ವಿಶೇಷ ಸೂಚನೆ

ಎಚ್. ಎಲ್. ಎನ್. ಸಿಂಹ

ಕನ್ನಡ ಚಲನಚಿತ್ರರಂಗದ ಆರಂಭದ ದಿನಗಳಲ್ಲಿ ನಟ, ಲೇಖಕ ಹಾಗೂ ದಿಗ್ದರ್ಶಕರೆಂದೇ ಖ್ಯಾತರಾಗಿದ್ದ ಎಚ್.ಎಲ್.ಎನ್.ಸಿಂಹ ಅವರು ಜನಿಸಿದ್ದು, ೧೯೦೪ರಲ್ಲಿ ಮಳವಳ್ಳಿಯಲ್ಲಿ.

ಕನ್ನಡ ವಾಕ್ಚಿತ್ರರಂಗದ ಆರಂಭದ ವರ್ಷಗಳಲ್ಲಿ ಪೌರಾಣಿಕ ಹಾಗೂ ಜಾನಪದ ವಸ್ತುಗಳೇ ಪ್ರಧಾನವಾಗಿದ್ದ ಚಲನಚಿತ್ರರಂಗಕ್ಕೆ 'ಸಂಸಾರ ನೌಕೆ' ಎಂಬ ಸಾಮಾಜಿಕ ಚಿತ್ರ ನೀಡಿ ಹೊಸ ಆಯಾಮವಿತ್ತ ಖ್ಯಾತಿಗೂ ಸಿಂಹರು ಪಾತ್ರರು. ಅಷ್ಟೇ ಅಲ್ಲದೇ ಚಲನಚಿತ್ರರಂಗದ ದಿಗ್ಗಜರಾದ ಡಾ||ರಾಜಕುಮಾರ, ಬಿ.ಆರ್. ಪಂತುಲು, ಜಿ.ವಿ.ಅಯ್ಯರ್, ಪಂಡರಿಬಾಯಿ, ನರಸಿಂಹರಾಜು ಮುಂತಾದ ನಟರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಾಟಕದಲ್ಲಿ ಅಭಿನಯಿಸುವ ಅವಕಾಶ ತಪ್ಪಿಹೋದದ್ದನ್ನೆ ಸವಾಲಾಗಿ ಸ್ವೀಕರಿಸಿ, "ಡೆಸ್ಟಿನಿ ರೂಲ್ಸ್ ಹ್ಯುಮ್ಯಾನಿಟಿ" ಎಂಬ ಇಂಗ್ಲೀಷ್ ನಾಟಕ ಬರೆದು ಅಭಿನಯಿಸಿದರು. ಇವರ ಈ ಛಲದ ಪರಿಣಾಮವೇ ಇವರು ಮುಂದೆ ’ಭಾರತ ಮನೋಲ್ಲಾಸಿನಿ ಕಂಪನಿ' ಸೇರಿದ್ದು ಅಲ್ಲಿ ಮಹಮ್ಮದ್ ಪೀರ್ ಹಾಸ್ಯಾಭಿನಯ ಇವರನ್ನು ವಿಶೇಷವಾಗಿ ಆಕರ್ಷಿಸಿತು. ಅನಂತರ ಸಿಂಹ ಅವರು ವೀರಣ್ಣನವರು ತಯಾರಿಸಿದ 'ಹಿಸ್ ಲವ್ ಅಫೇರ್ಸ್' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಮುಂದೆ ಮಹಮ್ಮದ್ ಪೀರರ ಕಂಪನಿಯ 'ಷಹಜಹಾನ್' ನಾಟಕದಲ್ಲಿ ನಾಯಕ ಪಾತ್ರದಲ್ಲಿ ಮಿಂಚಿದರು. ಪೀರ್ ಮತ್ತು ಸಿಂಹ ಅವರು ಒಂದೆ ನಾಣ್ಯದ ಎರಡು ಮುಖಗಳಂತೆ ”ಚಂದ್ರಕಲಾ ಮಂಡಳಿ' ಕಂಪನಿಯ ಪ್ರಗತಿಗಾಗಿ ದುಡಿದರು.

ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಿಗೆ ಬ್ರೇಕ್ ಹಾಕಿ ಸಾಮಾಜಿಕ ನಾಟಕ ಪ್ರದರ್ಶಿಸಬೇಕೆಂಬ ಗೆಳೆಯ ಪೀರ್ನ ಬಯಕೆಯ ಫಲವೇ ಸಿಂಹರ "ಸಂಸಾರ ನೌಕೆ" ನಾಟಕ. ಈ ನಾಟಕ ಉತ್ತರ ಕರ್ನಾಟಕದಲ್ಲಿ ಸತತ ಮೂರು ತಿಂಗಳ ಕಾಲ ಪ್ರದರ್ಶನಗೊಂಡು ಹೊಸ ಇತಿಹಾಸವನ್ನು ಸೃಷ್ಟಿಸಿ ಗೆಳೆಯರಿಬ್ಷರಿಗೂ ಕೀರ್ತಿ ತಂದಿತು. ಈ ಕೀರ್ತಿಯೇ ಮುಂದೆ ಸಿಂಹರನ್ನು ಸಿನಿಮಾ ಮಾಡುವ ಸಾಹಸಕ್ಕಿಳಿಸಿತು. ಮುಂದೆ ಸಿಂಹ ಅವರು ಮದರಾಸಿನ ಎ.ವಿ.ಎಂ ಹಾಗೂ ಗುಬ್ಷಿವೀರಣ್ಣನವರ ಸಹಭಾಗಿತ್ವದಲ್ಲಿ 'ಗುಣಸಾಗರಿ' ಚಿತ್ರ ನಿರ್ದೇಶಿಸಿದರು. ಅನಂತರ ಬೇಡರಕಣ್ಣಪ್ಪ ಹಾಗೂ ಅವರ ಸ್ವಂತ ಚಿತ್ರ ಸಂಸ್ಥೆಯಲ್ಲಿ 'ಅಬ್ಷಾ ಆ ಹುಡುಗಿ' ಚಿತ್ರ ನಿರ್ಮಿಸಿದರು. ಹೀಗೆ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಆಯಾಮವಿತ್ತು, ಅಪೂರ್ವ ಪ್ರತಿಭೆಗಳನ್ನು ರಂಗಕ್ಕೆ ನೀಡಿದ ಈ ಧೀಮಂತ ಜುಲೈ ೨ರ ೧೯೭೨ರಂದು ಇಹಲೋಕ ತ್ಯಜಿಸಿದರು.