ವಿಶೇಷ ಸೂಚನೆ

ಡಾ|| ಸಿ.ವಿ.ರಾಮನ್

ಅಪ್ರತಿಮ ಚಿಂತನಕಾರ, ಪ್ರಯೋಗಶೀಲ ಪಟು, ಉಪನ್ಯಾಸಕಾರ ಹಾಗೂ ಭಾರತೀಯ ವಿಜ್ಞಾನದ ಮುನ್ನಡೆಗೆ ಅವಿಶ್ರಾಂತವಾಗಿ ದುಡಿದು ನೊಬೆಲ್ ಬಹುಮಾನ ವಿಜೇತರಾಗಿ ಭಾರತಕ್ಕೆ ಪ್ರಪಂಚದಲ್ಲಿ ವಿಶಿಷ್ಟ ಸ್ಥಾನ ದೊರಕಿಸಿಕೊಟ್ಟವರು ಡಾ||ಸಿ.ವಿ.ರಾಮನ್.
ತಮ್ಮ ಹದಿನೈದನೆ ವಯಸ್ಸಿಗೆ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ.ಪದವಿಯಲ್ಲಿ, ಭೌತವಿಜ್ಞಾನ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬಂಗಾರದ ಪದಕಗಳನ್ನು ಪಡೆದರು. ಆಗಲೇ ರಾಮನ್ ವೈಜ್ಞಾನಿಕ ವಿಷಯಗಳನ್ನು ಆಸಕ್ತಿಯಿಂದ ಓದಿ ಅರಗಿಸಿಕೊಳ್ಳುತ್ತಿದ್ದರು. ಮುಂದೆ ಇವರು ಜೀವನದ ನಿರ್ವಹಣೆಗಾಗಿ ಫೈನಾನ್ಷಿಯರ್ ಸಿವಿಲ್ ಪರೀಕ್ಷೆಯನ್ನು ಅಗ್ರಪಂಕ್ತಿಯಲ್ಲಿ ತೇರ್ಗಡೆ ಹೊಂದಿ, ಕಲ್ಕತ್ತೆಯ ಸಹಾಯಕ ಅಕೌಂಟೆಂಟ್ ಜನರಲ್ ಹುದ್ದೆಯನ್ನು ಗಳಿಸಿದರು. ಆದರೂ ರಾಮನ್ರ ಮನಸ್ಸು ವಿಜ್ಞಾನದ ಸಂಶೋಧನೆಗಳತ್ತಲೇ ತುಡಿಯುತ್ತಿತ್ತು. ಅನೇಕ ಸಲ ತಮ್ಮ ಮನೆಯನ್ನೇ ಪ್ರಯೋಗಾಲಯ ಮಾಡಿದ್ದುಂಟು. ಇವರ ಪ್ರತಿಭೆಯನ್ನು ಗುರುತಿಸಿದ ಕಲ್ಕತ್ತಾ ವಿಶ್ವವಿದ್ಯಾಲಯ ಭೌತಶಾಸ್ತ್ರದ ಪ್ರೊಫೆಸರ್ ಹುದ್ದೆಗೆ ಆಹ್ವಾನಿಸಿತು. ಭೌತವಿಜ್ಞಾನ ರಾಮನ್ರಿಗೆ ಅಚ್ಚು ಮೆಚ್ಚಿನ ವಿಷಯವಾದ್ದದರಿಂದ ಕಡಿಮೆ ಸಂಬಳದ ಈ ಹುದ್ದೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಮುಂದೆ ೧೯೧೯ರಲ್ಲಿ ರಾಮನರು ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಶನ್ ಆಫ್ ಸೈನ್ಸ್ ಸಂಸ್ಥೆಯ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು.

೧೯೨೧ರಲ್ಲಿ ಅಶುತೋಷ ಮುಖರ್ಜಿಯವರ ಒತ್ತಾಯದಿಂದ ಯುರೋಪಿಗೆ ಪ್ರಯಾಣ ಬೆಳೆಸಿದ ರಾಮನರು ಹಡಗಿನಲ್ಲಿ ಪ್ರಯಾಣಿಸುವಾಗ ಅವರ ದೃಷ್ಟಿ ಸಮುದ್ರದ ನೀರಿನ ನೀಲಿ ಬಣ್ಣದ ಮೇಲೆ ಹರಿಯಿತು. ಲಾರ್ಡ್ರ್ಯಾಲೆ ಈ ನೀಲಿ ಬಣ್ಣ ಆಕಾಶದ ಪ್ರತಿಬಿಂಬದಿಂದ ಉಂಟಾಗಿದೆಯೆಂದು ವಿಶ್ಲೇಷಿಸಿದ್ದು ತಪ್ಪೆಂದು, ಅದು ಸಮುದ್ರದ ನೀರಿನಲ್ಲಿ ಅಣುಗಳು ಬೆಳಕನ್ನು ಚದರಿಸುವುದೇ ನೀಲಿಬಣ್ಣಕ್ಕೆ ಕಾರಣವೆಂದು ರಾಮನ್ರು ಪ್ರಯೋಗದ ಮೂಲಕ ಸಾಧಿಸಿ ತೋರಿಸಿದರು. ಮುಂದೇ ೧೯೨೨ರಲ್ಲಿ ಅಣುಗಳ ಪ್ರಭಾವದಿಂದ ಬೆಳಕಿನ ವಿವರ್ತನೆ ಎಂಬ ಪ್ರಸಿದ್ಧವಾದ ವಿದ್ವತ್ಪೂರ್ಣ ಲೇಖನವನ್ನು ಮಂಡಿಸಿ, ೧೯೨೪ರಲ್ಲಿ ನೊಬೇಲ್ ಬಹುಮಾನ ಪಡೆದರು.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಡೈರೆಕ್ಟರ್ ಹುದ್ದೆಯನ್ನು ೧೯೩೩ರಲ್ಲಿ ಸ್ವೀಕರಿಸಿದ್ದ, ರಾಮನ್ರು ಆಡಳಿತ ವರ್ಗದವರ ಅಸಹಕಾರದಿಂದ ಕೆಲವೇ ದಿನಗಳಲ್ಲಿ ಆ ಹುದ್ದೆಯನ್ನು ತ್ಯಜಿಸಿ ಕೇವಲ ಪ್ರಾಧ್ಯಾಪಕರಾಗಿ ಉಳಿದರು. ೧೯೩೪ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ಸ್ ಎಂಬ ನೂತನ ಸಂಸ್ಥೆ ಸ್ಥಾಪಿಸಿದ ರಾಮನರು ಅಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ರಾಮನ್ರು ಕೇವಲ ಸಂಶೋಧಕರಲ್ಲದೆ, ಉತ್ತಮ ಉಪನ್ಯಾಸಕರು ಆಗಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸದಾ ತಮ್ಮೊಡನೆ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅನೇಕ ವಿಜ್ಞಾನಿಗಳನ್ನು ಬೆಳಕಿಗೆ ತಂದ ಕೀರ್ತಿ ಇವರದು.

ನಿವೃತ್ತಿಯ ನಂತರ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಹಾಗೂ ಪ್ರಯೋಗಾಲಯ ಸ್ಥಾಪಿಸಬೇಕೆಂದಿದ್ದ ರಾಮನರ ಕನಸು ದುರದೃಷ್ಟದಿಂದ ನನಸಾಗಲೇಯಿಲ್ಲ. ಆದರೂ ಧೈರ್ಯಗುಂದದ ರಾಮನ್ರು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನ್ನು ಸ್ಥಾಪಿಸಿದರಲ್ಲದೇ ರತ್ನ ಮತ್ತು ವಜ್ರಗಳನ್ನು ಶೇಖರಿಸಿ ಮ್ಯೂಜಿಯಂ ತೆರೆದರು. ಬೆಳಕಿನ ಕಿರಣಗಳು ವಜ್ರಗಳ ಮೇಲೆ ಬಿದ್ದಾಗ ಪರಿಣಮಿಸುವ ಘಟನೆಗಳನ್ನು ಅಧ್ಯಯನ ಮಾಡಿ, ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದು, ರಾಷ್ಟ್ರೀಯ - ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದರು. ಜೀವನದುದ್ದಕ್ಕೂ ವಿಜ್ಞಾನದ ಹುಚ್ಚನ್ನು ಹಚ್ಚಿಕೊಂಡೇಯಿದ್ದ ರಾಮನರು ೧೯೭೦ರ ನವೆಂಬರ್ ೨೧ರಂದು ದೈವಾಧೀನರಾದರು.