶ್ರೀಸಾಮನ್ಯನ ಉದ್ಧಾರ ಸಾಧ್ಯವೆಂಬ ನಂಬಿಕೆಯಿಂದ ಕನ್ನಡದ ಸ್ಥಾನ-ಮಾನಗಳ ಪರವಾದ ಹೋರಾಟದ ಕೆಚ್ಚನ್ನು ನಿರಂತರವಾಗಿ ಪ್ರಚೋದಿಸುತ್ತ, ಸರ್ಕಾರ ಹಾಗೂ ಸಾರ್ವಜನಿಕರನ್ನು ಎಚ್ಚರದಲ್ಲಿ ಇರಿಸಿದವರು.

’ದಿವ್ಯ ನಿರ್ಲಕ್ಷ್ಯತೆಯೆ ವರಕವಿಯ ಪಂಥ' ಎಂಬ ನಿಲುವಿನಲ್ಲಿ ನಿಶ್ಚಲವಾಗಿ ನಿಂತ ಪುಟ್ಟಪ್ಪನವರನ್ನು ಅಲಂಕರಿಸಲು ಅರಸಿಬಂದ ಗೌರವ -ಪ್ರಶಸ್ತಿ ರೂಪದ ಯಶಸ್ಸುಗಳು ಅನೇಕ. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಜ್ಞಾನಪೀ� ಪ್ರಶಸ್ತಿ, ರಾಷ್ಟ್ರಕವಿ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಗೌರವ ಡಾಕ್ಟರೇಟ್ ಇತ್ಯಾದಿಗಳು ಪುಟ್ಟಪ್ಪನವರ ವ್ಯಕ್ತಿತ್ವ ಹಾಗೂ ಸಾಧನೆಗಳಿಗೆ ಈ ರಾಷ್ಟ್ರದ ಜನಗಣಮನ ಅಧಿನಾಯಕಚೇತನವು ತೋರಿದ ಪ್ರೀತಿ ಗೌರವಗಳ ಸಂಕೇತವಾಗಿದೆ. ಈ ಯಶೋಮಾಲೆಗೆ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ’ಪಂಪ ಪ್ರಶಸ್ತಿ'ಯೂ ಸೇರಿರುವುದು ಅತ್ಯಂತ ಅರ್ಥಪೂರ್ಣವೂ ಮಹತ್ವವೂ ಆದ ಒಂದು ಘಟನೆಯಾಗಿದೆ.

ಶ್ರೀ ಪುಟ್ಟಪ್ಪನವರನ್ನು 'ಪಂಪ ಪ್ರಶಸ್ತಿ'ಯ ಮೂಲಕ ಮತ್ತೊಮ್ಮೆ ನಾವು ಗೌರವಿಸಲು ಕಾರಣವಾದ ಅವರ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯವು, ಭಾರತದ ಮಾತ್ರವಲ್ಲ, ಜಾಗತಿಕ ಮಹಾಕಾವ್ಯ ಪರಂಪರೆಯ ಸತ್ವವನ್ನು ಮೈಗೂಡಿಸಿಕೊಂಡು ಸಮಕಾಲೀನ ಕನ್ನಡ ಸಂದರ್ಭದಲ್ಲಿ ಆವಿರ್ಭವಿಸಿರುವ ಒಂದು ಮೇರು ಕೃತಿಯಾಗಿದೆ; ಋಷಿ ವಾಲ್ಮಿಕೀಯ ಮೂಲ ರಾಮಾಯಣದ ಕಥಾವಸ್ತುವು 'ಕುವೆಂಪು' ಅವರ ಮಹತ್ ಪ್ರತಿಭೆಯಲ್ಲಿ ಪಡೆದುಕೊಂಡ ಇಪ್ಪತ್ತನೆಯ ಶತಮಾನದ ವ್ಯಾಖ್ಯಾನವಾಗಿದೆ. ಸವರ್ೊದಯ, ಸಮನ್ವಯ ಹಾಗೂ ಪೂರ್ಣ ದೃಷ್ಟಿಯ ದರ್ಶನವನ್ನು ಅನನ್ಯವಾಗಿ ಪ್ರತಿಪಾದಿಸುವ ಕೃತಿಯಾಗಿದೆ. ವಿಶ್ವವಾಣಿಯ ಮುಡಿಯ ಮಣಿಯಾಗಿದೆ. ಭಾರತದ ಸ್ವಾತಂತ್ರ ಪ್ರಾಪ್ತಿಯ ಈ ನಲವತ್ತು ವರ್ಷಗಳಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಸೃಜನಶೀಲ ಕೃತಿ ಎಂದು ತೀಪರ್ುಗಾರರಿಂದ ಪರಿಗಣಿತವಾಗಿರುವ ಶ್ರೀ ಪುಟ್ಟಪ್ಪನವರ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯಕ್ಕೆ ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಪಂಪ ಪ್ರಶಸ್ತಿಯನ್ನು ಮೊಟ್ಟಮೊದಲಿಗೆ ಸಂದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯವು ಕನ್ನಡಕ್ಕೆ ಮೊಟ್ಟಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಟ್ಟ ಕೃತಿಯಾಗಿದೆ; ಮೊಟ್ಟಮೊದಲ ಜ್ಞಾನಪೀ� ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಕೃತಿಯಾಗಿದೆ. ಹಾಗೆಯೇ ಮೊಟ್ಟಮೊದಲ ಪಂಪ ಪ್ರಶಸ್ತಿಯ ಗೌರವಕ್ಕೆ ಅರ್ಹವಾದ ಕೃತಿಯಾಗಿದೆ.

’ಪಂಪನಿಂದ ಕುವೆಂಪುವರೆಗೆ' ಎಂಬುದು ಪ್ರಸ್ತುತ ಸಾಹಿತ್ಯ ಸಂದರ್ಭದಲ್ಲಿ ಬಳಕೆಗೆ ಬಂದಿರುವ ಒಂದು ನುಡಿಗಟ್ಟಾಗಿದೆ. ಅರ್ಥವತ್ತಾದ ಈ ನುಡಿಗಟ್ಟು ಪಂಪನಿಗೂ ಕುವೆಂಪುವಿಗೂ ಇರುವ ಸಾದೃಶ್ಯವನ್ನು ಸೂಚಿಸುವುದರ ಜತೆಗೆ, ಕನ್ನಡ ಸಾಹಿತ್ಯದ ಸೀಮಾರೇಖೆಗಳನ್ನೂ ಸೂಚಿಸುತ್ತದೆ. ವಾಸ್ತವವಾಗಿ, ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಹೇಳುವುದಾದರೆ, ಪಂಪ - ಕುವೆಂಪು ಅವರಿಬ್ಷರೂ ನಮ್ಮ ಸಾಹಿತ್ಯದ ಸೀಮಾ ಪುರುಷರು - ಸತ್ವದಲ್ಲಿ ಸಾಧನೆಯಲ್ಲಿ ಹಾಗೂ ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು ಮತ್ತು ಎತ್ತರಗಳನ್ನು ತಂದು ಕೊಟ್ಟು ತಮ್ಮದೇ ಆದ ಪರಂಪರೆಯನ್ನು ನಿಮರ್ಿಸುವಲ್ಲಿ ”ಮನುಷ್ಯ ಜಾತಿ ತಾನೊಂದೆ ವಲಂ' ಎಂಬ ಪಂಪನ ಮಾತಿಗೂ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಗೂ ಇರುವ ಸಾಮ್ಯವು ಕೇವಲ ಆಕಸ್ಮಿಕವಾದುದೇನಲ್ಲ.