ವಿಶೇಷ ಸೂಚನೆ

ಕೆ.ಕೆ.ಹೆಬ್ಬಾರ್

ರೇಖಾ ವಿನ್ಯಾಸ ಕಲಾ ಪ್ರಪಂಚದಲ್ಲಿ ಹೊಸ ಅಲೆಯನ್ನೆಬ್ಬಿಸಿ, ಭಾರತಕ್ಕೆ ಆಧುನಿಕ ಚಿತ್ರಕಲೆಯಲ್ಲಿ ವಿಶಿಷ್ಟ ಸ್ಥಾನ-ಮಾನ ತಂದುಕೊಟ್ಟ ಹೆಬ್ಷಾರರು ಜನಿಸಿದ್ದು ಉಡುಪಿ ಜಿಲ್ಲೆಯ ಕಟ್ಟಂಗೇರಿಯಲ್ಲಿ. ೧೯೧೧ಜೂನ್ ೧೫ರಂದು. ತಂದೆ ನಾರಾಯಣ ಹೆಬ್ಷಾರ್, ತಾಯಿ ಸೀತಮ್ಮ.
ಬಡತನ ಕುಟುಂಬದಲ್ಲಿ ಜನಿಸಿದ ಕಟ್ಟುಂಗೇರಿ ಕೃಷ್ಣ ಹೆಬ್ಬಾರರು, ಊರಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಾಲಕ ಕೃಷ್ಣ ಹೆಬ್ಬಾರರು ರವಿವರ್ಮನ ಚಿತ್ರಗಳಿಂದ ಪ್ರಭಾವಿತರಾಗಿ, ತನಗೂ ಚಿತ್ರಕಲೆ ಸಿದ್ಧಿಸುವಂತೆ, ಪ್ರತಿನಿತ್ಯ ಸರಸ್ವತಿಯ ಪಟ ಪೂಜಿಸುತ್ತಿದ್ದರಂತೆ. ಬಡತನದ ಬೇಗೆಯಿಂದ ವಿದ್ಯಾಭ್ಯಾಸ ಮುಂದುವರೆಸಲಾಗದ ಹೆಬ್ಬಾರರು ತಮ್ಮ ೧೪ನೇ ವಯಸ್ಸಿನಲ್ಲಿ, ಶಿಕ್ಷಕರಾಗಿ ಜೀವನ ಆರಂಭಿಸಿದರಾದರೂ ಚಿತ್ರಕಲೆಯ ವ್ಯಾಮೋಹ ಮಾತ್ರ ಬಿಡಲಿಲ್ಲ. ಚಿತ್ರಗಳ ಮೂಲಕವೇ ಮಕ್ಕಳಿಗೆ ಪಾ� ಹೇಳುತ್ತಿದ್ದರು.

ಮುಂದೆ ಹೆಬ್ಬಾರರು ಮುಂಬಯಿಯ ಜಿ.ಎಸ್. ದಂಡಾವತಿಯವರಲ್ಲಿ ಕಲಾವ್ಯಾಸಂಗ ಆರಂಭಿಸಿದರು. ನಂತರದಲ್ಲಿಯೇ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ರೇಖಾಚಿತ್ರ, ವರ್ಣಚಿತ್ರಗಳಲ್ಲಿ ಡಿಪ್ಲೋಮಾ ಪದವಿ ಪಡೆದ ಹೆಬ್ಷಾರರು, ಕೆಲವು ಕಾಲ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೪೯ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಯುರೋಪ್ ಪ್ರವಾಸ ಕೈಕೊಂಡು ಪ್ಯಾರಿಸ್ನಲ್ಲಿ ಎರಡು ವರ್ಷ ಅಧ್ಯಯನ ಮಾಡಿದರು. ಈ ಅವಧಿಯಲ್ಲಿಯೇ ಪ್ಯಾರಿಸ್, ಲಂಡನ್, ಜರ್ಮನಿ, ಬಲರ್ಿನ್, ನ್ಯೂಯಾರ್ಕ್, ಸಿಡ್ನಿ ಮುಂತಾದ ಕಡೆ ತಮ್ಮ ಕಲಾಕೃತಿಗಳನ್ನು ಪ್ರರ್ಶಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದರು.

ಹೆಬ್ಬಾರರ ವಿದೇಶಿ ಪ್ರವಾಸಗಳ ಫಲವಾಗಿ, ಅವರ ಬ್ಯಾಲೆ ನೃತ್ಯಕಾರರು, ಲೇಜೀಮ್ ಆಟದವರು, ರಷ್ಯಾದ ಕುಣಿಯುವ ಹುಡುಗಿ ಮುಂತಾದ ಕಲಾಕೃತಿಗಳಲ್ಲಿ ವಿದೇಶಿ ಕಲೆಯ ಪ್ರಭಾವವಿದೆ. ಇವರ ನಾಗಮಂಡಲ ಕುಣಿತದವರು, ಮಹಾಬಲೇಶ್ವರ ಸಂತೆ, ರಂಗಪಂಚಮಿ ಮುಂತಾದವು ಸ್ವದೇಶಿ ಪ್ರಭಾವದಿಂದ ರಚಿತವಾದವು. ಆದ್ದರಿಂದ ಪಾಶ್ಚಾತ್ಯ ಹಾಗೂ ಭಾರತೀಯ ಸಾಂಪ್ರದಾಯಿಕ ಚಿತ್ರಕಲೆ ಹೆಬ್ಬಾರರ ಚಿತ್ರಕಲೆಯ ವೈಶಿಷ್ಟ್ಯವೆಂದು ಹೇಳಬಹುದು.

ಹೆಬ್ಬಾರರ ಚಿತ್ರಗಳಲ್ಲಿ ಕಂಡು ಬರುವ ಲಯ ಮತ್ತು ರೇಖೆಗಳ ಪ್ರಾಮುಖ್ಯ ಅವರ ಸೃಜನಾತ್ಮಕ ಕಲಾದೃಷ್ಟಿಗೆ ಉತ್ತಮ ಉದಾಹರಣೆ. ಹೆಬ್ಷಾರರ ಕಲಾಸಾಧನೆಗೆ ಸಂದ ಪ್ರಶಸ್ತಿ - ಗೌರವಗಳು ಅನೇಕ. ಕೇಂದ್ರ ಲಲಿತ ಕಲಾ ಅಕಾಡೆಮಿ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ, ಪದ್ಮಶ್ರೀ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ವೆಂಕಟಪ್ಪ ಪ್ರಶಸ್ತಿ ಪ್ರಮುಖವಾದುವು. ತಮ್ಮ ಅಪೂರ್ವ ಕಲಾಸಾಧನೆಯಿಂದ ಕರ್ನಾಟಕಕ್ಕೆ ಹಿರಿಮೆ ತಂದ ಈ ಹಿರಿಯ ಕಲಾವಿದ ೨೬ನೇ ಮಾರ್ಚ್ ೧೯೯೬ರಂದು ನಿಧನರಾದರು.