ವಿಶೇಷ ಸೂಚನೆ

ವರನಟ ವರದಾಚಾರ್

ಕನ್ನಡ ರಂಗಭೂಮಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು,ಹಲವಾರು ಸುಧಾರಣೆಗಳನ್ನು ಮಾಡುವ ಮೂಲಕ ಕನ್ನಡ ರಂಗಭೂಮಿಯ 'ಧೃವತಾರೆ' ಎಂದು ಖ್ಯಾತರಾಗಿದ್ದಾರೆ ವರನಟ ವರದಾಚಾರ್ ಅವರು.

೨ನೆಯ ಫೆಬ್ರವರಿ ೧೮೬೯ರಂದು ಜನನ. ವರದಾಚಾರರ ತಂದೆ ರಾಮಸ್ವಾಮಿ ಅಯ್ಯಂಗಾರರು ಸಂಗೀತ, ಕಲೆಗಳಲ್ಲೂ ಆಸಕ್ತಿ ಹೊಂದಿದ್ದರು. ಕಲಾ ಪ್ರೋತ್ಸಾಹಕರ ನೆರಳಿನಲ್ಲಿ ಬೆಳೆದ ಬಾಲಕನಲ್ಲಿ ಸಹಜವಾಗಿಯೇ ಕಲಾಭಿರುಚಿ ಮೂಡಿತು.ವರದಾಚಾರರು ಎಫ್.ಎ.ಪಾಸು ಮಾಡಿ ಹೊಟ್ಟೆಪಾಡಿಗಾಗಿ ಮೈಸೂರಿನ ಸರ್ಕಾರಿ ಉದ್ಯೋಗದಲ್ಲಿದ್ದಾಗಲೇ ಗೌರಿ ನರಸಿಂಹಯ್ಯನವರು 'ಶ್ರೀ ಸರಸ್ವತಿ ವಿಲಾಸ ರತ್ನಾವಳಿ ನಾಟಕ ಸಭಾ' ಮಂಡಳಿ ಇವರನ್ನು ಕೈಬೀಸಿ ಕರೆಯಿತು. ಅಭಿನಯ ಚಾತುರ್ಯದಿಂದ ಪ್ರೇಕ್ಷಕರ ಮನ ಸೆಳೆದ ವರದಾಚಾರರು ಆ ಕಂಪನಿ ಒಡೆದುಹೋದ ಮೇಲೆ ಬೆಂಗಳೂರಿನಲ್ಲಿ ಉದ್ಯೋಗವನ್ನರಸಿಕೊಂಡು ಬಂದರು. ಮುಂದೆ ಅವರ ಹೆಂಡತಿ, ಮಕ್ಕಳ ಅಕಾಲಿಕ ಮರಣದಿಂದಾಗಿ ಮತ್ತೆ ಮೈಸೂರಿಗೆ ತೆರಳಿ 'ರತ್ನಾವಳಿ ನಾಟಕ ಸಭಾ' ಪ್ರಾರಂಭಿಸಿದರು. ಈ ಸಂಸ್ಥೆಯೊಂದಿಗೆ ಸುಮಾರು ೨೫ ವರ್ಷಗಳ ಕಾಲ ಕನ್ನಡ ರಂಗಭೂಮಿಯ ಕಲೆ, ಕಲಾವಿದರ ಏಳ್ಗೆಗಾಗಿ ಶ್ರಮಿಸಿದರು.

ಆಕರ್ಷಕ ಮೈಕಟ್ಟು ಹೊಂದಿದ್ದ ವರದಾಚಾರರು ನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು.ದುಷ್ಯಂತನ ಪಾತ್ರದಲ್ಲಿ ಜನಮನ ಸೂರೆಗೊಂಡಿದ್ದರು. ಅಷ್ಟೇ ಅಲ್ಲ, ರಾವಣ, ಶಿಶುಪಾಲ, ಹಿರಣ್ಯಕಶಿಪು ಮುಂತಾದ ವೀರರಸ ಪ್ರಧಾನ ಪಾತ್ರಗಳಲ್ಲೂ ಸಹ ಅವರ ಅಭಿನಯ ಮೈನವಿರೇಳಿಸುವಂತಿತ್ತು. ಇವರಿಗೆ ಅಪಾರ ಕೀರ್ತಿ ತಂದ ನಾಟಕಗಳೆಂದರೆ ರತ್ನಾವಳಿ, ಮನ್ಮಥವಿಜಯ, ಶಾಕುಂತಲ, ನಿರುಪಮ, ಸತ್ಯಹರಿಶ್ಚಂದ್ರ, ಭಕ್ತ ಪ್ರಹ್ಲಾದ ಮುಂತಾದವು. ಭಕ್ತ ಪ್ರಹ್ಲಾದಲ್ಲಿನ ಹಿರಣ್ಯಕಶಿಪುವಿನ ಇವರ ಪಾತ್ರಾಭಿನಯಕ್ಕೆ ವಿಶ್ವಕವಿ ರವೀಂದ್ರರೇ ಬೆರಗಾಗಿದ್ದುಂಟು.

ಪೌರಾಣಿಕ ನಾಟಕ ಪಾತ್ರಗಳ ಉಡುಗೆ - ತೊಡುಗೆಗಳ ಬಗ್ಗೆ, ನಾಟಕ ತಂತ್ರಗಳ ಬಗ್ಗೆ ಹೊಸ ಆವಿಷ್ಕಾರ ಮಾಡುವ ಮೂಲಕ ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ಒದಗಿಸಿದರು. ಅಷ್ಟೇ ಅಲ್ಲದೇ ಅವರಲ್ಲಿದ್ದ ಉತ್ತಮ ಸಾಹಿತ್ಯ ಪ್ರಜ್ಞೆಯಿಂದಾಗಿ ಅನೇಕ ಪಂಡಿತರಿಂದ ಹೊಸ ಹೊಸ ನಾಟಕಗಳನ್ನು ಬರೆಯಿಸಿ, ಅವುಗಳನ್ನು ಪರಿಷ್ಕರಿಸಿ ಪ್ರದರ್ಶಿಸುವ ಮೂಲಕ ಜನ ಸಾಮಾನ್ಯರು ರಂಗಭೂಮಿಯ ಬಗ್ಗೆ ಒಲವು ಕಳೆದುಕೊಳ್ಳದಂತೆ ಎಚ್ಚರವಹಿಸಿದರು. ವರದಾಚಾರರ ಅಭಿನಯ ಕೌಶಲ್ಯಕ್ಕೆ ಮನಸೋತ ಮೈಸೂರಿನ ಜನತೆ ಅವರಿಗೆ 'ವರನಟ' ಬಿರುದು ನೀಡಿ ಗೌರವಿಸಿತು. ಕೇವಲ ನಾಡಿನೊಳಗೆ ಮಾತ್ರವಲ್ಲದೇ, ಹೊರನಾಡುಗಳಲ್ಲೂ ನಾಟಕ ಪ್ರದರ್ಶಿಸಿದ ವರದಾಚಾರರು ತಿರುಚನಾಪಳ್ಳಿಯ ಕಲಾಭಿಮಾನಿಗಳಿಂದ ’ನಟ ಶಿರೋಮಣಿ' ಎಂಬ ಅಭಿದಾನಕ್ಕೆ ಪಾತ್ರರಾದರು.

ತಮ್ಮ ಕಂಪನಿಯಲ್ಲಿದ್ದ ಬಾಲ ನಟರನ್ನು ಸ್ವತಃ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ವರದಾಚಾರರು, ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಿ ಕೊಡುಗೈ ದಾನಿಯೆನಿಸಿದರು. ತಮ್ಮ ಅಮೋಘ ಅಭಿನಯದಿಂದ ಕರ್ನಾಟಕಕ್ಕೆ ಕೀರ್ತಿ ತಂದ ಈ ವರನಟ, ನಟ ಶಿರೋಮಣಿ ೧೯೨೬ ಏಪ್ರಿಲ್ ೪ ರಂದು ನಿಧನರಾದರು.