ವಿಶೇಷ ಸೂಚನೆ

ಸವಾಯಿ ಗಂಧರ್ವ

ನಾಡಿನ ಪ್ರಖ್ಯಾತ ಗಾಯಕ ಹಾಗೂ ಅತ್ಯುತ್ತಮ ನಟ ರಾಮಭಾವು ಕುಂದಗೋಳಕರ, ಸವಾಯಿ ಗಂಧರ್ವರೆಂಬ ಬಿರುದಾಂಕಿತದಿಂದಲೇ ಚಿರಪರಿಚಿತರು. ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ೧೮೮೬ರಲ್ಲಿ ಇವರ ಜನನ.
ಚಿಕ್ಕಂದಿನಿಂದಲೆ ಸಂಗೀತದ ಮೋಡಿಗೆ ಒಳಗಾಗಿದ್ದ ಇವರು,ತಂದೆ ಗಣಪತರಾವ್ ಸಂಶಿ ಅವರ ಉತ್ತೇಜನದಿಂದ, ಬಳವಂತರಾವ ಕೊಲ್ಹಟಕ ಅವರಲ್ಲಿ ಸಂಗೀತಭ್ಯಾಸ ನಡೆಸಿ, ಕೇವಲ ಒಂದೂವರೆ ವರ್ಷದಲ್ಲಿ ೭೫ ದ್ರುಪದ್, ೨೫ ತರಾಣೆ, ೧೦೦ ಚೀಜ್ ಮತ್ತು ತಾಳಗಳನ್ನು ಹಸ್ತಗತ ಮಾಡಿಕೊಂಡು ಬಾಲಗವಾಯಿಗಳೆಂದೇ ಪ್ರಸಿದ್ಧರಾದರು.

ನಂತರ ೧೯೦೦ ರಿಂದ ೧೯೦೭ರ ವರೆಗೆ ಕಿರಾಣಾ ಘರಾಣಿಯ ಪ್ರವರ್ತಕ ಅಬ್ದುಲ್ ಕರೀಮ್ಖಾನ್ರ ಶಿಷ್ಯರಾಗಿದ್ದರು. ಗ್ವಾಲಿಯರ್ ಘರಾಣಿಯ ನಿಸ್ಸಾರ್ ಹುಸೇನ್ ಖಾನ್ರ ಸಂಪರ್ಕದಿಂದ ಇವರ ಸಂಗೀತಕ್ಕೆ ವಿಶೇಷ ಮೆರುಗು ಬಂತು. ಇವರ ಗಾಯನ ಎಂದರೆ ಆಲಾಪ, ಮೀಂಡ್, ಬಢತ್, ಫಸೀಟ್ ತಾನ್, ಪಲಟಾ, ಮೋಲ್ತಾನೆ, ಮೂರ್ಛನಾ, ಖಟಕಾ, ಮುರಕಿಗಳ ನಳಪಾಕ. ಸ್ವಂತದ್ದು ಸೇರಿದಂತೆ ಹಲವಾರು ನಾಟಕ ಕಂಪೆನಿಗಳಲ್ಲಿ ಗಾಯಕನಟರಾಗಿದ್ದ ಇವರು ಸ್ತ್ರೀಪಾತ್ರಗಳ ನಟನೆಯಲ್ಲೂ ಸಿದ್ದಹಸ್ತರು. ೧೯೧೯ರಲ್ಲಿ ಉಮರಾವತಿಯಲ್ಲಿ ಕಲಾಭಿಮಾನಿಗಳಿಂದ ಸವಾಯಿ ಗಂಧರ್ವ ಎಂಬ ಬಿರುದಿಗೆ ಪಾತ್ರರಾದರು. ಅಂದಿನಿಂದ ಅದೇ ಶಾಶ್ವತ ಹೆಸರಾಗಿ ಉಳಿಯಿತು. ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಫಿರೋಜ್ ದಸ್ತೂರ, ಬಸವರಾಜ ರಾಜಗುರು ಮುಂತಾದ ಶ್ರೇಷ್ಟ ಗಾಯಕರೆಲ್ಲರೂ ಇವರ ಶಿಷ್ಯಂದಿರು.