ವಿಶೇಷ ಸೂಚನೆ

ಮಾಸಾಶನ

ಕಷ್ಟಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಾಶನ ಮಂಜೂರಾತಿ ವಿವರ.

1) ಕ.ಸಂ.ವಾ.ಪ್ರ:48:ಕಗೌಧ:2007, ದಿನಾಂಕ: 31/08/2007ರ ಆದೇಶದಲ್ಲಿ 800 ಮಂದಿ, ಸಾಹಿತಿ / ಕಲಾವಿದರಿಗೆ.

2) ಕ.ಸಂ.ವಾ.ಪ್ರ:07:ಕಗೌಧ:2009, ದಿನಾಂಕ: 25/05/2010ರ ಆದೇಶದಲ್ಲಿ 400 ಮಂದಿ, ಸಾಹಿತಿ / ಕಲಾವಿದರಿಗೆ.

3) ಕ.ಸಂ.ವಾ.ಪ್ರ:39:ಕಗೌಧ:2009, ದಿನಾಂಕ: 14/01/2014ರ ಆದೇಶದಲ್ಲಿ 1200 ಮಂದಿ, ಸಾಹಿತಿ / ಕಲಾವಿದರಿಗೆ.

4) ಕ.ಸಂ.ವಾ.ಪ್ರ:23:ಕಗೌಧ:2012, ದಿನಾಂಕ: 05/12/2012ರ ಆದೇಶದಲ್ಲಿ 1600 ಮಂದಿ, ಸಾಹಿತಿ / ಕಲಾವಿದರಿಗೆ.

5) ಕ.ಸಂ.ವಾ.ಪ್ರ:03:ಕಗೌಧ:2013, ದಿನಾಂಕ: 22/05/2014ರ ಆದೇಶದಲ್ಲಿ 1603 ಮಂದಿ, ಸಾಹಿತಿ / ಕಲಾವಿದರಿಗೆ.

6) ಕ.ಸಂ.ವಾ.ಪ್ರ:04:ಕಗೌಧ:2015, ದಿನಾಂಕ: 10/09/2015ರ ಆದೇಶದಲ್ಲಿ 3527 ಮಂದಿ, ಸಾಹಿತಿ / ಕಲಾವಿದರಿಗೆ.

7) ಕ.ಸಂ.ವಾ 4:ಕಗೌಧ:2017, ದಿನಾಂಕ: 25/01/2018ರ ಆದೇಶದಲ್ಲಿ 2000 ಮಂದಿ, ಸಾಹಿತಿ / ಕಲಾವಿದರಿಗೆ.

8) ಕ.ಸಂ.ವಾ5:ಕಗೌಧ:2019, ದಿನಾಂಕ: 17/06/2019ರ ಆದೇಶದಲ್ಲಿ 934 ಮಂದಿ, ಸಾಹಿತಿ / ಕಲಾವಿದರಿಗೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿ/ ಕಲಾವಿದರಿಗೆ ನೀಡುವ ‘ಮಾಸಾಶನ’ ಯೋಜನೆಯ ಕುರಿತು ಸಂಕ್ಷಿಪ್ತ ವಿವರ.

1. ಕನ್ನಡ ನಾಡಿನ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಾದ ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಸಾಹಿತ್ಯ, ಲಲಿತ ಕಲೆ, ಶಿಲ್ಪ ಕಲೆ, ಕೊಡವ ಸಾಹಿತ್ಯ, ಕೊಂಕಣಿ ಸಾಹಿತ್ಯ, ಬ್ಯಾರಿ ಸಾಹಿತ್ಯ, ತುಳು ಸಾಹಿತ್ಯ ಮತ್ತು ಅರೆಭಾಷೆ ಸಾಹಿತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಕಷ್ಟಪರಿಸ್ಥಿತಿಯಲ್ಲಿರುವ ಹಿರಿಯ ಸಾಹಿತಿ ಮತ್ತು ಕಲಾವಿದರಿಗೆ ಅವರ ಜೀವಿತಾವಧಿವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾಸಾಶನವನ್ನು ಮಂಜೂರು ಮಾಡುತ್ತದೆ.

2. ಈ ಮೊದಲು ವಾರ್ಷಿಕ 400 ಜನ ಸಾಹಿತಿ/ಕಲಾವಿದರನ್ನು ಆಯ್ಕೆ ಮಾಡಿ ಮಾಹೆಯಾನ ರೂ, 1,000/- ಗಳ ಮಾಸಾಶನ ನೀಡಲಾಗುತಿತ್ತು.ಸರ್ಕಾರದ ಆದೇಶ ಸಂಖ್ಯೆ: ಕಸಂವಾ 14 ಕಗೌಧ 2014, ಬೆಂಗಳೂರು ದಿನಾಂಕ: 08.12.2014 ರ ಆದೇಶದಂತೆ ಮಾಸಾಶನ ಮೊತ್ತವನ್ನು ದಿನಾಂಕ:01.11.2014 ರಿಂದ ಜಾರಿಗೆ ಬರುವಂತೆ ರೂ.1000/- ಗಳಿಂದ ರೂ. 1500/- (ರೂಪಾಯಿ ಒಂದು ಸಾವಿರ ಐದು ನೂರು) ಗಳಿಗೆ ಹೆಚ್ಚಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಕಸಂವಾ 04 ಕಗೌಧ 2015, ಬೆಂಗಳೂರು ದಿನಾಂಕ: 10.09.2015 ರ ಆದೇಶದಂತೆ ಮಾಸಾಶನ ಮಂಜೂರಿ ಫಲಾನುಭವಿಗಳ ಸಂಖ್ಯೆಯನ್ನು 400 ರಿಂದ 1000 ಜನರಿಗೆ ಹೆಚ್ಚಿಸಲಾಗಿದೆ.

3. ಮಾಸಾಶನ ಪಡೆಯುತ್ತಿದ್ದ ಸಾಹಿತಿ/ಕಲಾವಿದರು ಮೃತಪಟ್ಟಲ್ಲಿ ಅವರ ಪತ್ನಿಯರಿಗೆ ರೂ. 500/- ಗಳ ವಿಧವಾ ಮಾಸಾಶನವನ್ನು ಸಹ ನೀಡಲಾಗುತ್ತಿದೆ.

4. ಮಾಸಾಶನ ಮಂಜೂರಾತಿ ನಿಯಮಗಳ ಮಾರ್ಗಸೂಚಿಗಳನ್ನು ಸರ್ಕಾರದ ಆದೇಶ ಸಂಖ್ಯೆ: ಕಸಂವಾ 340 ಕಸಧ 2015, ಬೆಂಗಳೂರು ದಿನಾಂಕ: 18.09.2015 ರಲ್ಲಿ ಹೊರಡಿಸಲಾಗಿದೆ.

5. ಇಲಾಖೆಯ 2017-18 ನೇ ಆರ್ಥಿಕ ಸಾಲಿನ ಕ್ರಿಯಾಯೋಜನೆಯಲ್ಲಿ ಮಾಸಾಶನ ಯೋಜನೆಗೆ ರೂ. 2468.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಿಕೊಳ್ಳಲಾಗಿದೆ.

ಮಾಸಾಶನ ಮಂಜೂರಾತಿ ನಿಯಮಗಳು ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

ಸರ್ಕಾರದ ಆದೇಶ ಸಂಖ್ಯೆ: ಕಸಂವಾ 340 ಕಸಧ 2015, ಬೆಂಗಳೂರು ದಿನಾಂಕ: 18.09.2015 ರ ಆದೇಶದಂತೆ ಕಷ್ಟಪರಿಸ್ಥಿತಿಯಲ್ಲಿರುವ ಸಾಹಿತಿ/ಕಲಾವಿದರಿಗೆ ಮಾಸಾಶನ ಮಂಜೂರಾತಿಗಾಗಿ ನಿಯಮಗಳ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

1. ನಿಗಧಿತ ನಮೂನೆಯಲ್ಲಿ ಅರ್ಜಿ: ಮಾಸಾಶನಕ್ಕೆ ಅರ್ಜಿ ಸಲ್ಲಿಸಬಯಸುವ ಸಾಹಿತಿ/ಕಲಾವಿದರು ಸಂಬಂಧಪಟ್ಟ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿಮಾಡಿ, ಭಾವಚಿತ್ರ ಅಂಟಿಸಿ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು.

2. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಕನಿಷ್ಟ 25 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದಾಖಲೆ: ಸಾಹಿತ್ಯ/ ಸಂಗೀತ/ ನೃತ್ಯ/ ರಂಗಭೂಮಿ/ ಜಾನಪದ/ ಯಕ್ಷಗಾನ / ಬಯಲಾಟ/ ಲಲಿತಕಲೆ/ ಶಿಲ್ಪಕಲೆ/ ಕೊಡವ ಸಾಹಿತ್ಯ/ ಕೊಂಕಣಿ ಸಾಹಿತ್ಯ/ ಬ್ಯಾರಿ ಸಾಹಿತ್ಯ/ ಅರೆಭಾಷೆ ಸಾಹಿತ್ಯ/ ತುಳು ಸಾಹಿತ್ಯ ಕ್ಷೇತ್ರಗಳಲ್ಲಿ ಕನಿಷ್ಠ 25 ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು. (ಅಂಗವಿಕಲರಾಗಿದ್ದಲ್ಲಿ ಕನಿಷ್ಠ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಪರಿಗಣಿಸಲಾಗುವುದು. ದೈಹಿಕ ಅಂಗವಿಕಲತೆಯ ಬಗ್ಗೆ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕು)

3. ವಯಸ್ಸಿನ ಬಗ್ಗೆ ದಾಖಲೆ: ಜನನ ಪ್ರಮಾಣ ಪತ್ರ ಅಥವಾ ಶಿಕ್ಷಣ ಸಂಸ್ಥೆ ನೀಡಿದ ದಾಖಲೆ ಸಲ್ಲಿಸಬೇಕು. ಅಥವಾ ನ್ಯಾಯಾಲಯದಿಂದ ಅಫಿಡವಿಟ್ ಪಡೆದು ಸಲ್ಲಿಸಬೇಕು. (ಸಾಹಿತಿ/ಕಲಾವಿದರು ಕನಿಷ್ಟ 58 ವರ್ಷದ ವಯೋಮಾನದವರಾಗಿರಬೇಕು. ಅಂಗವಿಕಲರಾಗಿದ್ದಲ್ಲಿ ಕನಿಷ್ಠ 40 ವರ್ಷದ ವಯೋಮಾನದವರಾಗಿರಬೇಕು)

4. ಆದಾಯ ಪ್ರಮಾಣ ಪತ್ರ: ತಹಶೀಲ್ದಾರ್ ರಿಂದ ಪಡೆದಿರುವ ಚಾಲ್ತಿ ಆರ್ಥಿಕ ವರ್ಷದ ಕುಟುಂಬದ ವಾರ್ಷಿಕ ವರಮಾನ ಪ್ರಮಾಣ ಪತ್ರ ಸಲ್ಲಿಸಬೇಕು. (ಗ್ರಾಮಾಂತರ ಪ್ರದೇಶಗಳಿಗೆ ರೂ. 40,000/- ಹಾಗೂ ಪಟ್ಟಣ/ನಗರ ಪ್ರದೇಶಗಳಿಗೆ ರೂ. 50,000/- ಗಳನ್ನು ಮೀರಿರಬಾರದು).

5. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಗಳಡಿಯಲ್ಲಿ ಪಿಂಚಿಣಿ ಪಡೆಯುತ್ತಿಲ್ಲವೆಂದು ದೃಢೀಕರಣ ಪತ್ರ: ಈಗಾಗಲೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಇತರೆ ಯೋಜನೆಗಳಡಿಯಲ್ಲಿ ಮಾಸಾಶನ ಪಡೆಯುತ್ತಿದ್ದಲ್ಲಿ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಸರ್ಕಾರದ ಇತರೆ ಯೋಜನೆಗಳಡಿಯಲ್ಲಿ ಮಾಸಾಶನ /ಪಿಂಚಣಿ ಪಡೆಯುತ್ತಿಲ್ಲವೆಂಬ ಬಗ್ಗೆ ತಹಶೀಲ್ದಾರ್ ರಿಂದ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು.

6. ಆಧಾರ್ ಕಾರ್ಡ್: ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ, ಸಂದರ್ಶನ ಮತ್ತು ಮಂಜೂರಾತಿ ಕ್ರಮಗಳು:

1. ಮಾಸಾಶನಕ್ಕೆ ಅರ್ಜಿ ಸಲ್ಲಿಸಬಯಸುವ ಸಾಹಿತಿ/ಕಲಾವಿದರು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ನಿಗಧಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು.

2. ಜಿಲ್ಲೆಯ ಸಹಾಯಕ ನಿರ್ದೇಶಕರು ಕಲಾವಿದರ ಸೇವೆಯ ಬಗ್ಗೆ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ, ಕ್ಷೇತ್ರವಾರು ವಿಂಗಡಿಸಿ ಅರ್ಜಿ ಹಾಗೂ ದಾಖಲೆಗಳನ್ನು ಸಂಬಂಧಿಸಿದ ಅಕಾಡೆಮಿಗಳಿಗೆ ಕಳುಹಿಸಲಾಗುತ್ತದೆ.

3. ಅಕಾಡೆಮಿಗಳು ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅಕಾಡೆಮಿ ಹಂತದಲ್ಲಿ ಕಲಾವಿದರ ಸಂದರ್ಶನ ನಡೆಸಿ, ಕಲಾ ಸೇವೆಯ ಬಗ್ಗೆ ಖಚಿತ ಪಡಿಸಿಕೊಂಡು ಅರ್ಹ ಸಾಹಿತಿ/ಕಲಾವಿದರ ಪಟ್ಟಿಯನ್ನು ಶಿಫಾರಸ್ಸಿನೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಛೇರಿಗೆ ಸಲ್ಲಿಸಬೇಕು. ಹಾಗೂ ಅರ್ಜಿ- ದಾಖಲೆಗಳನ್ನು ಸರ್ಕಾರವು ರಚಿಸುವ ಆಯ್ಕೆ ಸಮಿತಿಯಲ್ಲಿ ಮಂಡಿಸಲಾಗುತ್ತದೆ.

4. ಹೀಗೆ ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಅರ್ಹ ಸಾಹಿತಿ/ಕಲಾವಿದರ ಪಟ್ಟಿಯನ್ನು ಮಂಜೂರಾತಿಗಾಗಿ ಇಲಾಖೆಯು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ.

5. ಸರ್ಕಾರರಿಂದ ಮಂಜೂರಾತಿ ಆದೇಶವಾದ ನಂತರ ಮಾಸಾಶನ ಪಾವತಿಗಾಗಿ ಸಾಹಿತಿ/ಕಲಾವಿದರ ಪಟ್ಟಿಯನ್ನು ಅಗತ್ಯ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಕಳುಹಿಸಿಕೊಡಲಾಗುತ್ತದೆ.

6. ಮಹಾಲೇಖಪಾಲರ ಕಛೇರಿಯಿಂದ ಪಿಂಚಿಣಿ ಪಾವತಿಗಾಗಿ ಪಿಂಚಣಿ ಪಾವತಿ ಆದೇಶ (Pension Payment Order) ಹೊರಡಿಸಿ ಸಂಬಂಧಪಟ್ಟ ಖಜಾನೆಗೆ ಕಳುಹಿಸುತ್ತಾರೆ. ಪಿಂಚಿಣಿ ಪಾವತಿ ಆದೇಶದ ಅನ್ವಯ ಸಂಬಂಧಪಟ್ಟ ಖಜಾನೆಯ ಮೂಲಕ ಸಾಹಿತಿ/ಕಲಾವಿದರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಾಸಾಶನ ಪಾವತಿಯಾಗುತ್ತದೆ.

ವಿಧವಾ ಮಾಸಾಶನ ಮಂಜೂರಾತಿ ನಿಯಮಗಳು ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿದ್ದ ಸಾಹಿತಿ ಮತ್ತು ಕಲಾವಿದರು ಮೃತಪಟ್ಟ ನಂತರ ಅವರ ಪತ್ನಿಗೆ ಮಾಸಿಕ ರೂ. 500/- ಗಳನ್ನು ನೀಡುವ ‘ವಿಧವಾ ಮಾಸಾಶನ’ ಯೋಜನೆ.

1. ನಿಗಧಿತ ನಮೂನೆಯಲ್ಲಿ ಅರ್ಜಿ: ವಿಧವಾ ಮಾಸಾಶನಕ್ಕೆ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಂದ ನಿಗಧಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿಮಾಡಿ, ಭಾವಚಿತ್ರ ಅಂಟಿಸಿ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು. (ಲಗತ್ತಿಸುವ ದಾಖಲೆಗಳಿಗೆ/ಭಾವಚಿತ್ರಗಳಿಗೆ ಪತ್ರಾಂಕಿತ ಅಧಿಕಾರಿಯಿಂದ ಧೃಡೀಕರಣ ಪಡೆದಿರಬೇಕು)

2. ಮೃತ ಕಲಾವಿದರ ಮರಣ ಪ್ರಮಾಣ ಪತ್ರ: ಮಾಸಾಶನ ಪಡೆಯುತ್ತಿದ್ದ ಕಲಾವಿದರ ಮರಣ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕು.

3. ಮೃತ ಕಲಾವಿದರ ಕುಟುಂಬದ ಜೀವಿತ ಸದಸ್ಯರ ಪ್ರಮಾಣ ಪತ್ರ: ಮೃತ ಕಲಾವಿದರ ಕುಟುಂಬದ ಜೀವಿತ ಸದಸ್ಯರ ಪ್ರಮಾಣ ಪತ್ರವನ್ನು ತಹಶೀಲ್ದಾರ್ ರಿಂದ ಪಡೆದು ಸಲ್ಲಿಸಬೇಕು.

4. ಆದಾಯ ಪ್ರಮಾಣ ಪತ್ರ: ತಹಶೀಲ್ದಾರ್ ರಿಂದ ಪಡೆದಿರುವ ಚಾಲ್ತಿ ಆರ್ಥಿಕ ವರ್ಷದ ಕುಟುಂಬದ ವಾರ್ಷಿಕ ವರಮಾನ ಪ್ರಮಾಣ ಪತ್ರ ಸಲ್ಲಿಸಬೇಕು. ವಾರ್ಷಿಕ ಆದಾಯವು ರೂ. 15,000/- ಗಳನ್ನು ಮೀರಿರಬಾರದು.

5. ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಗಳಡಿಯಲ್ಲಿ ಪಿಂಚಿಣಿ ಪಡೆಯುತ್ತಿಲ್ಲವೆಂದು ದೃಢೀಕರಣ ಪತ್ರ: ಅರ್ಜಿದಾರರು ಸರ್ಕಾರದ ಇತರೆ ಯೋಜನೆಗಳಡಿಯಲ್ಲಿ ಮಾಸಾಶನ /ಪಿಂಚಿಣಿ ಪಡೆಯುತ್ತಿಲ್ಲವೆಂಬ ಬಗ್ಗೆ ತಹಶೀಲ್ದಾರ್ ರಿಂದ ದೃಢೀಕರಣ ಪತ್ರವನ್ನು ಪಡೆದು ಸಲ್ಲಿಸಬೇಕು.

6. ಮೃತ ಕಲಾವಿದರ ಮೂಲ ಪಿಂಚಿಣಿ ಪಾವತಿ ಆದೇಶ (PPO): ಮೃತ ಕಲಾವಿದರ ಹೆಸರಿನಲ್ಲಿರುವ ಮೂಲ ಪಿಂಚಿಣಿ ಪಾವತಿ ಆದೇಶ (PENSION PAYMENT ORDER) ಸಲ್ಲಿಸಬೇಕು.

7. ಅರ್ಜಿದಾರರ ಗುರುತಿನ ದಾಖಲೆ ಮತ್ತು ಮಾದರಿ ಸಹಿಯ ದೃಢೀಕರಣ ಪತ್ರ: ಮೃತ ಕಲಾವಿದರ ಪತ್ನಿಯ ಗುರುತಿನ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು. ಹಾಗೂ ಮಾದರಿ ಸಹಿಯ ಅಥವಾ ಹೆಬ್ಬೆಟ್ಟಿನ ಗುರುತಿನ ದೃಢೀಕರಣ ಪತ್ರವನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಣ ಪಡೆದು ಸಲ್ಲಿಸಬೇಕು.

8. ಆಧಾರ್ ಕಾರ್ಡ್: ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕು.