ವಿಶೇಷ ಸೂಚನೆ

ಡಾ|. ಮಲ್ಲಿಕಾರ್ಜುನ ಮನ್ಸೂರ

ಹಿಂದುಸ್ಥಾನಿ ಸಂಗೀತ ಭೀಷ್ಮಾಚಾರ್ಯ ಎಂದೇ ಸಂಗೀತವಲಯದಲ್ಲಿ ಪ್ರಸಿದ್ಧರಾಗಿದ್ದ ಮಲ್ಲಿಕಾರ್ಜುನ ಮನ್ಸೂರ ಜನಿಸಿದ್ದು, ೧೯೧೦ ಡಿಸೆಂಬರ್ ೩೧ ರಂದು ಧಾರವಾಡ ಜಿಲ್ಲೆಯ ಮನಸೂರಿನಲ್ಲಿ. ತಂದೆ ಭೀಮರಾಯಪ್ಪ, ತಾಯಿ ನೀಲಮ್ಮ.ಜೀವನದ ಕಷ್ಟಗಳನ್ನು ಸಂಗೀತದ ಆನಂದದಲ್ಲಿ ಮರೆತ ಮನ್ಸೂರರು, ಸಂಗೀತಕ್ಕಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡರು. ತಂದೆಯ ನಾಟಕ - ಸಂಗೀತ - ದೊಡ್ಡಾಟಗಳಲ್ಲಿಯ ಆಸಕ್ತಿ ಹಾಗೂ ತಾಯಿಗಿದ್ದ ಜಾನಪದ ಹಾಡುಗಳಲ್ಲಿನ ಆಸಕ್ತಿಯಿಂದಾಗಿ ಬಾಲಕ ಮಲ್ಲಿಕಾರ್ಜುನನಿಗೆ ಬಾಲ್ಯದಲ್ಲಿಯೇ ಸಂಗೀತ ವಾತಾವರಣ ಲಭ್ಯವಾಗಿ ಸಂಗೀತಾಸಕ್ತಿ ಬೆಳೆಯಲು ಪ್ರೇರಣೆಯಾಯಿತು.

ಸಂಗೀತದ ಗುಂಗು ಹಿಡಿದು, ವಿದ್ಯಾಭ್ಯಾಸಕ್ಕೆ ಶರಣು ಹೊಡೆದ ಮಲ್ಲಿಕಾರ್ಜುನ, ಅಣ್ಣ ಬಸವರಾಜರು ಸೇರಿದ್ದ, ವಿಶ್ವಗುಣದರ್ಶನ ನಾಟಕ ಕಂಪನಿ ಸೇರಿದರು. ಭಕ್ತಪ್ರಹ್ಲಾದ, ಧೃವ, ನಾರದ ಮುಂತಾದ ಪಾತ್ರಗಳಲ್ಲಿ ಇಂಪಾಗಿ ಹಾಡಿದ ಈ ಬಾಲಕನ ಕಂ� ಮಾಧುರ್ಯಕ್ಕೆ ಪ್ರೇಕ್ಷಕರು ಮನಸೋತರು. ಆಗ ನಾಟಕ ನೋಡಲು ಬಂದಿದ್ದ ಸುಪ್ರಸಿದ್ಧ ಸಂಗೀತಗಾರ ನೀಲಕಂ� ಬುವಾ ಮಿರಜಿ ಅವರು ಮಲ್ಲಿಕಾರ್ಜುನ ಪ್ರತಿಭೆಗೆ ಮಾರುಹೋಗಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.

ಗುರು ನೀಲಕಂ� ಬುವಾ ಅವರಲ್ಲಿ ಆರು ವರ್ಷಗಳ ಕಾಲ ಗ್ವಾಲಿಯರ್ ಘರಾಣಿಯಲ್ಲಿ ಸಂಗೀತಾಭ್ಯಾಸ ಮಾಡಿ, ಪೂರ್ಣ ಪ್ರಮಾಣದ ಗಾಯಕನಾಗಿ ಹೊರಹೊಮ್ಮಿದ ಮಲ್ಲಿಕಾರ್ಜುನ ಮತ್ತೆ ವಿಶ್ವಗುಣಾದರ್ಶಕ ನಾಟಕ ಕಂಪೆನಿಯಲ್ಲಿ ಸಂಗೀತ ನಿರ್ದೇಶಕರಾಗಿ ಸೇರಿದರು. ನಂತರ ಈ ನಾಟಕ ಕಂಪೆನಿ ಬೆಂಕಿಗೀಡಾದಾಗ, ಸಂಪೂರ್ಣವಾಗಿ ರಂಗಭೂಮಿಗೆ ವಿದಾಯ ಹೇಳಿ ಮುಂದೆ ಸಂಗೀತಕ್ಕೆ ಜೀವನವನ್ನು ಮುಡಿಪಾಗಿಟ್ಟರು.

ಮಲ್ಲಿಕಾರ್ಜುನರ ಗೌಡ ಮಲ್ಹಾರ, ಅಡಾಣಾ ರಾಗದಲ್ಲಿ ಭಾವಗೀತೆ, � ುಮುರಿ, ನಾಟ್ಯಗೀತೆಗಳ ಧ್ವನಿಮುದ್ರಿಕೆಯನ್ನು ಕೇಳಿದ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಮಂಜೀಖಾನ್ ಸಾಹೇಬರು,ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಸಂಗೀತಧಾರೆಯೆರೆದರು.ಗ್ವಾಲಿಯರ್ ಹಾಗೂ ಜೈಪುರ್ ಘರಾಣಿಗಳೆರಡರಲ್ಲೂ ಸಾಧನೆ ಮಾಡಿ ದೇಶ - ವಿದೇಶಗಳಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿ ಪ್ರಖ್ಯಾತರಾದರು.

ವಚನಗಳನ್ನು, ಕಾವ್ಯವಚನ ಪದ್ಧತಿಯಲ್ಲಿ ಹಾಡಬೇಕೋ ಅಥವಾ ಕಾಲಕ್ಕೆ ಹೊಂದಿಸಿ ಹಾಡಬೇಕೋ ಎಂಬ ವಿಷಯದಲ್ಲಿ ವಾದ - ವಿವಾದವಿದ್ದ ಸಮಯದಲ್ಲಿ, ಮನ್ಸೂರರು ಅ.ನ.ಕೃ ಹಾಗೂ ಶಿ.ಶಿ.ಬಸವನಾಳರ ಸ್ಫೂರ್ತಿಯಿಂದ, ವಚನಗಳ ಅರ್ಥ ಕೆಡದಂತೆ ಸ್ವರ ಸಂಯೋಜಿಸಿ ಹಾಡುವ ಮೂಲಕ ಜನ ಮನಗೆದ್ದರು. ಇವರು ಹಾಡಿದ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ ಎಂಬ ಅಕ್ಕ ಮಹಾದೇವಿಯ ವಚನ. ಸಂಗೀತ ಪ್ರೇಮಿಗಳ ನೆನಪಿನಂಗಳದಲ್ಲಿ ಸದಾ ಹಚ್ಚು ಹಸಿರು. ಮನ್ಸೂರರು ಸಂಬಂಧ, ಚಂದ್ರಹಾಸ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

"ನಾನು ಆ ದಿವ್ಯ ರಸಯಾತ್ರೆಯ ಪಥಿಕ, ಹಾಡುತ್ತ ಹಾಡುತ್ತ ನಡೆಯುವುದೇ ನನ್ನ ಧ್ಯೇಯ, ಕೊನೆಯ ಶ್ವಾಸದವರೆಗೂ ನನ್ನೀ ಸಂಗೀತದ ಶಿವಪೂಜೆ ನಿರಂತರ" ಎಂದು ನುಡಿದ ಮನ್ಸೂರರು, ಮಾತಿನಂತೆಯೇ ನಡೆದರು. ಅಂತೆಯೇ ಈ ಸಂಗೀತ ಸಾಮ್ರಾಟನಿಗೆ ಸಂದ ಪ್ರಶಸ್ತಿ - ಗೌರವಗಳು ಅಸಂಖ್ಯ. ಅವುಗಳಲ್ಲಿ ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ಸಾರ್ವಜನಿಕ ಸೇವಾ ಪ್ರಶಸ್ತಿ, ಕೇಂದ್ರಸಕರ್ಾರದ ’ಪದ್ಮಶ್ರೀ' ಪದ್ಮವಿಭೂಷಣ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕಾಳಿದಾಸ ಸಮ್ಮಾನ ಪ್ರಶಸ್ತಿ, ಕಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕೋತ್ತಮ ಪ್ರಶಸ್ತಿ, ಹಫೀಜ್ ಆಲಿಖಾನ್ ಪ್ರಶಸ್ತಿ, ಮುಂತಾದವು ಪ್ರಮುಖವಾದವು.೧೯೯೨ರಲ್ಲಿ ನಮ್ಮನ್ನಗಲಿದ ಈ ಸಂಗೀತ ಸಾಧಕ ಇಂದಿಗೂ ತಮ್ಮ ಸಂಗೀತದಿಂದ ನಮ್ಮ ಹೃದಯದಲ್ಲುಳಿದಿರುವರು.