ವಿಶೇಷ ಸೂಚನೆ

ಯು.ಆರ್.ಅನಂತಮೂರ್ತಿ

ಡಾ||ಯು.ಆರ್.ಅನಂತಮೂರ್ತಿ ಅವರು ಸೂಕ್ಷ್ಮಾತಿಸೂಕ್ಷ್ಮ ಭಾವನೆಗಳನ್ನು, ಗಹನವಾದ ವಿಚಾರಗಳನ್ನು ಹಿಡಿದಿಡುವ ಶಕ್ತಿಯನ್ನು ಭಾಷೆಗೆ ಕೊಟ್ಟವರು.ಆಧುನಿಕ ಸಂವೇದನೆಗಳನ್ನು ಅಭಿವ್ಯಕ್ತಿಗೊಳಿಸಲು ಭಾಷೆಯನ್ನು ಹದಗೊಳಿಸಿದವರು. ಗದ್ಯದಲ್ಲಿ ಬರೆದರೂ ಕಾವ್ಯದ ಪರಿಣಾಮವನ್ನುಂಟು ಮಾಡುವುದು ಅವರ ಕಥೆಗಳ ವೈಶಿಷ್ಟ್ಯ.ಅದ್ಭುತ ಕಲಾಕೃತಿಗಳಾದ ಅವರ ಸಣ್ಣಕಥೆಗಳು ದೇಶ ಹಾಗೂ ಪ್ರಪಂಚದ ಅನೇಕ ಭಾಷೆಗಳಿಗೆ ಭಾಷಾಂತರವಾಗಿವೆ. ಅಡಿಗರ ಮಾತಿನಲ್ಲಿ "ನಿಜವಾದ ಸಾಹಿತ್ಯ ಕೃತಿಗಳು".

ಅನಂತಮೂರ್ತಿಯವರ ’ಸಂಸ್ಕಾರ' ಕನ್ನಡ ಸಾಹಿತ್ಯ ವಲಯದಲ್ಲಿ ವಿದ್ಯುತ್ ಸಂಚಾರ ಮಾಡಿದ, ಹೆಚ್ಚು ಚರ್ಚೆಗೊಳಗಾದ ಕಾದಂಬರಿ. ಚಲನಚಿತ್ರವಾಗಿ `ಸ್ವರ್ಣಕಮಲ' ವನ್ನು ಪಡೆದ ಕಾದಂಬರಿ. ಅದ್ಭುತ ಮಾತುಗಾರರಾದ ಅನಂತಮೂರ್ತಿ ಅಡಿಗರ ಕಾವ್ಯವನ್ನು ಪರಿಚಯಿಸುತ್ತಾ ನವ್ಯಕಾವ್ಯದ ಮಾರ್ಗದರ್ಶಿಯಾದವರು. ಕನ್ನಡ ಸಾಹಿತ್ಯದ ಪರಂಪರೆಯಲ್ಲಿ ವಿಮರ್ಶೆಗೆ ಹೊಸ ಪರಿಕಲ್ಪನೆ ಹಾಗೂ ಆಲೋಚನೆಗಳ ಚಾಲನೆ ಕೊಟ್ಟವರು. ಸಮಾಜದ ಸಮಸ್ತಕ್ಕೂ ಪ್ರತಿಕ್ರಿಯಿಸುತ್ತಾ ’ರುಜುವಾತು' ಪತ್ರಿಕೆಯ ಸಂವಾದದ ಮೂಲಕ ಒಂದು ಆರೋಗ್ಯವಂತ ಸಾಹಿತ್ಯ ಪೀಳಿಗೆಯನ್ನು ಬೆಳೆಸಲು ಮಾಧ್ಯಮವಾದವರು.

ರಾಷ್ಟ್ರೀಯ ಸಂಕಿರಣಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಒಂದು ಎತ್ತರದ ಸ್ಥಾನ ಗಳಿಸಿಕೊಟ್ಟವರಲ್ಲಿ ಪ್ರಮುಖರು.ಶಿವಮೊಗ್ಗ ಜಿಲ್ಲೆಯ ಮೇಳಿಗೆ ಹಳ್ಳಿಯಲ್ಲಿ ೨೧/೧೨/೧೯೩೬ ರಲ್ಲಿ ಹುಟ್ಟಿದರು. ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ತೀರ್ಥಹಳ್ಳಿ ಮತ್ತು ಮೈಸೂರಿನಲ್ಲಿ ಓದು ಮುಂದುವರಿಕೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ. ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋಗಿ ಕಾಮನ್ವೆಲ್ತ್ ವಿದ್ಯಾರ್ಥಿವೇತನ ಪಡೆದು ಬರ್ಮಿಂಗ್ಹ್ಯಾಂ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ ರಲ್ಲಿ ಪಿ.ಹೆಚ್.ಡಿ. ಪಡೆದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕೇರಳದ ಕೊಟ್ಟಾಯಂನಲ್ಲಿ ಗಾಂಧೀ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಹಾಗೂ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ದೇಶ ಹಾಗೂ ವಿದೇಶದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯದ ಸೊಬಗನ್ನು ವಿಶ್ವದಾದ್ಯಂತ ಹರಡಿದವರು. (ಜವಾಹರ ವಿದ್ಯಾಲಯ, ಜರ್ಮನಿಯ ತೊಬಿಂಗನ್ ವಿಶ್ವವಿದ್ಯಾನಿಲಯ ಇತ್ಯಾದಿ) ಇದಲ್ಲದೇ ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಸಮಿತಿಯ ಸದಸ್ಯರು.

ಅವರು ವಿದ್ವಜ್ಜನರ, ಸಮಾಜದ ಮೇರು ವ್ಯಕ್ತಿಗಳೊಡನೆ ನಡೆಸಿಕೊಟ್ಟ ಸಂದರ್ಶನ ಅಪರೂಪದ್ದು. (ಅಡಿಗ, ಕಾರಂತ, ಆರ್.ಕೆ.ನಾರಾಯಣ್, ಆರ್.ಕೆ. ಲಕ್ಷ್ಮಣ್, ಜನರಲ್ ಕಾರ್ಯಪ್ಪ, ಯು.ಆರ್.ರಾವ್) ಅವರು ಬರೆದ ಪ್ರಸಿದ್ಧ ಕಾದಂಬರಿಗಳು : ಸಂಸ್ಕಾರ, ಭಾರತೀಪುರ. ವಿಮರ್ಶಾ ಕೃತಿಗಳು: ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ, ಭವ. ಕವನಗಳು: ಮಿಥುನ, ಅಜ್ಜನ ಹೆಗಲ ಸುಕ್ಕುಗಳು. ಅವರ ಸಣ್ಣಕಥೆಗಳು: ಎಂದೆಂದೂ ಮುಗಿಯದ ಕಥೆ, ಕವಿಯ ಪೂರ್ಣಿಮೆ, ತಾಯಿ, ಹುಲಿಯ ಹೆಂಗರುಳು, ಖೋಜರಾಜ, ಪ್ರಕೃತಿ, ಪ್ರಶ್ನೆ, ಘಟಶ್ರಾದ್ಧ, ಕ್ಲಿಪ್ ಜಾಯಿಂಟ್, ಮೌನಿ, ನವಿಲುಗಳು, ಆಕ್ರಮಣ, ಸಂಯೋಗ, ಅಪೂರ್ವ, ಆಕಾಶ ಮತ್ತು ಬೆಟ್ಟ, ಸೂರ್ಯನಕುದುರೆ.

ಅವರಿಗೆ ಸಂದ ಪ್ರಶಸ್ತಿ, ಗೌರವಗಳು ಅಪಾರ. ೧೯೯೮ ರಲ್ಲಿ ಪದ್ಮಭೂಷಣ, ೧೯೯೪ ರಲ್ಲಿ ಜ್ಞಾನಪೀಠ , ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೮೩ ರಲ್ಲಿ, ಮಾಸ್ತಿ ಪ್ರಶಸ್ತಿ ೧೯೯೪ ರಲ್ಲಿ, (ಸಂಸ್ಕಾರ, ಘಟಶ್ರಾದ್ಧ, ಬರ) ಕಾದಂಬರಿ ಆಧಾರಿತ ಚಲನಚಿತ್ರಗಳಿಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ.ಅಡಿಗರ ಮಾತಿನಲ್ಲೇ ಮುಗಿಸುವುದಾದರೆ "ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆಯಲಾರ, ಯಾವ ಕೀರ್ತಿ ಪ್ರತಿಷ್ಠೆಯ ಆಕಾಂಕ್ಷೆಯಿಂದ ಅಪ್ರಮಾಣಿಕ ಕೃತಿ ರಚನೆಗೆ ಕೈ ಹಾಕಲಾರ" ಕನ್ನಡ ಸಾಹಿತ್ಯ ಕಂಡಿರುವ, ಅನುಭವಿಸುತ್ತಿರುವ ವಿಚಾರವಂತ, ಚಿಂತಕ, ವಾಗ್ಮಿ ಹಾಗೂ ಮೋಹಕ ವ್ಯಕ್ತಿ ಯು.ಆರ್. ಅನಂತಮೂರ್ತಿ.