ವಿಶೇಷ ಸೂಚನೆ

ಜಟ್ಟಿ ತಾಯಮ್ಮ

ಮೈಸೂರು ಶೈಲಿಯ ಭರತನಾಟ್ಯವನ್ನು ಪ್ರಚುರಪಡಿಸಿದ ಪಾರಂಪರಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ನಾಟ್ಯಕಲೆಗೆ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ನೃತ್ಯ ಕಲಾವಿದೆ ಜಟ್ಟಿತಾಯಮ್ಮ. ಜನನ ೧೮೫೭ರ ಅಕ್ಟೋಬರ್ ೧೦ರಂದು.

ಸಂಸ್ಕೃತ, ಸಂಗೀತ ಕಲೆಗಳ ಬಲವಾದ ಅಡಿಪಾಯದೊಂದಿಗೆ ಭರತನಾಟ್ಯದಲ್ಲಿ ನೈಪುಣ್ಯವನ್ನು ಸಂಪಾದಿಸಿಕೊಂಡರು. ತಮ್ಮ ಪ್ರತಿಭೆ ವೈದುಷ್ಯಗಳಿಂದ ಆಸ್ಥಾನ ವಿದುಷಿಯ ಪಟ್ಟವನ್ನೂ ಪಡೆದುಕೊಂಡ ಜಟ್ಟಿತಾಯಮ್ಮನವರು ಸಂಸಾರದ ಜಂಜಾಟದಲ್ಲೂ ಕಮಲದಂತೆ ಅರಳಿದರು.

ಅಭಿನಯ ಪ್ರಧಾನವಾದ ಮೈಸೂರು ಶೈಲಿಯ ಭರತನಾಟ್ಯವನ್ನು ಸಫಲವಾಗಿ ಸಮೃದ್ಧಗೊಳಿಸಿದರು. ಅವರು ನಿರೂಪಿಸಿದ್ದ ಜಾವಳಿಗಳು ಅಚ್ಚಳಿಯದ ಅನುಭವವನ್ನುಂಟು ಮಾಡುತ್ತಿದ್ದುವಂತೆ, ರಾಜರಾದಿಯಾಗಿ, ಪರಿಣತ ಹಾಗೂ ಸಾಮಾನ್ಯ ಕಲಾರಸಿಕನೂ ಅವರ ನರ್ತನವನ್ನು ಆಸ್ವಾದಿಸುವಷ್ಟು ಆಕರ್ಷಣೆ ಮತ್ತು ಕಲಾಶ್ರೀಮಂತಿಕೆ ತುಂಬಿ ತುಳುಕಾಡುತ್ತಿತ್ತು. ಉತ್ಕಷ್ಟ ಕಲಾಪ್ರದರ್ಶಕಿಯಷ್ಟೇ ಅಲ್ಲದೆ ಉತ್ತಮ ಹಾಗೂ ಆದರ್ಶ ಗುರುವಾಗಿಯೂ ಜಟ್ಟಿತಾಯಮ್ಮನವರ ಕೊಡುಗೆ ಅಪಾರ. ಸರಸ - ಸರಳ ವ್ಯಕ್ತಿತ್ವದ ತಾಯಮ್ಮನವರು ಅನೇಕ ಶಿಷ್ಯರನ್ನು ತಯಾರಿಸಿದರು.

ಹೀಗೆ ಬಹುಮುಖ ವ್ಯಕ್ತಿತ್ವ, ಅಪೂರ್ವ ಪ್ರತಿಭೆ, ಮತ್ತು ಅಮೂಲ್ಯ ಕೊಡುಗೆಗಳಿಂದ ಜಟ್ಟಿತಾಯಮ್ಮನವರು "ನಾಟ್ಯ ಸರಸ್ವತಿ" ಎಂಬ ಬಿರುದಿಗೆ ಪಾತ್ರರಾದರು. ೯೧ ವರ್ಷಗಳ ಸಾರ್ಥಕ ಜೀವನವನ್ನು ನಡೆಸಿದ ಜಟ್ಟಿತಾಯಮ್ಮನವರು ೧೬-೧೧-೧೯೪೭ರಂದು ನಿಧನರಾದರು.