ವಿಶೇಷ ಸೂಚನೆ

ದ.ರಾ.ಬೇಂದ್ರೆ

ಆಡು ನುಡಿಗಳು ಓಡೋಡಿ ಬಂದು ನುಡಿಗಾರುಡಿಗನ ಜೋಳಿಗೆಗೆ ಬಿದ್ದು ಪದಗಳಾಗಿ ಕುಣಿದು ದತ್ತನ ಕುಣಿಸಿದ್ದು ಕಾವ್ಯವಾಗಿ ಜನರನ್ನು ತಣಿಸಿದ್ದು ಕನ್ನಡ ಕಾವ್ಯ ಪರಂಪರೆಯ ಪವಾಡ ಸತ್ಯ. ಹುಚ್ಚೆದ್ದ ಭಾವನೆಗಳು ಬೆಟ್ಟನೆಯ ಮಾತಾಗಿ ಕಾವ್ಯ ಅಭಿನಯಿಸಿದ್ದು ವರಕವಿಯಲ್ಲಿ. ಶರಣರು, ದಾಸರು, ಸೂಫಿಗಳು, ನುಡಿಯ ಧಾರೆ ಎರದದ್ದು ಸಾಧನಕೇರಿಯ ಸಕ್ಕರೆ ಸಿಹಿಯ ಅವಧೂತ ಬೇಂದ್ರೆಯವರಿಗೆ ಸಾವು ಹಲವಾರು ಬಾರಿ ಹತ್ತಿರದವರೆಗೆ ಕೊಂಡೊಯ್ದರೂ ಚೈತನ್ಯದ ಚಿಲುಮೆಯಾಗಿ ಅರವಿಂದರ ಅಂತರಂಗವಾಗಿ, ಗಿಡಗಂಟೆಯ ಕೊರಳಾಗಿ, ತಾನೇ ಹಾಡಾಗಿ ಕಾವ್ಯದ ಗಂಗಾವತರಣ ಇಳಿಸಿದ್ದು ಅಂಬಿಕಾತನಯದತ್ತ. ’ಹಕ್ಕಿ ಹಾರುತಿದೆ' ಹಾಡಿ ಬೆಳಗಾಗುವುದರೊಳಗೆ ನಾಡಕವಿಯಾಗಿ, ಜನಮನದ ತುಂಬ ತುಂ ತುಂ ನಾದದ ದುಂಬಿಯಾದವರು ಬೇಂದ್ರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಪ್ರಪಂಚದ ಎಲ್ಲ ಶಾಸ್ತ್ರಗಳ ಬಗ್ಗೆ ಕುತೂಹಲ ಹಾಗೂ ಅಧ್ಯಯನ ನಡೆಸಿದವರು. ಅವರ ಗ್ರಂಥಾಲಯ ಬರಿ ಸಾಹಿತ್ಯವಲ್ಲ, ನಿಜವಾದ ಅರ್ಥದಲ್ಲಿ ಜ್ಞಾನ ಭಂಡಾರ. ಕಡೆಗೆ ಮರುಳಾದದ್ದು ಸಂಖ್ಯಾಶಾಸ್ತ್ರಕ್ಕೆ.

ಮಾಘಶುದ್ಧ 'ಗುರುಪ್ರತಿಪದಾ' ಮನ್ನಥನಾಮ ಸಂವತ್ಸರ ಧಾರವಾಡದ ಪೋತ್ನೀಸ್ ಓಣಿಯಲ್ಲಿ ಜನವರಿ ೩೧ ೧೮೯೬ ರಲ್ಲಿ ಜನನ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ. ಪರ್ಗ್ಯೂಸನ್ ಕಾಲೇಜ್ (ಪುಣೆಯಲ್ಲಿ) ಕಾಲೇಜ್ ಶಿಕ್ಷಣ. ಬೇಂದ್ರೆ ಮರಾ� ಿಗರಿಗೂ ಪ್ರೀತಿಯ ಕವಿ. ಅವರಿಂದ ಪುರಸ್ಕತರಾದವರು. ಅವರ ಕೆಲಸ (ವೃತ್ತಿ) ಮಾತ್ರ ಅನೇಕ ಕಡೆ. ಸರಿಬರದಿದ್ದಲ್ಲಿ ಕೆಲಸ ಬಿಡುವುದು ಬಟ್ಟೆ ತೆಗೆದಷ್ಟೇ ಸುಲಭ ಅವರಿಗೆ. ಕಷ್ಟಗಳು ಕವಿತೆಯಾಗಿ, ಅವರನ್ನು ಎನೂ ಮಾಡದೇ ಹೋದವು. ಜಯಕರ್ನಾಟಕ, ಸ್ವಧರ್ಮದಲ್ಲಿ ಪತ್ರಿಕಾ ವ್ಯವಸಾಯ. ೧೯೩೩ ರಲ್ಲಿ ಹಿಂಡಲಗ ಜೈಲುವಾಸ (ದೇಶಭಕ್ತಿ ಗೀತೆ ಬರೆದಿದ್ದಕ್ಕೆ) ೧೯೩೫ರಲ್ಲಿ ಎಂ.ಎ. ಪಾಸಾಗಿದ್ದು ಮತ್ತು ಅದೇ ವರ್ಷ ಮುಂಬೈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೧೯೧೮ ರಲ್ಲಿ ಪ್ರಥಮ ಕವನ ಸಂಕಲನ ಪ್ರಕಟಣೆ. ತುತ್ತೂರಿ ಎಚ್ಚರ, ಆಮೇಲೆ ಕಾವ್ಯಧಾರೆ ಕನ್ನಡಿಗರಿಗೆ. ಗರಿ, ಕಾಮಕಸ್ತೂರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಮೇಘದೂತ (ಕಾಳಿದಾಸ ಕಾವ್ಯದ ಭಾವಾನುವಾದ), ಪಾಡು ಹಾಡು, ಗಂಗಾವತರಣ, ಸೂರ್ಯಪಾನ, ಹೃದಯ ಸಮುದ್ರ, ಮುಕ್ತ ಕಂ� , ಅರಳು ಮರಳು, ನಮನ, ಮತ್ತೆ ಶ್ರಾವಣ ಬಂತು, ನಾಕುತಂತಿ ಇತ್ಯಾದಿ. ಶ್ರಾವಣ ಪ್ರತಿಭೆಯ ಕವಿಯ ಕೈಯಲ್ಲಿ ರೂಪ ಪಡೆದ ನಿಸರ್ಗ ವಸ್ತುಗಳು, ಭಾವಗಳು ಧನ್ಯತೆಯಲ್ಲಿ ಕವಿಗೆ ಶರಣಾಗಿದ್ದವು. ನಾಟಕ, ಕತೆ, ವಿಮರ್ಶೆ, ಎಲ್ಲದರಲ್ಲೂ ಕೃಷಿ. ನನಗೆ ಸಾಹಿತ್ಯವು ಶಾಸ್ತ್ರವಾಗಿ, ಧರ್ಮವಾಗಿ, ಯೋಗವಾಗಿ, ಜೀವನವೇ ಆಗಿ ಪರಿಣಮಿಸಿದೆ ಎಂದ ಬೇಂದ್ರೆಯ ಕವನಗಳು ಸತ್ಯದರ್ಶನದ ತುಣುಕುಗಳು.

ಕವಿಗೆ ಸಂದ ಪ್ರಶಸ್ತಿಗಳು ಅನೇಕ. ೧೯೬೮ ರಲ್ಲಿ ಪದ್ಮಶ್ರೀ, ೧೯೭೪ ರಲ್ಲಿ ಜ್ಷಾನಪೀ� 'ನಾಕುತಂತಿ' ಕವನ ಸಂಗ್ರಹಕ್ಕೆ, ೧೯೬೫ ರಲ್ಲಿ 'ಸಂಚಾರಿ' ಗಾಗಿ ಮಹಾರಾಷ್ಟ್ರ ಸರ್ಕಾರದಿಂದ ಕೇಳ್ಕರ್ ಪ್ರಶಸ್ತಿ, ೧೯೬೬ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ 'ಅರಳು ಮರಳು' ಗಾಗಿ, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್, ೧೯೪೩ ರಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಎಲ್ಲಕ್ಕಿಂತ ಮಿಗಿಲು ಅವರು ಸಾಧಾರಣ ಜನರಿಗೂ ಕವಿ. 'ವರಕವಿ' ಮಾತು ಮಾತು ಮಾತಿನ ರಾಮ. ಮಾತ ಮಥಿಸುತ್ತಾ ಮಾತನುಣಿಸುತ್ತಾ 'ಮಾತೆ' ಆದವರು ಸಾಧನಕೇರಿಯ ತಾತ. ಕನ್ನಡದ ಬರಿದಾಗದ ಸಂಪತ್ತು ಬೇಂದ್ರೆ.