|
||
ತಮ್ಮ ೨೩ನೇ ವಯಸ್ಸಿನಲ್ಲಿ ಮುಂಬೈ ಸರಕಾರದ ಲೋಕೋಪಯೋಗಿ ವಿಭಾಗದ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಖಡಕವಾಸ್ಲಾ ಸರೋವರದ ನೀರು ಕೋಡಿ ಹರಿದು ಹೋಗದಂತೆ ತಾನಾಗಿ ಮುಚ್ಚಿ ತೆರೆಯುವ ಕವಾಟ ವ್ಯವಸ್ಥೆ ಮಾಡಿದ ವಿಶ್ವೇಶ್ವರಯ್ಯನವರ ಜಾಣತನ ಎಲ್ಲರನ್ನೂ ಬೆರಗುಗೊಳಿಸಿತು. ನಂತರ ಸಿಂಧ್ ಪ್ರಾಂತ್ಯದ ಸುಕ್ಕೂರಿನ ನೀರು - ಸರಬರಾಜು ಮತ್ತು ಚರಂಡಿ ವ್ಯವಸ್ಥೆಯ ಕಾರ್ಯ ಇವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿತು. |
||
ನಾಲ್ವಡಿ ಕೃಷ್ಣರಾಯರ ಆಳ್ವಿಕೆಯಲ್ಲಿ ದಿವಾನರಾಗಿದ್ದ, ವಿ.ಪಿ. ಮಾಧವರಾಯರ ಆಹ್ವಾನದ ಮೇರೆಗೆ ಮೈಸೂರಿಗೆ ಬಂದ ವಿಶ್ವೇಶ್ವರಯ್ಯನವರು ೧೯೦೯ರ ನವೆಂಬರ್ ೧೫ರಂದು ಮುಖ್ಯ ಇಂಜಿನಿಯರ್ ಆಗಿ ಮುಂದೆ ೧೯೧೨ರಲ್ಲಿ ದಿವಾನರಾಗಿ ನೇಮಕಗೊಂಡರು. ಆಗ ರಾಜ್ಯದ ಸರ್ವಾಂಗೀಣ ಪ್ರಗತಿಗೆ ತಕ್ಕ ಮಾರ್ಗದರ್ಶನ ಮಾಡಿದ್ದ ಫಲವಾಗಿ ಕೃಷ್ಣರಾಜಸಾಗರ ಆಣೆಕಟ್ಟು, ಭದ್ರಾವತಿ ಕಬ್ಷಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬೆಂಗಳೂರುಗಳಲ್ಲಿ ಮೊದಲ ಬಾರಿಗೆ ಪುಸ್ತಕ ಭಂಡಾರಗಳು, ಮೈಸೂರು ಬ್ಯಾಂಕ್, ಮೈಸೂರು ವಾಣಿಜ್ಯ ಮಂಡಳಿ, ಸರ್ಕಾರಿ ಸಾಬೂನು ಕಾರ್ಖಾನೆ, ಗಂಧದೆಣ್ಣೆ ಕಾರ್ಖಾನೆ, ಮೈಸೂರು ಪೇಪರ್ ಮಿಲ್ಸ್, ಗ್ರಾಮೀಣ ನ್ಯಾಯಾಲಯಗಳು, ಗ್ರಾಮಪಂಚಾಯಿತಿ, ಮಲೆನಾಡು ಅಭಿವೃದ್ಧಿ ಮಂಡಳಿ, ಬೆಂಗಳೂರು ಎಂಜಿನಿಯರಿಂಗ್ ಕಾಲೇಜ್, ರೇಷ್ಮೆ ಇಲಾಖೆ, ಚರ್ಮ ಹದಮಾಡುವ ಕಾರ್ಖಾನೆಗಳು ರೂಪು ತಾಳಿದವು. |
||
ವಿಶ್ವೇಶ್ವರಯ್ಯನವರು ೧೯೧೯ರಲ್ಲಿ ದಿವಾನಗಿರಿಯಿಂದ ನಿವೃತ್ತರಾದ ಮೇಲೂ, ಮೈಸೂರಿನ ಹಾಗೂ ಭಾರತದ ಮುನ್ನಡೆಗಾಗಿ ಶ್ರಮಿಸಿ ನವ ಮೈಸೂರಿನ ನಿರ್ಮಾಪಕರೆಂಬ ಕೀತರ್ಿಗೆ ಪಾತ್ರರಾದರು. ವಿಶ್ವೇಶ್ವರಯ್ಯನವರು ದೇಶದ ಒಳ ಹೊರಗೆ ಸಲ್ಲಿಸಿದ ಸೇವೆಗಾಗಿ, ಹಲವು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ೧೯೫೫ರಲ್ಲಿ ಭಾರತ ಸರ್ಕಾರ "ಭಾರತರತ್ನ ಪ್ರಶಸ್ತಿ" ನೀಡಿ ಗೌರವಿಸಿತು. ಶ್ರೀಯುತರಿಗೆ ನೂರು ವರ್ಷ ತುಂಬಿದಾಗ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಭಾಗವಹಿಸಿದ್ದು, ಆಗ ಭಾರತ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿತು. ಹೀಗೆ ಅವರಿಗೆ ಸಂದ ಪ್ರಶಸ್ತಿ - ಪುರಸ್ಕಾರಗಳು ಹಲವು. |
||
ನಾಡಿನ ಹಾಗೂ ನಾಡಿನ ಜನತೆಯ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಭಾರತರತ್ನ ವಿಶ್ವೇಶ್ವರಯ್ಯ ೧೯೬೨ ಏಪ್ರಿಲ್ ೧೪ರಂದು ತಮ್ಮ ೧೦೨ನೇ ವಯಸ್ಸಿನಲ್ಲಿ ನಿಧನರಾದರು. |