ವಿಶೇಷ ಸೂಚನೆ

ಡಾ|| ಗಂಗೂಬಾಯಿ ಹಾನಗಲ್

ಕಿರಾಣ ಘರಾಣ ಹಾಡುವ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ದೇಶ - ವಿದೇಶಗಳಲ್ಲಿ ಹಾರಿಸಿದ ಖ್ಯಾತಿ ಡಾ||ಗಂಗೂಬಾಯಿ ಹಾನಗಲ್ ಅವರದು. ಇವರು ೧೯೧೩ರಲ್ಲಿ ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಧಾರವಾಡದಲ್ಲಿ ಜನಿಸಿದರು. ತಾಯಿ ಅಂಬಾಬಾಯಿಯೇ ಇವರಿಗೆ ಸಂಗೀತದ ಪ್ರಥಮ ಗುರು.
ತಾಯಿ ಅಂಬಾಬಾಯಿಯವರಿಂದ ಬಾಲ್ಯದಲ್ಲಿ ಕರ್ನಾಟಕ ಸಂಗೀತ ಕಲಿತರೂ, ಕ್ರಮೇಣವಾಗಿ ಹಿಂದೂಸ್ತಾನಿ ಸಂಗೀತದತ್ತ ಒಲವು ಮೂಡಿತು. ಪರಿಣಾಮವಾಗಿ, ಕೃಷ್ಣಾಚಾರ್ಯ ಹುರುಗೂರರಿಂದ ಹಿಂದುಸ್ತಾನಿ ಶಿಕ್ಷಣ ಆರಂಭಿಸಿದರು. ನಂತರ ಸವಾಯಿ ಗಂಧರ್ವರಲ್ಲಿ ಶಿಷ್ಯವೃತ್ತಿ. ಸತತ ಸಂಗೀತಾಭ್ಯಾಸದಿಂದ ೧೯೨೪ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡುವ ಮೂಲಕ ಗಾಯಕಿಯಾಗಿ ಹೊರಹೊಮ್ಮಿದರಲ್ಲದೆ, ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರರಾದರು. ೧೯೩೮ರಲ್ಲಿ ಕಲ್ಕತ್ತೆಯಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಹಾಡಿ ಹಿಂದೂಸ್ತಾನಿ ಸಂಗೀತದ ಘಟಾನುಘಟಿಗಳಿಂದ ಭೇಷ್ ಎನಿಸಿಕೊಂಡ ಗಂಗೂಬಾಯಿ ಅಲ್ಲಿಂದ ಮುಂದೆ ನಡೆದದ್ದು ಸಂಗೀತ ಸಾಧನೆಯ ಶಿಖರದತ್ತ.

ಗಂಗೂಬಾಯಿಯವರ ಕಂಚಿನ ಕಂಠ ಕ್ಕೆ ತಲೆದೂಗದವರೇ ಇಲ್ಲ. ಅವರ ಆಕರ್ಷಕ ಆಲಾಪ ವಿಸ್ತಾರಗಳು, ರೇಷ್ಮೆ ಎಳೆಯಂತಹ ಲಯಗಾರಿಕೆ, ಬಿಗುವಾದ ಗಮಕಗಳು, ಹೃದ್ಯನಾದ. ಕೇಳುಗರ ಪಾಲಿಗೆ ಅಪೂರ್ವ ಅನುಭವ.

ಮಗಳು ಖ್ಯಾತ ಸಂಗೀತ ವಿದೂಷಿ ಕೃಷ್ಣಾ ಹಾನಗಲ್ ಹಾಗೂ ಸಹೋದರ ಖ್ಯಾತ ತಬಲಾವಾದಕ ಶೇಷಗಿರಿ ಹಾನಗಲ್ ಅವರ ಜೊತೆಗೂಡಿ ಗಂಗೂಬಾಯಿಯವರು ನೀಡಿದ ಕಾರ್ಯಕ್ರಮಗಳು ಅಸಂಖ್ಯ. ಈ ಜೋಡಿಗಳ ಕಾರ್ಯಕ್ರಮ, ದೇಶ - ವಿದೇಶದ ಸಂಗೀತ ಪ್ರೇಮಿಗಳ ಪಾಲಿಗೆ ರಸದೌತಣ. ಆಕಾಶವಾಣಿ, ದೂರದರ್ಶನಗಳಲ್ಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗಿ ಜನಮನ ಸೂರೆಗೊಂಡಿವೆ.

ಇವರು ತಮ್ಮ ಗುರುಗಳ ಸ್ಮರಾಣಾರ್ಥವಾಗಿ ಪ್ರತಿವರ್ಷ ಕುಂದಗೋಳದಲ್ಲಿ ಸಂಗೀತ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮತಿಯವರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ, ವಿಧಾನಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹೀಗೆ ಸಂಗೀತ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಸೇವೆ ಹಾಗೂ ಸಾಧಿಸಿದ ಹಿರಿಮೆಗೆ ಅನೇಕ ಪ್ರಶಸ್ತಿ - ಪುರಸ್ಕಾರ ಸನ್ಮಾನಗಳು ಅವರನ್ನರಿಸಿಕೊಂಡು ಬಂದಿವೆ. ಅವುಗಳಲ್ಲಿ "ಸ್ವರ ಶಿರೋಮಣಿ", ’ಬೇಗಂ ಅಖ್ತರ್ ರೂಹೆ ಘಜಲ್' ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಮಧ್ಯಪ್ರದೇಶದ ’ತಾನ್ಸೇನ್' ಪ್ರಶಸ್ತಿ ಭಾರತ ಸರ್ಕಾರ ನೀಡಿದ ’ಪದ್ಮಭೂಷಣ' ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ’ಕನಕ ಪುರಂದರ' ಪ್ರಶಸ್ತಿ ಪ್ರಮುಖವಾದುವು.