ವಿಶೇಷ ಸೂಚನೆ

 

ನಾಡು-ನುಡಿ

ಹೊಸಗನ್ನಡ
ಕನ್ನಡವು 19ನೆಯ ಶತಮಾನದಲ್ಲಿ ಇಂಗ್ಲಿಷ್ ಜೊತೆ, ಆ ಮೂಲಕ ಆಧುನಿಕ ನಾಗರಿಕತೆಯ ಜೊತೆ ಸಂಪರ್ಕವನ್ನು ಪಡೆದಂದಿನಿಂದ ಹೊಸಗನ್ನಡದ ಆರಂಭ. ಈಗ ಇರುವ ಆಡುನುಡಿ ಕನ್ನಡದಲ್ಲಿ ನಾಲ್ಕು ಮುಖ್ಯ ಉಪಭಾಷಾ ಪ್ರದೇಶಗಳಿವೆ; ಆ ಒಂದೊಂದು ಉಪಭಾಷೆಯ ಒಳಗೂ ಉಪ-ಉಪಭಾಷಾ ಪ್ರದೇಶಗಳಿವೆ. ಮಂಗಳೂರು ಕನ್ನಡ ಅಥವಾ ಕಡಲತೀರದ ಕನ್ನಡ - ಇದು ವಿಶೇಷವಾಗಿ ತುಳುವಿನಿಂದ, ಸ್ವಲ್ಪಮಟ್ಟಿಗೆ ಮಲಯಾಳದಿಂದ ಪ್ರಭಾವಿತವಾಗಿವೆ; ಬೆಂಗಳೂರಿನ ಅಥವಾ ದಕ್ಷಿಣ ಭಾಗದ ಕನ್ನಡ ಉಪಭಾಷೆಗಳಲ್ಲೆಲ್ಲ ಇದು ಅತ್ಯಂತ ಮುಖ್ಯವಾದುದು; ಅದಕ್ಕೆ ಕಾರಣ ಇದು ರಾಜಧಾನಿಯ ಭಾಷೆಯಾಗಿರುವುದು. ಇದನ್ನೇ ವೃತ್ತಪತ್ರಿಕೆಗಳಲ್ಲಿ, ಆಕಾಶವಾಣಿ ದೂರದರ್ಶನಗಳಲ್ಲಿ ಬಳಸುವುದು. ಬೆಂಗಳೂರು ಕನ್ನಡದಲ್ಲಿ ಇಂಗ್ಲಿಷ್ ಪದಗಳ ಬಳಕೆ ಹೆಚ್ಚು. ಧಾರವಾಡದ ಅಥವಾ ಉತ್ತರದ ಕನ್ನಡ - ಇದರ ಮೇಲೆ ವಿಶೇಷವಾಗಿ ಮರಾಠಿ ಭಾಷೆಯ ಪ್ರಭಾವವಿದೆ; ಗುಲ್ಷರ್ಗದ ಕನ್ನಡ ಇದರ ಮೇಲೆ ವಿಶೇಷವಾಗಿ ಉರ್ದು ಪ್ರಭಾವವಿದೆ; ಈ ನಾಲ್ಕು ಭಾಷಿಕ ಪ್ರಭೇದಗಳಲ್ಲಿ ಬೆಂಗಳೂರು ಕನ್ನಡವು ಒಂದು ರೀತಿ ಎಲ್ಲ ಕಡೆ ಸಲ್ಲುವ ಭಾಷೆಯಾದರೂ ಆಯಾ ಪ್ರದೇಶಗಳ ಸಾಹಿತಿಗಳು ತಮ್ಮ ಕೃತಿಗಳಲ್ಲಿ - ಅದರಲ್ಲೂ ಸೃಜನಾತ್ಮಕ ಬರಹಗಳಲ್ಲಿ ತಮ್ಮ ಪ್ರದೇಶದ ಆಡುನುಡಿಯನ್ನು ಬಳಸಲು ಬಯಸುತ್ತಾರೆ. ಮತ್ತು ಪ್ರಾದೇಶಿಕ ಭಾಷೆಯ ಬಳಕೆಯು ಒಂದು ಸಾಹಿತ್ಯ ಕೃತಿಯನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗಿಲ್ಲ. ಇಷ್ಟಾದರೂ ಉಳಿದ ಭಾಷಾ ಪ್ರಭೇದಗಳ ಮೇಲೆ ಬೆಂಗಳೂರು ಕನ್ನಡದ ಪ್ರಭಾವವು ಅಪರಿಮಿತವಾಗಿದೆ. ಉಪಭಾಷಿಕ ವ್ಯತ್ಯಾಸಗಳು ದಿನದಿಂದ ದಿನಕ್ಕೆ ಕಡಿಮೆಯಾಗುವಲ್ಲಿ ಪ್ರಭಾವಶಾಲಿ ಪ್ರಸಾರಮಾಧ್ಯಮಗಳ ಪಾತ್ರವು ಮುಖ್ಯವಾದುವೇ ಆಗಿದೆ. ಮತ್ತು ಜನಕ್ಕೆ ಅರಿವಿಲ್ಲದೆಯೇ ಒಂದು ಸಮಾನ ಶಿಷ್ಟಭಾಷೆಯು ರೂಪುಗೊಳ್ಳುತ್ತಿದೆ.
ಲಿಪಿ
ಕನ್ನಡ ಲಿಪಿಗೂ ತೆಲುಗು ಲಿಪಿಗೂ ಅಂತಹ ಹೆಚ್ಚು ವ್ಯತ್ಯಾಸಗಳೇ ಇಲ್ಲ; ಹಾಗೆ ನೋಡಿದರೆ ವಿಜಯನಗರ ಕಾಲದವರೆಗೆ (16ನೇ ಶ.) ಅವೆರಡೂ ಒಂದೇ ಆಗಿದ್ದವು. ಕನ್ನಡ ಲಿಪಿಯು ಅಶೋಕನ ಬ್ರಾಹ್ಮೀಲಿಪಿಯ (ಕ್ರಿ.ಪೂ.3ನೇ ಶ.) ದಕ್ಷಿಣ ಪ್ರಭೇದದಿಂದ ಹುಟ್ಟಿ ಬಂದಿದೆ. ಬ್ರಾಹ್ಮೀಲಿಪಿಯ ಚಿಹ್ನೆಗಳು ಹೆಚ್ಚು ರೇಖಾತ್ಮಕವಾಗಿದ್ದು, ದಕ್ಷಿಣದಲ್ಲಿ ಬರೆಯಲು ತಾಳವೃಕ್ಷದ ಎಲೆಗಳನ್ನು ಬಳಸುತ್ತಿದ್ದುದು ಕಾರಣವಾಗಿ ಹೆಚ್ಚು ಹೆಚ್ಚು ಗುಂಡಗಾಗುತ್ತ ಬಂದುದೇ ಕನ್ನಡ - ತೆಲುಗು ಲಿಪಿಯು ತನ್ನ ರೂಪವನ್ನು ಪಡೆದುಕೊಳ್ಳಲು ಕಾರಣ. ಈಗಿನ ಲಿಪಿಯು ಕಲ್ಯಾಣ ಚಾಲುಕ್ಯರ ಮತ್ತು ಹೊಯ್ಸಳರ ಕಾಲದಲ್ಲಿ (11-12ನೇ ಶ.) ರೂಪುಗೊಂಡಿತು. ಅಂದಿನಿಂದ ಇಂದಿನವರೆಗೆ ಲಿಪಿಯು ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿದೆ. 19ನೇ ಶತಮಾನದಲ್ಲಿ ಮುದ್ರಣ ಯಂತ್ರದಿಂದಾಗಿ ಕನ್ನಡ ಲಿಪಿಯ ಚಿಹ್ನೆಗಳಲ್ಲಿ ಹಲವು ವ್ಯತ್ಯಾಸಗಳು ಕಾಣಿಸಿಕೊಂಡವು.
ಸ್ವರವ್ಯವಸ್ಥೆ
ಸಾಂಪ್ರದಾಯಿಕ ಆಧುನಿಕ ಕನ್ನಡ ಲಿಪಿಯಲ್ಲಿ ಐವತ್ತು `ಅಕ್ಷರ'ಗಳಿವೆ. ಇವುಗಳಲ್ಲಿ ಹದಿನಾರು ಸ್ವರಗಳು. ಮೂವತ್ತನಾಲ್ಕು ವ್ಯಂಜನಗಳನ್ನು ಮತ್ತೆ `ವರ್ಗೀಯ' ಎಂದು (25), `ಅವರ್ಗೀಯ' (9) ಎಂದು ವರ್ಗೀಕರಿಸಿದೆ. ಸ್ವರಗಳಲ್ಲಿ `ಮಾನಸ್ವರ' ಎಂದು ಭಾಷಾವಿಜ್ಞಾನಿಗಳು ಕರೆಯುವ ಅ, ಆ, ಇ, ಈ, ಉ, ಊ, ಎ, ಏ, ಐ, ಒ, ಓ, ಔ ಗಳೂ, ಐ ಔ ಎಂಬ ಎರಡು ಸಂಧ್ಯಕ್ಷರಗಳೂ ಋ ಋೂ ಎಂಬ ಎರಡು ಅರೆಸ್ವರಗಳೂ ಸೇರಿವೆ. ಇನ್ನೆರಡು ವಾಸ್ತವವಾಗಿ ಸ್ವರಗಳಲ್ಲ, ವ್ಯಂಜನಗಳು, ಸೊನ್ನೆ ಆಕಾರದ `ಬಿಂದು'ವನ್ನು ವರ್ಗೀಯ ವ್ಯಂಜನದ ಹಿಂದಿನ ಅನುನಾಸಿಕವನ್ನು ಸೂಚಿಸಲಿಕ್ಕೆ ಬಳಸುತ್ತಾರೆ. ವಿಸರ್ಗವು ವಾಸ್ತವವಾಗಿ ಕಾಕಲ್ಯ ಘರ್ಷ ವ್ಯಂಜನ.
ವರ್ಗೀಯ ವ್ಯಂಜನಗಳಲ್ಲಿ ಇಪ್ಪತ್ತು ಸ್ಪರ್ಶಗಳೂ ಐದು ಅನುನಾಸಿಕಗಳೂ ಸೇರಿದ್ದು, ಅವನ್ನು ಐದೈದರ ಐದು ವರ್ಗಗಳಾಗಿ ಗುಂಪುಗೂಡಿಸಿವೆ - ಕಂಠ್ಯಗಳು, ತಾಲವ್ಯಗಳು, ಮೂರ್ಧನ್ಯಗಳು, ದಂತ್ಯಗಳು ಮತ್ತು ಉಭಯೋಷ್ಠ್ಯ ಇವೇ ಆ ಐದು ವರ್ಗಗಳು. ಉಳಿದ ವ್ಯಂಜನಗಳನ್ನು ವರ್ಗವಾಗಿ ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಅವನ್ನು ಅವರ್ಗೀಯವೆಂದು ಕರೆದಿವೆ. ಅವು ಭಿನ್ನ ಭಿನ್ನ ಸ್ಥಾನಗಳಲ್ಲಿ ಹುಟ್ಟತಕ್ಕವು; ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ ಇವೇ ಅವರ್ಗೀಯಗಳು.
ಮೂಲದ್ರಾವಿಡದಲ್ಲಿ ಅಘೋಷ ಮತ್ತು ಘೋಷ ಸ್ಪರ್ಶ ವ್ಯಂಜನಗಳು ಉಪಸ್ವನಗಳಾಗಿದ್ದು, ಅವು ಒಂದು ಇನ್ನೊಂದು ಹೊರತುಪಡಿಸಿದ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿದ್ದುವೆಂದು ಈಗ ಬಹುಮಟ್ಟಿಗೆ ಒಪ್ಪಿತವಾಗಿರುವ ಸಂಗತಿ. ಈ ಲಕ್ಷಣವು ತಕ್ಕಮಟ್ಟಿಗೆ ಇಂದಿಗೂ ತಮಿಳಿನಲ್ಲಿ ಕಾಣಿಸುತ್ತದೆ. ಮೂಲ ದ್ರಾವಿಡದಲ್ಲಿ ಮಹಾಪ್ರಾಣಗಳು ಇರಲಿಲ್ಲ. ಆದರೆ ಕನ್ನಡದ ಕೆಲವು ಐತಿಹಾಸಿಕ ಕಾರಣಗಳಿಂದಾಗಿ, ಹಿಂದಿನಿಂದಲೂ ಅಘೋಷ ಮತ್ತು ಘೋಷ ಸ್ಪರ್ಶಗಳನ್ನು ಸ್ವನಿಮಗಳಾಗಿ ಬಳಸುತ್ತ ಬಂದಿದೆ; ಅಂತೆಯೇ ಅಲ್ಪ ಪ್ರಾಣ ಮಹಾಪ್ರಾಣಗಳನ್ನೂ ಸ್ವನಿಮಗಳಾಗಿ ಬಳಸುತ್ತ ಬಂದಿದೆ. ಆಧುನಿಕ ಕನ್ನಡದಲ್ಲಿ (ಬಹುಶಃ ಹಿಂದೆಯೂ ಹಾಗೆಯೇ) ಅಲ್ಪಪ್ರಾಣ ಮಹಾಪ್ರಾಣಗಳಿಗೆ ಉಚ್ಚಾರದಲ್ಲಿ ವ್ಯತ್ಯಾಸವನ್ನು ಮಾಡುವುದು ವಿದ್ಯೆಯ ನಾಗರಿಕತೆಯ ಸಾಮಾಜಿಕ ಅಂತಸ್ತಿನ ಲಕ್ಷಣಗಳಲ್ಲಿ ಒಂದು. (ಉದಾ: `ದನ', `ಧನ'). ಇಂಗ್ಲಿಷಿನ ಪ್ರಭಾವದಿಂದಾಗಿ, ಆಧುನಿಕ ಕನ್ನಡವು coffee, fine ಇವೇ ಮೊದಲಾದ ಪದಗಳಲ್ಲಿರುವ ದಂತ್ಯೋಷ್ಠ ್ಯ ಅಘೋಷ ಘರ್ಷ ವ್ಯಂಜನವಾದ f' ಸ್ವನವನ್ನು ಸ್ವೀಕರಿಸಿ ತನ್ನದನ್ನಾಗಿ ಮಾಡಿಕೊಂಡಿದೆ. ಅದರ ಫಲವಾಗಿ, ಹಿಂದಿನ `ಫ್' ಜಾಗದಲೆಲ್ಲ `fಬಳಕೆಯಾಗುತ್ತಿದೆ. `ಕಫ' ವನ್ನು (`kafa')ಎಂಬುದಾಗಿ `ಫಲವನ್ನು (`fala') ಎಂಬುದಾಗಿ ಉಚ್ಚರಿಸುವುದು ರೂಢಿಯಾಗುತ್ತಿದೆ. ವ್ಯಂಜನವು ಕ್ರಮೇಣ `ಫ್' ವ್ಯಂಜನವನ್ನು ತಳ್ಳಿ ಅದರ ಜಾಗವನ್ನು ಪೂರ್ತಿ ಆಕ್ರಮಿಸುವ ಸೂಚನೆಗಳಿವೆ. ಹಾಗೆಯೇ, ತಾಲವ್ಯ `ಶ್', ಮೂರ್ಧನ್ಯ `ಷ್' ದಂತ್ಯ `ಸ್' ಇವುಗಳಿಗೆ ಉಚ್ಚಾರ ಬೇಧವನ್ನು ಶಿಷ್ಟ ಭಾಷೆಯಲ್ಲಿ ವ್ಯಕ್ತಪಡಿಸಲಾಗುವುದು; ಈ ಉಚ್ಚಾರ ಭೇದವು ನಾಗರಿಕತೆಯ ಕುರುಹೂ ಹೌದು.
ಕನ್ನಡ ಲಿಪಿಯಲ್ಲಿರುವ ಚಿಹ್ನೆಗಳು ಶಿಷ್ಟ ಕನ್ನಡವನ್ನು ಬರೆಯುಲು ಸಾಕು. ಕನ್ನಡ ಲಿಪಿ ವ್ಯವಸ್ಥೆಯು ಸ್ವನಾತ್ಮಕವಾಗಿದೆ - ಎಂದರೆ ಒಂದು ಚಿಹ್ನೆಯು ಒಂದು ನಿರ್ದಿಷ್ಟ ಸ್ವನಕ್ಕೆ ಸಂಕೇತ. ಎಂದರೆ ಯಾವುದೇ ಬರಹವನ್ನು ಓದಲು ಸ್ಪೆಲಿಂಗ್ ತಿಳಿದಿರಬೇಕಿಲ್ಲ. ಇಂಗ್ಲಿಷಿನಲ್ಲಿರುವ ಸ್ಪೆಲಿಂಗ್ ಸಮಸ್ಯೆ ಕನ್ನಡಕ್ಕಿಲ್ಲ. ಆದರೆ ಕನ್ನಡ ಲಿಪಿಯು ಪರಿಪೂರ್ಣ ಸ್ವನಾತ್ಮಕವೆಂದು ಇದರಿಂದ ಅರ್ಥವಾಗುವುದಿಲ್ಲ. ಏಕೆಂದರೆ ಕನ್ನಡದಲ್ಲಿ ವಿರಳವಾಗಿ ಒಂದೇ ಚಿಹ್ನೆಯನ್ನು ಎರಡು ಪ್ರತ್ಯೇಕ ಸ್ವರಗಳನ್ನು ನಿರ್ದೇಶಿಸಲು ಬಳಸುವ ಉದಾಹರಣೆಯಿದೆ. ಉದಾಹರಣೆಗೆ `ತಂದೆ' ಎಂಬ ಬರಹದ ರೂಪವು ಸಂದರ್ಭಾನುಸಾರ ಎರಡು ಭಿನ್ನ ಉಚ್ಚಾರಗಳನ್ನು ಹೇಳಬಹುದು. `ತಂದೆ' (= ಪಿತೃ), `ತಂದೆ' (= ನಾನು ತೆಗೆದುಕೊಂಡು ಬಂದೆ) ಎಂಬರ್ಥದ ಎರಡೂ ಉಚ್ಚಾರದಲ್ಲಿ ಬೇರೆ ಬೇರೆ; ಅರ್ಥ ಬೇರೆ ಬೇರೆ. ಆ ಎರಡೂ ಭಿನ್ನ ಪದಗಳ ಮೊದಲ ಭಿನ್ನ ಸ್ವರಗಳನ್ನು ಬರಹದಲ್ಲಿ ಒಂದೇ ಚಿಹ್ನೆಯ ಮೂಲಕ ತೋರಿಸಲಾಗುತ್ತದೆ.