ವಿಶೇಷ ಸೂಚನೆ

ಸುವರ್ಣ ಕರ್ನಾಟಕ ಭವನಗಳು

ಸುವರ್ಣ ಕರ್ನಾಟಕ

ಕರ್ನಾಟಕವು ಏಕೀಕರಣಗೊಂಡು 50 ವರ್ಷಗಳು ಸಂದಿರುವ ಸಂದರ್ಭದಲ್ಲಿ 2006ರ ನವೆಂಬರ್ 1ರಂದು ಸುವರ್ಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು. ಈ ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ ಸುವರ್ಣ ಸಂಸ್ಕøತಿ ದಿಬ್ಬಣ, ಜಾನಪದ ಜಾತ್ರೆ, ಸುವರ್ಣ ಪ್ರಕಟಣೆಗಳು, ಸುವರ್ಣ ಸಾಹಿತ್ಯ ಮಾಲೆಯಡಿ 103 ಪುಸ್ತಕಗಳ ಮುದ್ರಣ, ಹೊನ್ನಾರು ಮಾಲೆಯಡಿ 40 ಗ್ರಂಥಗಳ ಪ್ರಕಟಣೆ, ಕನ್ನಡ ವಿಶ್ವಕೋಶ, ಸುವರ್ಣ ಸಾಂಸ್ಕøತಿಕ ಸಮುಚ್ಚಯಗಳು, ಗಡಿಭಾಗಗಳಲ್ಲಿ ಸುವರ್ಣ ಭಾವೈಕ್ಯತೆ ಸಂಸ್ಕøತಿ ಸಂಭ್ರಮ, ಗಡಿಭಾಗಗಳಲ್ಲಿ ಕನ್ನಡ ಭವನ ನಿರ್ಮಾಣ, ಸುವರ್ಣ ರಂಗಮಂದಿರ ನಿರ್ಮಾಣ, ಆಡಳಿತ ವ್ಯಾಪ್ತಿಯ ಸಂಸ್ಥೆಗಳ ಮೂಲಕ ಸ್ವರ್ಣ ಜಯಂತಿ, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸುವರ್ಣ ಸಂಸ್ಕøತಿ ವೈಭವ, ರಾಜಧಾನಿಯಲ್ಲಿ ಸುವರ್ಣ ಜಯಂತಿ, ಏಕೀಕರಣ ಪ್ರಶಸ್ತಿಗಳು, ರಾಷ್ಟ್ರಕವಿ ಪುರಸ್ಕಾರ, ವಿಶ್ವ ಕನ್ನಡ ಸಮ್ಮೇಳನ, ಹೊರ ರಾಜ್ಯಗಳಲ್ಲಿ ಸುವರ್ಣ ಜಯಂತಿ ಆಚರಣೆ, ಸುವರ್ಣ ಅಂಚೆಚೀಟಿ ಮುದ್ರಣ, ಸುವರ್ಣ ಕರ್ನಾಟಕ ಶಿಲ್ಪವನ, ಸುವರ್ಣ ಕರ್ನಾಟಕದ ನೃತ್ಯರೂಪಕ, ಸುವರ್ಣ ಕರ್ನಾಟಕ ಕಲಾಮೇಳ, ಸುವರ್ಣ ಕರ್ನಾಟಕ ಆಶಯಗೀತೆ, ಜಿಂಗಲ್ಸ್ ಮತ್ತು ದಿಬ್ಬಣದ ಹಾಡುಗಳು, ಸುವರ್ಣ ಗೀತ ಸಂಭ್ರಮ, ಸುವರ್ಣ ಸಿಂಚನ, ಬಹುಮಾಧ್ಯಮ ಪ್ರಚಾರಾಂದೋಲನ, ಇ-ಪ್ರಗತಿ ರೂಪಕ, ರಂಗಾಯಣದ ರಂಗಯಾತ್ರೆ ಯೋಜನೆ, ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜಾನಪದ ಜಾತ್ರೆ

ಕರ್ನಾಟಕದಲ್ಲಿ ಸುಮಾರು ಒಂದು ನೂರ ಎಂಬತ್ತಕ್ಕೂ ಹೆಚ್ಚಿನ ಜನಪದ ಕಲೆಗಳು ಅಸ್ತಿತ್ವದಲ್ಲಿವೆ. ಜೊತೆಗೆ ಕರಕುಶಲ, ಕೌಶಲ್ಯ ಮತ್ತು ಪ್ರಸಾದನ ಕಲೆಗಳ ಭಂಡಾರವೂ ಸಂಮೃದ್ಧವಾಗಿದೆ. ಈ ಎಲ್ಲ ಕಲಾ ಸಂಮೃದ್ಧತೆಯನ್ನು ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಗಳಿಗೆ ಪರಿಚಯಿಸುವ ಮೂಲಕ ಆಧುನಿಕ ಸಮಾಜಕ್ಕೆ ನಮ್ಮ ಪರಂಪರೆಯ ಮಹತ್ವವನ್ನು ಮನಗಾಣಿಸುವುದು ಜಾನಪದ ಜಾತ್ರೆಯ ಪ್ರಮುಖ ಉದ್ದೇಶ. ಜಾನಪದ ಜಾತ್ರೆ ಎಂದರೆ ಅದೊಂದು ನಗರ ಮತ್ತು ಗ್ರಾಮೀಣ ಸಮಾಜಗಳ ಅರ್ಥಪೂರ್ಣ ತಿಳುವಳಿಕೆಯ ಸಮ್ಮಿಲನ. ಆಧುನಿಕ ಬದುಕು ಮನುಷ್ಯನಲ್ಲಿ ಏಕತಾನತೆಯನ್ನು ತುಂಬಿದೆ. ಯಾಂತ್ರಿಕ ಜೀವನ ಅವನಿಗೆ ನಿರಂತರ ಬೇಸರವನ್ನು ಉಂಟುಮಾಡಿದೆ. ಅಂಥ ಮನಸ್ಸುಗಳು ತಮ್ಮ ಮನಸ್ಸಿನ ಹಗುರಕ್ಕಾಗಿ ಹೊಸ ದಾರಿಗಳ ಕಡೆಗೆ ಹೊರಳುತ್ತಿವೆ. ಎಲ್ಲೋ ಕಳೆದುಹೋಗುತ್ತಿರುವ ನಮ್ಮ ಸಾಂಸ್ಕøತಿಕ ಬದುಕಿನ ಕಡೆಗೆ ವಿಕ್ಷಿಪ್ತಗೊಂಡ ಮನಸ್ಸುಗಳನ್ನು ಹೊರಳಿಸುವುದು ಈ ಜಾತ್ರೆಯಿಂದ ಸಾಧ್ಯ. ರಜಾ ದಿನಗಳಲ್ಲಿ ಇಂಥ ಜಾತ್ರೆಗಳನ್ನು ಏರ್ಪಡಿಸುವ ಮೂಲಕ ಹಳ್ಳಿಗಾಡಿನ ದೇಸಿ ಪ್ರಜ್ಞೆಯನ್ನು ಹಾಗೂ ಅವರ ಪ್ರತಿಭಾಶಕ್ತಿಯನ್ನು ನಗರದ ಜನತೆಗೆ ಪರಿಚಯಿಸುವುದು ಈ ಜಾತ್ರೆಯ ಮತ್ತೊಂದು ಉದ್ದೇಶ. ಇದೊಂದು ಪರಸ್ಪರ ಕೊಳು-ಕೊಡುಗೆಯ ವಿಚಾರ. ವಿವಿಧ ಜನಪದ ಕಲಾ ತಂಡಗಳು ರಾಜಧಾನಿ ಬೆಂಗಳೂರು ಮತ್ತು ಇತರ ಜಿಲ್ಲಾ ಕೇಂದ್ರಗಳಿಗೆ ಆಗಮಿಸಿ ನಿರ್ದಿಷ್ಟ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತವೆ. ಅದೇ ಸಂದರ್ಭದಲ್ಲಿ ನಗರದ ಜನತೆ ತಮ್ಮ ನೆಲದ ಮೂಲ ಸಂಸ್ಕøತಿಯ ಬಗ್ಗೆ ಎಚ್ಚರಗೊಳ್ಳುತ್ತಾರೆ. ಒಂದು ರೀತಿಯಲ್ಲಿ ಇದೊಂದು ಸುವರ್ಣ ಸಮ್ಮಿಲನ.

ಜಾನಪದ ಜಾತ್ರೆಯನ್ನು ಸಂಘಟಿಸುವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಲವು ಹಂತಗಳ ಪೂರ್ವ ಸಿದ್ಧತೆಯಲ್ಲಿ ಕಾರ್ಯತತ್ಪರವಾಗಿದೆ. ಸರ್ಕಾರ ರಚಿಸಿರುವ ಉನ್ನತ ಸಲಹಾ ಸಮಿತಿಯ ತಜ್ಞರ ಸಲಹೆ ಮೇರೆಗೆ ಕಲಾಪ್ರಕಾರಗಳನ್ನು ಆಯ್ಕೆ ಮಾಡಲಾಗಿದೆ. ತಜ್ಞರು, ಸಂಘಟಕರು ಮತ್ತು ಕಲಾ ಪರಿಣತರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಲಾದ ಕಲಾತಂಡಗಳಿಗೆ ತರಬೇತಿಯನ್ನು ನೀಡಲಾಗಿದೆ. ತರಬೇತಿಯಲ್ಲಿ ಕಲಾತಂಡಗಳು ಅನುಸರಿಸಬೇಕಾದ ಶಿಸ್ತು, ನಿರ್ದಿಷ್ಟ ಸಮಯ ಪ್ರಜ್ಞೆ, ಕಲೆಗೆ ಸೂಕ್ತವಾದ ವಸ್ತ್ರ ವಿನ್ಯಾಸ, ಆಧುನಿಕ ಮನಸ್ಸುಗಳನ್ನು ಸ್ಪಂದಿಸುವ ಬಗೆ ಮುಂತಾಗಿ ತಿಳುವಳಿಕೆ ನೀಡಲಾಗಿದೆ. ಕಲೆಯ ಮೂಲ ಸ್ವರೂಪ ಎಲ್ಲಿಯೂ ಕೆಡದಂತೆ ಆದರೆ ಆಧುನಿಕ ಪರಿಸರಕ್ಕೆ ಸ್ಪಂದಿಸುವಂತೆ ಕಲಾವಿದರನ್ನು ಹಾಗೂ ಪ್ರೇಕ್ಷಕರನ್ನು ಸಜ್ಜುಗೊಳಿಸುವ ಪ್ರಯತ್ನವೂ ಇಲ್ಲಿ ನಡೆದಿದೆ. ನಾಡಿನಾದ್ಯಂತ ಇರುವ ಗ್ರಾಮೀಣ ಯುವಕಲಾವಿದರು ಈ ಮಹತ್ವಪೂರ್ಣ ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವರಲ್ಲಿ ಆರ್ಥಿಕ ಬಲವನ್ನು ತುಂಬುವ ಕೆಲಸವನ್ನೂ ಮಾಡಲಾಗುತ್ತಿದೆ. ನಮ್ಮ ಕಲೆಯನ್ನು ಯಾರು ಕೇಳುತ್ತಾರೆ ಎಂಬ ಕೀಳರಿಮೆ ತುಂಬಿದ ಹಿರಿಯ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವೂ ನಡೆದಿದೆ. ಒಟ್ಟಿನಲ್ಲಿ ಕರ್ನಾಟಕದಾದ್ಯಂತ ನೂರಾರು ಕಲಾತಂಡಗಳು ವೈವಿಧ್ಯಮಯ ಪ್ರದರ್ಶನ ನೀಡುವ ಮೂಲಕ ಒಂದು ಸಾಂಸ್ಕøತಿಕ ಚಳುವಳಿಗೆ ನಾಂದಿ ಹಾಡುತ್ತಾರೆ ಎಂಬುದು ಸರ್ಕಾರದ ಆಶಯ. ಒಂದು ರೀತಿಯಲ್ಲಿ ಇದು ದೇಸಿ ಸಂಸ್ಕøತಿಯ ಪ್ರಚಾರಾಂದೋಲನ. ಬಹುಮುಖ್ಯವಾದ ಅಂಶವೆಂದರೆ ಈ ಆಂದೋಲನ ಒಂದು ಉದ್ಯಮವಾಗಿ ರೂಪುಗೊಳ್ಳುವ ಮೂಲಕ ಹಳ್ಳಿಗಾಡಿನ ಯುವಕರು ಆರ್ಥಿಕ ಲಾಭ ಪಡೆಯುವಂತಾಗಬೇಕು ಎಂಬುದು ಜಾತ್ರೆಯ ಮೂಲ ಆಶಯ.

ಬೆಂಗಳೂರಿನ ಜನತೆ ಜನಪದ ಕಲೆಗಳನ್ನು ಆಪ್ತವಾಗಿ ಸ್ವೀಕರಿಸಿದ್ದಾರೆ ಮತ್ತು ಹಳ್ಳಿಗಾಡಿನ ಕಲಾವಿದರನ್ನು ಪ್ರೀತಿಯಿಂದ ಆದರಿಸಿದ್ದಾರೆ. ನಗರ ಮತ್ತು ಗ್ರಾಮೀಣ ಜನತೆಯ ನಡುವೆ ಸಾಂಸ್ಕøತಿಕ ಸಂಬಂಧವನ್ನು ಏರ್ಪಡಿಸುವ ಮೂಲಕ ಅರ್ಥಪೂರ್ಣ ಸಮ್ಮಿಲನವನ್ನು ಸಾಧಿಸಬೇಕೆಂಬ ಸರ್ಕಾರದ ಆಶಯ ನಿಜಕ್ಕೂ ಸಫಲಗೊಂಡಿದೆ. ಇದನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವುದು ಈಗಿನ ನಮ್ಮ ಉದ್ದೇಶ.

2007-08ನೇ ಸಾಲಿನಲ್ಲಿ ಬೆಂಗಳೂರಿನ ಲಾಲ್‍ಬಾಗ್ ಹಾಗೂ ವಿಧಾನಸೌಧದಲ್ಲಿ ಸೇರಿದಂತೆ ಮುಂಬೈ, ಕೊಲ್ಕತ್ತಾ ಹಾಗೂ ರಾಜ್ಯದ ವಿವಿಧಕಡೆಗಳಲ್ಲಿ ಒಟ್ಟು 15 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.

2008-09ನೇ ಸಾಲಿನಲ್ಲಿ ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಸೇರಿದಂತೆ, ರಾಜ್ಯದ ವಿವಿಧಕಡೆಗಳಲ್ಲಿ ಒಟ್ಟು 09 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.

2009-10ನೇ ಸಾಲಿನಲ್ಲಿ ಬೆಂಗಳೂರಿನ ಲಾಲ್‍ಬಾಗ್ ಸೇರಿದಂತೆ ರಾಜ್ಯದ ವಿವಿಧಕಡೆಗಳಲ್ಲಿ ಒಟ್ಟು 05 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.

2010-11ನೇ ಸಾಲಿನಲ್ಲಿ ಬೆಂಗಳೂರಿನ ಕಲಾಗ್ರಾಮದಲ್ಲಿ 03 ಜಾನಪದ ತರಬೇತಿಗಳು ಹಾಗೂ ಸ್ವತಂತ್ರ್ಯ ಉದ್ಯಾನವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಪದ್ಮನಾಭನಗರ ಹಾಗೂ ಬೀದರ್ ಜಿಲ್ಲೆ ಸೇರಿದಂತೆ ಒಟ್ಟು 06 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.

2011-12ನೇ ಸಾಲಿನಲ್ಲಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಪಾರ್ಕ್ ಹಾಗೂ ಕನಕಪುರ ತಾಲೂಕು ತುಂಗಣಿ ಗ್ರಾಮದಲ್ಲಿ ಮತ್ತು ಗದಗ ಜಿಲ್ಲೆ ರೋಣ ತಾಲೂಕು ಸೇರಿದಂತೆ ಒಟ್ಟು 03 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.

2012-13ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ, ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಹಾಗೂ ರಾಮನಗರ ಜಿಲ್ಲೆಯ ಸಾಹಸಕಲಾ ಅಕಾಡೆಮಿ ಸೇರಿದಂತೆ ಒಟ್ಟು 03 ಜಾನಪದ ಜಾತ್ರೆಗಳನ್ನು ಏರ್ಪಡಿಸಲಾಗಿದೆ.