ವಿಶೇಷ ಸೂಚನೆ

ಆರ್. ಕೆ. ಶ್ರೀಕಂಠನ್

ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರು, ಗಾಯಕರು, ಹಾಗೂ ವಿದ್ವಾಂಸರಾದ ಶ್ರೀ ಆರ್.ಕೆ. ಶಶ್ರೀಕಂಠನ್ ಅವರ ಜನನ ೧೯೨೦ರಲ್ಲಿ ಸಂಗೀತಕ್ಕೆ ಪ್ರಖ್ಯಾತವಾದ ಕುಟುಂಬದಲ್ಲಿ. ತಂದೆ ಕೃಷ್ಣಶಾಸ್ತ್ರಿಗಳು, ತಾಯಿ ಸಣ್ಣಮ್ಮ, ಹುಟ್ಟೂರು ಹಾಸನ ಜಿಲ್ಲೆಯ ರುದ್ರಪಟ್ಟಣಂ.
ಹರಿಕಥಾದಾಸರು, ಸಂಗೀತ ವಿದ್ವಾಂಸರು, ಕವಿಗಳೂ ಆಗಿದ್ದ ತಂದೆ ಕೃಷ್ಣಶಾಸ್ತ್ರಿಗಳು, ಎರಡು ವರ್ಷದ ಬಾಲಕ ಶಶ್ರೀಕಂಠನ್ ನನ್ನು ಸಂಗೀತ ಕಚೇರಿಗಳಿಗೆ ಕರೆದ್ಯೊಯ್ಯುತ್ತಿದ್ದರಂತೆ. ಇದರ ಪರಿಣಾಮ ಶ್ರೀಕಂಠನ್ ಅವರಿಗೆ ಸಂಗೀತದಲ್ಲಿ ಅಭಿರುಚಿ ಮೂಡಿತು. ತಂದೆ ಕೃಷ್ಣಶಾಸ್ತ್ರೀ ಅವರಿಂದ ಸಂಗೀತದ 'ಸರಿಗಮ' ಓನಾಮ ಕಲಿತ ಶಶ್ರೀಕಂಠನ್ ನ್, ಮುಂದೆ ಸಹೋದರ ಆರ್.ಕೆ. ವೆಂಕಟರಾಮಾಶಾಸ್ತ್ರೀ, ಮುಸುರಿ ಸುಬ್ರಹ್ಮಣ್ಯ, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಅರಿಯಕುಡಿ ರಾಮಾನುಜಂ ಅಯ್ಯಂಗಾರ್, ಶಮ್ಮನಗುಡಿ ಶ್ರೀನಿವಾಸ ಅಯ್ಯಂಗಾರ್ ಹೀಗೆ ಸಂಗೀತದ ದಿಗ್ಗಜರುಗಳಿಂದ ಸಂಗೀತದ ಪಾಠ ಕಲಿತು ಪರಿಣತರಾದರು.

೧೯೫೦ರಲ್ಲಿ ಬೆಂಗಳೂರಿನ ಆಕಾಶವಾಣಿ ನಿಲಯದ ಸಂಗೀತ ವಿಭಾಗದ ಮುಖ್ಯ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿತೊಡಗಿದ ಶ್ರೀಕಂಠನ್ ೧೯೮೧ರಲ್ಲಿ ನಿವೃತ್ತರಾಗುವವರೆಗೂ, ಆ ಕ್ಷೇತ್ರದಲ್ಲಿ ದಕ್ಷತೆಯಿಂದ ದುಡಿದು ಹೆಸರುಗಳಿಸಿದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ "ಸಂಗೀತ ಭಾರತಿ" ಎಂಬ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕರ್ನಾಟಕ ಸಂಗೀತದ ಯಾವುದೇ ಕೃತಿಗಳನ್ನಾಗಲಿ, ದಾಸರ ಪದಗಳನ್ನಾಗಲೀ ಶಶ್ರೀಕಂಠನ್ರ ಕಂಠ ದಲ್ಲಿ ಕೇಳುವುದೆಂದರೆ ಅದೊಂದು ರಸದೌತಣವೇ ಸರಿ.ಶ್ರೀಯುತರು ದೇಶ-ವಿದೇಶಗಳಲ್ಲಿ ತಮ್ಮ ಕಾರ್ಯಕ್ರಮ ನೀಡಿ ಜನಮನ್ನಣೆಗಳಿಸಿದ್ದಾರೆ. ಅಷ್ಟೇ ಅಲ್ಲದೇ ಕೇರಳದ ಪಾಲ್ಘಾಟ್ನ ಸಂಗೀತ ಕಾಲೇಜಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ, ಅಮೇರಿಕಾ, ನ್ಯೂಯಾರ್ಕ್, ಕೆನಡಾ ಮುಂತಾದೆಡೆ ಸಂಗೀತದ ಉಪನ್ಯಾಸಗಳನ್ನೂ ನೀಡಿದ್ದಾರೆ.

ಶ್ರೀಕಂಠನ್ ನ್ರ ಸಂಗೀತ ಪ್ರತಿಭೆಗೆ ಸಂದ ಪ್ರಶಸ್ತಿ - ಗೌರವ - ಪುರಸ್ಕಾರಗಳು ಹಲವು. ಅವುಗಳಲ್ಲಿ - ತಿರುವಂತನಪುರದ ಅರಮನೆಯಲ್ಲಿ ಪ್ರತಿವರ್ಷ ನಡೆಯುವ ನವರಾತ್ರಿ ಉತ್ಸವವದಲ್ಲಿ ಶ್ರೀಯುತರು ವಿಶೇಷ ಆಹ್ವಾನಿತರು. ಬೆಂಗಳೂರಿನ ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿ 'ಸಂಗೀತ ಕಲಾರತ್ನ' ಎಂಬ ಬಿರುದಿಗೆ ಪಾತ್ರರಾಗಿದ್ದು, ಕೇಂದ್ರ ಸಂಗೀತ ಅಕಾಡೆಮಿ ಹಾಗೂ ರಾಜ್ಯ ಸಂಗೀತ ಅಕಾಡೆಮಿಗಳ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕನಕ - ಪುರಂದರ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು, ತಿರುಪತಿ ತ್ಯಾಗರಾಜ ಸಂಗೀತ ಟ್ರಸ್ಟಿನ `ಸಪ್ತಗಿರಿ ಸಂಗೀತ ವಿದ್ವತ್ ವಾಣಿ' ಪ್ರಶಸ್ತಿ, ಚೆನ್ನೈ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ ಪ್ರಶಸ್ತಿ ಪ್ರಮುಖವಾದುವು.