ವಿಶೇಷ ಸೂಚನೆ

ನಾಡು-ನುಡಿ

ಅರವೀಡು ಮನೆತನ
ವಿಜಯನಗರ ಸಾಮ್ರಾಜ್ಯವು ಅವನತಿಯ ಹಂತದಲ್ಲಿ ಅಧಿಕಾರ ನಡೆಸಿದ ಅಳಿಯ ರಾಮರಾಯ ಅರವೀಡು ಮನೆತನದವನು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ ಆತನ ಸೋದರರು ಪೆನುಗೊಂಡೆಗೆ ಓಡಿಹೋಗಿ, ಅಲ್ಲಿಂದ ಸ್ವತಂತ್ರರಾಗುವ ಪ್ರಯತ್ನ ನಡೆಸಿದರು. ಯುದ್ಧಾನಂತರ ಷಾಹಿಸುಲ್ತಾನರ ಒಕ್ಕೂಟವೂ ಒಡೆದುಹೋಗಿತ್ತು. ರಕ್ಕಸಗಿ - ತಂಗಡಗಿ ಯುದ್ಧವಾದ ಐದು ವರ್ಷಗಳ ನಂತರ ವಿಜಯನಗರ ದೊರೆಯೆಂದು ಪಟ್ಟಕ್ಕೆ ಬಂದ ತಿರುಮಲನು ತನ್ನ ಎಂಟು ವರ್ಷಗಳ ಆಳ್ವಿಕೆಯಲ್ಲಿ ರಾಜ್ಯವನ್ನು ಮೂರು (ಪೆನುಗೊಂಡೆ, ಶ್ರೀರಂಗಪಟ್ಟಣ, ಚಂದ್ರಗಿರಿ) ಭಾಗಗಳನ್ನಾಗಿ ಮಾಡಿ ಅಲ್ಲಿಗೆ ಪ್ರಾಂತ್ಯಾಧಿಕಾರಿಗಳನ್ನಾಗಿ ತನ್ನ ಮಕ್ಕಳನ್ನೇ ನೇಮಿಸಿದ. ಇವನ ಕಾಲದಲ್ಲಿ ಬಿಜಾಪುರದ ಆದಿಲ್‍ಷಾಹಿಗಳ ದಾಳಿ ಅಧಿಕವಾಗಿತ್ತು ಮತ್ತು ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಪ್ರಯತ್ನಿಸಿದರು. ಅಂತಹವರಲ್ಲಿ ಶ್ರೀರಂಗಪಟ್ಟಣದ ರಾಜ ಒಡೆಯರೂ ಒಬ್ಷರು. ಪಾಳೆಯಗಾರರು ಯಾರೂ ಅರವೀಡು ಮನೆತನಕ್ಕೆ ನಿಷ್ಠರಾಗಿರಲಿಲ್ಲ. ಆದಿಲ್‍ಷಾಹಿಗಳ ದಾಳಿಯೂ ಹೆಚ್ಚುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಅರವೀಡು ಮನೆತನದ ಆಳ್ವಿಕೆ ಕೊನೆಗೊಂಡು ಕರ್ನಾಟಕವನ್ನು ಹಲವರು ಪಾಳೆಯಗಾರರು ಮತ್ತು ಮೈಸೂರು ಒಡೆಯರು ಆಳಿದರು.
ಕರ್ನಾಟಕದ ಪಾಳೆಯಗಾರರು
ದಕ್ಷಿಣ ಭಾರತದಲ್ಲಿ ಮುಸಲ್ಮಾನರ ದಾಳಿ ಹೆಚ್ಚಾದಾಗ, ಹಲವು ಸ್ಥಳೀಯ ಅಧಿಕಾರಿಗಳು ಮತ್ತು ಮಾಂಡಲೀಕರು ಸ್ವಂತ ಸೈನ್ಯವನ್ನು ಹೊಂದಿ, ಸಮಯ ಬಂದಾಗ ತಮ್ಮ ದೊರೆಗಳಿಗೆ ನೆರವಾಗುತ್ತಿದ್ದರು. ವಿಜಯನಗರದ ಕಾಲದಲ್ಲಿ ಅಂತಹ ಹಲವು ಮಾಂಡಲೀಕರು ಮತ್ತು ಅಧಿಕಾರಿಗಳಿಗೆ ರಾಜಮನ್ನಣೆಯೂ ದೊರೆತು, ಪಾಳೆಯಗಾರರೆನಿಸಿಕೊಂಡರು. ವಿಜಯನಗರದ ಪತನಾನಂತರ ಅವರೇ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಅಂತಹ ಪಾಳೆಯಗಾರರ ಸಂಖ್ಯೆ ಕರ್ನಾಟಕದಲ್ಲಿ 60ಕ್ಕೂ ಹೆಚ್ಚಾಗಿಯೇ ಇತ್ತು. ಕರ್ನಾಟಕದ ಕೆಲವು ಪ್ರಮುಖ ಪಾಳೆಯ ಪಟ್ಟುಗಳೆಂದರೆ ಕೆಳದಿ, ಚಿತ್ರದುರ್ಗ, ಆವತಿ, ಉಮ್ಮತೂರು, ಚನ್ನಪಟ್ಟಣ, ಚಿಕ್ಕಬಳ್ಳಾಪುರ, ತರೀಕೆರೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮಾಗಡಿ, ಸುಗಟೂರು, ಹರತಿ, ಹರಪನಹಳ್ಳಿ, ಹಾಗಲವಾಡಿ ಇತ್ಯಾದಿ. ಅಧಿಕಾರಕ್ಕಾಗಿ ಹಲವು ಪಾಳೆಯಗಾರರು ತಮ್ಮ ತಮ್ಮಲ್ಲೇ ಹೋರಾಡಿದರೂ ಜನತೆಯ ಹಿತಕ್ಕಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದರು. ಉಮ್ಮತ್ತೂರು, ಕೆಳದಿ ಮತ್ತು ಚಿತ್ರದುರ್ಗದ ಪಾಳೆಯ ಪಟ್ಟುಗಳು, ಬಹು ಪ್ರಬಲವಾಗಿದ್ದವು. ಟಿಪ್ಪುಸುಲ್ತಾನನ ಕಾಲಕ್ಕೆ ಬಹುತೇಕ ಪಾಳೆಯ ಪಟ್ಟುಗಳು ಅವನತಿ ಹೊಂದಿದ್ದವು. ಹಲವು ಪಾಳೆಯ ಪಟ್ಟುಗಳು ಮುಸಲ್ಮಾನ್ ದಾಳಿ ಮತ್ತು ಮರಾಠಾ ಆಕ್ರಮಣವನ್ನು ಸಮರ್ಥವಾಗಿ ಎದುರಿಸುತ್ತಿದ್ದವು. ಕೆಳದಿಯ ನಾಯಕರಂತೂ ಆಡಳಿತಾತ್ಮಕವಾಗಿ ಹೆಚ್ಚಿನ ಶಿಸ್ತನ್ನು ಅನುಸರಿಸುತ್ತಿದ್ದರು ಮಾತ್ರವಲ್ಲದೆ ಪೆÇೀರ್ಚುಗೀಸರೊಡನೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದ್ದರು.
ಮೈಸೂರಿನ ಒಡೆಯರು
ಮೊದಲಿಗೆ ಶ್ರೀರಂಗಪಟ್ಟಣ ಮತ್ತು ಆನಂತರ ಮೈಸೂರನ್ನು ರಾಜಧಾನಿಯನ್ನಾಗಿ ಹೊಂದಿ ಆಳಿದ ಮೈಸೂರಿನ ಅರಸರ ಸ್ಪಷ್ಟ ಇತಿಹಾಸ ಆರಂಭವಾಗುವುದು ರಾಜ ಒಡೆಯರ ಕಾಲದಿಂದ. 1578ರಲ್ಲಿ ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಅರವೀಡು ಮನೆತನದ ರಾಜ ಪ್ರತಿನಿಧಿಯಾಗಿದ್ದ ರಾಮನನ್ನು ಸೋಲಿಸಿ ಸ್ವತಂತ್ರರಾಜರಾದ ಒಡೆಯರು ನಂತರ ಅನೇಕ ಪಾಳೆಯಗಾರರನ್ನು ಗೆದ್ದು ಮೈಸೂರು ಸಂಸ್ಥಾನವನ್ನು ವಿಸ್ತರಿಸಿದರು. 1ನೆಯ ಕಂಠೀರವ ನರಸರಾಜ ಒಡೆಯರ್ (ಕ್ರಿ.ಶ. 1638-1662) ಅವರ ಕಾಲದಲ್ಲಿ ಮೈಸೂರು ಸಂಸ್ಥಾನದ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಿದವು. ಚಿಕ್ಕದೇವರಾಜ ಒಡೆಯರ (ಕ್ರಿ.ಶ. 1672-1704) ಕಾಲದಲ್ಲಿ ಹಲವಾರು ಪಾಳೆಯ ಪಟ್ಟುಗಳು ಮೈಸೂರು ಸಂಸ್ಥಾನಕ್ಕೆ ಸೇರಿದವು. ಮೊಗಲರು ಮತ್ತು ಮರಾಠರ ಹೋರಾಟಗಳನ್ನು ಗಮನಿಸುತ್ತಾ ರಾಜ್ಯ ವಿಸ್ತರಿಸಿ, ಮೊಗಲರ ವಶದಲ್ಲಿದ್ದ ಬೆಂಗಳೂರನ್ನು ಕೊಂಡ ಚಿಕ್ಕದೇವರಾಜ ಒಡೆಯರ ನಂತರ ಅಧಿಕಾರವು ದಳವಾಯಿಗಳ ಕೈಗಳಿಗೆ ಸೇರಿತು. ಹೆಸರಿಗೆ ಮಾತ್ರ ರಾಜರಿದ್ದರು. ಇಮ್ಮಡಿ ಕೃಷ್ಣರಾಜರ ಕಾಲದಲ್ಲಿ ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಸಾಮಾನ್ಯ ಸೈನಿಕನಾಗಿ ಸೇರಿದ ಹೈದರ್ ಆಲಿಯು ಆನಂತರ ದಳವಾಯಿಗಳ ಪ್ರಾಬಲ್ಯವನ್ನು ನಿಗ್ರಹಿಸಿದರೂ, ತಾನೇ ಸರ್ವಾಧಿಕಾರಿಯಾದ. ಅಧಿಕಾರವನ್ನು ತನ್ನಲ್ಲೇ ಕೇಂದ್ರೀಕರಿಸಿಕೊಂಡು ಹಲವು ಯುದ್ಧಗಳನ್ನು ಮಾಡಿ ರಾಜ್ಯವನ್ನು ವಿಸ್ತರಿಸಿದ ಮತ್ತು ರಕ್ಷಿಸಿದ. ಹೈದರನ ನಂತರ ಅವನ ಮಗ ಟಿಪ್ಪುಸುಲ್ತಾನ್ ಮೈಸೂರು ಸಂಸ್ಥಾನವನ್ನು ವಿಸ್ತರಿಸಿ, ಪ್ರಖ್ಯಾತಿಯನ್ನು ಪಡೆದ. ಬ್ರಿಟಿಷರೊಡನೆ ಹಲವಾರು ಯುದ್ಧಗಳನ್ನು ಮಾಡಿ ಸೋಲು - ಗೆಲುವುಗಳ ಮಿಶ್ರಣದ ಫಲವನ್ನು ಪಡೆಯುತ್ತಲೇ ಕೊನೆಗೆ ಕ್ರಿ.ಶ. 1799ರಲ್ಲಿ ನಡೆದ 4ನೆಯ ಮೈಸೂರು ಯುದ್ಧದಲ್ಲಿ ಮರಣ ಹೊಂದಿದ. ಕರ್ನಾಟಕದಿಂದ ಬ್ರಿಟಿಷರನ್ನು ಹೊರದೂಡುವ ಆಸೆ ಟಿಪ್ಪುವಿಗಿತ್ತು.
ಟಿಪ್ಪುವಿನ ಮರಣಾನಂತರ ಮೈಸೂರು ಸಂಸ್ಥಾನವನ್ನು ಬ್ರಿಟಿಷರು, ಮರಾಠರು ಮತ್ತು ಹೈದರಾಬಾದ್ ನಿಜಾಮರು ಹಂಚಿಕೊಂಡರು. ಬ್ರಿಟಿಷರು ಮೈಸೂರು ಸಂಸ್ಥಾನಿಕರಿಗೇ ರಾಜ್ಯಾಧಿಕಾರ ನೀಡಿದರು. ಅಪ್ರಾಪ್ತ ವಯಸ್ಸಿನ ಮುಮ್ಮಡಿ ಕೃಷ್ಣರಾಜಒಡೆಯರ್ ಪಟ್ಟಕ್ಕೆ ಬಂದರು. ಬ್ರಿಟಿಷ್ ರೆಸಿಡೆಂಟರೇ ಆಡಳಿತದ ಮೇಲ್ವಿಚಾರಕರಾಗಿದ್ದರು. ಕ್ರಿ.ಶ. 1831ರಲ್ಲಿ ಕೃಷ್ಣರಾಜ ಒಡೆಯರ್ ಆಡಳಿತವು ದುರ್ಬಲವಾಗಿದೆಯೆಂದು, ತಾವೇ ಆಡಳಿತದ ಪೂರ್ಣಾಧಿಕಾರ ಪಡೆದ ಬ್ರಿಟಿಷರು ನಂತರ 1881ರಲ್ಲಿ ರಾಜ್ಯವನ್ನು ಮೈಸೂರು ಒಡೆಯರಿಗೆ ಮತ್ತೆ ಒಪ್ಪಿಸಿದರು. ಆಗ 6ನೆಯ ಚಾಮರಾಜ ಒಡೆಯರು ಅಧಿಕಾರ ವಹಿಸಿಕೊಂಡರು. ಮೊದಲು ಸರ್ ಮಾರ್ಕ್ ಕಬ್ಷನ್ ಮತ್ತು ಬೌರಿಂಗ್ ಅವರುಗಳು ಕಮೀಷನರಾಗಿದ್ದರು. ನಂತರ ದಿವಾನರು ರಾಜರಿಗೆ ಆಡಳಿತದಲ್ಲಿ ನೆರವಾದರು. ದಿವಾನ್ ಪೂರ್ಣಯ್ಯ, ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ಪಿ.ಎನ್. ಕೃಷ್ಣಮೂರ್ತಿ, ಕಾಂತರಾಜ ಅರಸು, ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರುಗಳ ಕಾಲದಲ್ಲಿ ಅನೇಕ ಪ್ರಗತಿಪರ ಕೆಲಸಗಳು ನಡೆದು ಮೈಸೂರು ಮಾದರಿ ಸಂಸ್ಥಾನವೆಂದು ಹೆಸರು ಪಡೆಯಿತು. ಕ್ರಿ.ಶ. 1940ರಲ್ಲಿ ಪಟ್ಟಕ್ಕೆ ಬಂದು 1947ರ ವರೆಗೆ ಆಳಿದ ಜಯಚಾಮರಾಜ ಒಡೆಯರು ಮೈಸೂರು ಸಂಸ್ಥಾನದ ಕೊನೆಯ ದೊರೆ ಎನಿಸಿಕೊಂಡರು. ಕ್ರಿ.ಶ. 1830ರ ನಂತರ ಮೈಸೂರು ಸಂಸ್ಥಾನದಲ್ಲಿ ಹಲವಾರು ವಿದ್ಯಾಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳು, ಆಸ್ಪತ್ರೆಗಳು, ರೈಲು ಮಾರ್ಗಗಳು ಆರಂಭಗೊಂಡು ಸಾರ್ಥಕ ಪ್ರಗತಿ ಸಾಧಿಸಿದವು.