ವಿಶೇಷ ಸೂಚನೆ

ಮಹಮದ್ ಪೀರ್

ಕನ್ನಡ ರಂಗಭೂಮಿಯ ವಿಶಿಷ್ಟ ನಟರಾಗಿ, ಕಂಪನೀಯ ಮಾಲೀಕರಾಗಿ, ಹೊಸ ಹೊಸ ಪ್ರಯೋಗದ ಮೂಲಕ, ರಂಗಭೂಮಿಗೆ ಹೊಸ ಆಯಾಮ ನೀಡಿ, ಕನ್ನಡ ರಂಗಭೂಮಿಯ 'ಧೃವತಾರೆ' ಎಂಬ ಬಿರುದಿಗೆ ಪಾತ್ರರಾದವರು ಮಹಮ್ಮದ್ ಪೀರ್.

ಕನ್ನಡ ನಾಡಿನಲ್ಲಿ ಕಲಾವಿದರಿಗೆ ಕೀರ್ತಿಯೊಂದೇ ಆಸ್ತಿ ಎಂಬ ಮಾತಿಗೆ ಸಾಕ್ಷಿಯಾಗಿ ಬಾಳಿದ ಮಹಮ್ಮದ್ ಪೀರ್ ಹುಟ್ಟಿದ್ದು ೧೮೯೬ರಲ್ಲಿ, ಮೈಸೂರಿನಲ್ಲಿ ತಂದೆ ಪೈಲ್ವಾನ್ ಮೊಹಿದ್ದೀನ್, ತಾಯಿ ಮುಬಾರಕ್. ಬಾಲ್ಯದಿಂದಲೂ ಅಭಿನಯ, ಪದ್ಯ ವಾಚನಗಳಲ್ಲಿ ವಿಶೇಷ ಒಲವಿದ್ದ ಇವರು ವರದಾಚಾರ್ ಮುಂತಾದವರ ಕಂಪನಿ ನಾಟಕಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡರು. ಶಾಲೆಯಲ್ಲಿ ಗೆಳೆಯರೊಡಗೂಡಿ ಆಡಿದ ’ಕೃಷ್ಣ ಲೀಲಾ' ನಾಟಕದಲ್ಲಿ ’ವಿಜಯ'ನ ಪಾತ್ರದಲ್ಲಿ ಪೀರ್ರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದರ ಮುಂದಿನ ಹೆಜ್ಜೆಯೇ ರಂಗ ಪ್ರವೇಶ.

ಓದಿಗೆ ವಿದಾಯ ಹೇಳಿದ ಪೀರ್ ತಮ್ಮ ೧೯ನೆಯ ವಯಸ್ಸಿನಲ್ಲಿ ರಂಗ ಪ್ರವೇಶಿಸಿ, ಮೈಸೂರಿನ ಗಿರಿಧರಲಾಲ್ ಕಂಪನಿಯ ಕೃಷ್ಣಲೀಲಾ ನಾಟಕದ ವಿಜಯನ ಪಾತ್ರದಲ್ಲಿ ಹಾಗೂ ವಿದೂಷಕನ ಪಾತ್ರಗಳಲ್ಲಿ ಅಭಿನಯಿಸಿ ಪ್ರಸಿದ್ಧಿಪಡೆದರು. ಮುಂದೆ ಗಂಗಾಧರ ರಾಯರ "ಭಾರತ ಜನ ಮನೋಲ್ಲಾಸಿನಿ ಸಭಾ" ಕಂಪನಿ ಸೇರಿ, ಮಳವಳ್ಳಿ ಸುಂದರಮ್ಮ, ಎಂ.ವಿ. ಸುಬ್ಷಯ್ಯನಾಯ್ಡು, ಎಂ. ಸುಬ್ಷರಾವ್ ಮುಂತಾದ ಹಿರಿಯ ನಟ ನಟಿಯರೊಂದಿಗೆ ನಟಿಸಿ, ನಾಡಿನಲ್ಲೆಡೆ ಪ್ರಖ್ಯಾತರಾದರು. ನಂತರ ಈ ಕಂಪನಿಯ ಮ್ಯಾನೇಜರ್ ಆಗಿಯೂ ಸೇವೆ ಸಲ್ಲಿಸಿದರು.

ಚಂದ್ರಕಲಾ ನಾಟಕ ಕಂಪನಿಯನ್ನು ೧೯೩೨ರಲ್ಲಿ ಪ್ರಾರಂಭಿಸುವ ಮೂಲಕ ಪೀರರು ವೃತ್ತಿ ರಂಗಭೂಮಿಯ ಶುದ್ಧೀಕರಣ ಹಾಗೂ ಪುನರ್ನವೀಕರಣಕ್ಕಾಗಿ ಶ್ರಮಿಸಿದರು. ಇವರು ನೀಡಿದ ’ಷಹಜಹಾನ್' ನಾಟಕ ಕನ್ನಡ ರಂಗಭೂಮಿಯ ಹೊಸ ಅಧ್ಯಾಯಕ್ಕೆ ಕಾರಣವಾಯಿತು. ಅಷ್ಟೇ ಅಲ್ಲದೇ ’ಗೌತಮಬುದ್ಧ' ನಾಟಕದಲ್ಲಿನ ಬುದ್ಧನ ಪಾತ್ರಾಭಿನಯ ಇವರ ಕಲಾಪ್ರತಿಭೆಗೆ ಹಿಡಿದ ಕೈಗನ್ನಡಿಯೆನಿಸಿತ್ತು. ಪಾತ್ರಗಳನ್ನು ವ್ಯಕ್ತಿತ್ವಕ್ಕೆ ತಕ್ಕಂತೆ ಅಭಿನಯಿಸುವ ಕಲೆ ಪೀರರಿಗೆ ಕರಗತವಾಗಿತ್ತು. ಪೀರ್ ಅವರ ಪ್ರತಿಷ್� ೆ ಹೆಚ್ಚಿಸಿದ ಮತ್ತೊಂದು ನಾಟಕ ಎಚ್.ಎಲ್.ಎನ್. ಸಿಂಹರ ’ಸಂಸಾರ ನೌಕೆ'. ಪೀರ್ ಅವರ ಬದುಕಿನುದ್ದಕ್ಕೂ ಕಲಾದೇವಿಯ ಪ್ರೀತಿಗೆ ಪಾತ್ರರಾಗಿದ್ದರು. ಭಾಗ್ಯದೇವತೆ ಒಲಿಯದೆ ಹಲವು ಸಂಕಷ್ಟಗಳಿಗೆ ಬಲಿಯಾಗಿ, ಸಾಲ-ಸೋಲದ ನೋವನ್ನು ನುಂಗಿ ಬದುಕಿದ ಇವರು ಮಲೇರಿಯಾಕ್ಕೆ ಬಲಿಯಾಗಿ ಜೂನ್ ೨೩ರ ೧೯೩೭ರಂದು ಅಸ್ತಂಗತರಾದರು.