ವಿಶೇಷ ಸೂಚನೆ

ಕೆ.ಶಿವರಾಮ ಕಾರಂತ್

ಡಾ||ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎನ್ನುವ ಹಳ್ಳಿಯಲ್ಲಿ ೧೯೦೨ರ ಅಕ್ಟೋಬರ್ ೧೦ರಂದು ಜನಿಸಿದರು. ಅವರ ತಂದೆ ಶ್ರೀ ಕೆ.ಶೇಷ ಕಾರಂತ, ತಾಯಿ ಶ್ರೀಮತಿ ಲಕ್ಷ್ಮಿ.
ಕಾರಂತರು ಕೋಟದ ಪ್ರಾಥಮಿಕ ಶಾಲೆ ಮತ್ತು ಕುಂದಾಪುರದ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಮುಂದಿನ ಶಿಕ್ಷಣಕ್ಕಾಗಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದರು. ಗಾಂಧೀಜಿಯವರು ತರುಣರಿಗಿತ್ತ ಕರೆಗೆ ಓಗೊಟ್ಟು ಗಾಂಧೀವಾದಿಗಳಾಗಿ, ಕಾಲೇಜನ್ನು ಬಿಟ್ಟು ದೇಶಸೇವೆಯನ್ನು ಕೈಗೊಂಡರು. ಪಾನನಿರೋಧ, ಖಾದಿಯ ಬಳಕೆ ಇಂತಹ ವಿಷಯಗಳ ಪ್ರಚಾರಕ್ಕಾಗಿ ನಾಡಿನ ಮೂಲೆಮೂಲೆಯಲ್ಲಿ ಅಲೆದರು. ಮುಂದೆ ಪುತ್ತೂರಿನಲ್ಲಿ ನೆಲೆಸಿ ಸಾಹಿತ್ಯರಚನೆ, ಸಮಾಜದ ಕಾರ್ಯ ಇವನ್ನೇ ಮುಖ್ಯವಾಗಿ ಆರಿಸಿಕೊಂಡರು. ಬಾಲವನವನ್ನು ಕಟ್ಟಿ ಮಕ್ಕಳ ಕೂಟ, ಶಾಂತಿ ಶಿಬಿರ, ನಾಡಹಬ್ಷ, ಶಿಕ್ಷಕರ ಸಮ್ಮೇಳನ ಇಂತಹ ಚಟುವಟಿಕೆಗಳ ಕೇಂದ್ರ ಶಕ್ತಿಯಾದರು. ಚಲನಚಿತ್ರವನ್ನೂ ತಯಾರಿಸಿದರು. ಗೀತನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪ, ಫೋಟೋಗ್ರಫಿ ಹೀಗೆ ಎಲ್ಲ ಕಲೆಗಳನ್ನು ಅಧ್ಯಯನ ಮಾಡಿದರು. ಮಕ್ಕಳಿಗಾಗಿ "ಬಾಲ ಪ್ರಪಂಚ", ದೊಡ್ಡವರಿಗಾಗಿ "ವಿಜ್ಞಾನ ಪ್ರಪಂಚ" ಯೋಜನೆಗಳನ್ನು ಒಬ್ಷರೇ ಕೈಗೊಂಡು ಸಾಧಿಸಿದರು. ಯಕ್ಷಗಾನ ತಂಡವನ್ನು ರೂಪಿಸಿ ಯುರೋಪಿನಲ್ಲಿ ಜಪಾನಿನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು. ಅವರ ಕೃತಿಗಳು ಹಿಂದಿ, ತಮಿಳು, ಮಲೆಯಾಳಿ, ಗುಜರಾತಿ, ಮರಾ� ಿ, ತೆಲುಗು, ತುಳು, ಒರಿಯಾ, ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದವಾಗಿವೆ.

ಪ್ರಶಸ್ತಿ - ಗೌರವ ಡಾ|| ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ೧೯೭೮ರಲ್ಲಿ ಭಾರತದ ಸಾಹಿತ್ಯ ಕೃತಿಗೆ ಸಲ್ಲಬಹುದಾದ ಅತ್ಯುಚ್ಚ ಪ್ರಶಸ್ತಿಯಾದ ಜ್ಞಾನಪೀ� ಪ್ರಶಸ್ತಿಯು ದೊರೆತಿತು. ಅವರ 'ಯಕ್ಷಗಾನ ಬಯಲಾಟ' ಕೃತಿಗೆ ೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿಯನ್ನು ನೀಡಿತು. ಅವರ 'ಭಾರತೀಯ ಚಿತ್ರಕಲೆ'ಗೆ ೧೯೩೧ರಲ್ಲಿ ದೇವರಾಜ ಬಹದ್ದೂರ್ ಬಹುಮಾನವೂ 'ಕಲಾ ಪ್ರಪಂಚಕ್ಕೆ' ೧೯೭೮ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿಯೂ ೧೯೮೪ರಲ್ಲಿ 'ಭಾರತೀಯ ಶಿಲ್ಪ' ಗ್ರಂಥಕ್ಕೆ ಕನರ್ಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ. ೧೯೭೫ರಲ್ಲಿ 'ಚೋಮನ ದುಡಿ' ಚಲನಚಿತ್ರವು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರಕಥೆಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ೧೯೬೫ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿಯು ಗೌರವ ಪ್ರಶಸ್ತಿಯನ್ನು ಅರ್ಪಿಸಿತು. ೧೯೭೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೊಷಿಪ್ ಮತ್ತು ೧೯೮೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಷಿಪ್ ಕಾರಂತರಿಗೆ ಸಂದವು.

ಡಾ||ಕಾರಂತರ ಅಸಾಧಾರಣ ಸಾಧನೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಬಹುಮಾನಗಳನ್ನೂ ಪದಕಗಳನ್ನೂ ಅರ್ಪಿಸಿವೆ. ದಿ ಏಷ್ಯಾಟಿಕ್ ಸೊಸೈಟಿ ಆಫ್ ಬಾಂಬೆ ಸಂಸ್ಥೆಯ ಕ್ಯಾಂಪ್ಬೆಲ್ ಮೆಮೋರಿಯಲ್ ಚಿನ್ನದ ಪದಕವೂ ದಾದಾಬಾಯಿ ನವರೋಜಿ ಸ್ಮಾರಕ ಬಹುಮಾನವೂ ಅವರು ಪಡೆದ ಗೌರವಗಳ ಮಾಲಿಕೆಗೆ ಸೇರಿವೆ. ಶಿವರಾಮ ಕಾರಂತರಿಗೆ ಅನೇಕ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅರ್ಪಿಸಿವೆ. ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ, ಮಂಗಳೂರು ವಿಶ್ವವಿದ್ಯಾನಿಲಯ, ಜಬ್ಷಲ್ಪುರ ವಿಶ್ವವಿದ್ಯಾನಿಲಯ ಇವುಗಳೂ ದ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ಸಂಸ್ಥೆಯೂ ಗೌರವ ಡಾಕ್ಟರೇಟನ್ನು ಅರ್ಪಿಸಿ ಗೌರವಿಸಿದೆ. ಮಧ್ಯಪ್ರದೇಶ ಸರ್ಕಾರವು ಯಕ್ಷಗಾನಕ್ಕೆ ಹೊಸ ಚೈತನ್ಯ ನೀಡಿದ ಕಾರಂತರ ಸಾಧನೆಗಾಗಿ ೧೯೯೦ರಲ್ಲಿ ಅವರಿಗೆ ’ತುಲಸೀ ಸಂಮಾನ್' ಗೌರವವನ್ನು ಸಲ್ಲಿಸಿತು.

೧೯೬೮ರಲ್ಲಿ ಭಾರತ ಸರ್ಕಾರವು ಕಾರಂತರಿಗೆ ’ಪದ್ಮ ಭೂಷಣ' ಪ್ರಶಸ್ತಿಯನ್ನು ನೀಡಿತು. ಟೆಹಾರನಿನಲ್ಲಿ ಜರಗಿದ ಯುನೆಸ್ಕೋ ಶಿಕ್ಷಣ ಸಮ್ಮೇಳನದಲ್ಲಿ ಕಾರಂತರು ಭಾರತದ ವಿಶೇಷ ಪ್ರತಿನಿಧಿಯಾಗಿ ಭಾಗವಹಿಸಿದರು. ಡಾ||ಕಾರಂತರು ಹಲವು ಮಹತ್ವದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಮ್ಮೇಳನಗಳ ಅಧ್ಯಕ್ಷ ಪೀ� ಕ್ಕೆ ಆಹ್ವಾನಿಸಲ್ಪಟ್ಟಿದ್ದಾರೆ. ಇವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಬಹುದು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡದ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ, ತಿರುವನಂತಪುರದಲ್ಲಿ ನಡೆದ ಅಖಿಲ ಭಾರತ ಗ್ರಂಥಕರ್ತರ ಸಮಾವೇಶ, ನ್ಯೂಯಾರ್ಕಿನಲ್ಲಿ ನಡೆದ ಒಂಭತ್ತನೆಯ ಈಶಾನ್ಯ ಅಮೇರಿಕ ಕನ್ನಡ ಸಮ್ಮೇಳನ, ಅಖಿಲ ಭಾರತ ಅಣುಸ್ಥಾವರ ಯೋಜನೆಯ ಕಮ್ಮಟದ ಕೈಗಾ ಅಣುಸ್ಥಾವರವನ್ನು ಕುರಿತು ವಿಶೇಷ ಸಮ್ಮೇಳನದ ಗೋಷ್� ಿ ಇಂತಹ ಹಲವಾರು ಮಹತ್ವದ ಸಮ್ಮೇಳನಗಳ ಅಧ್ಯಕ್ಷ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ.

ಡಾ||ಶಿವರಾಮ ಕಾರಂತರು ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. ಯಕ್ಷಗಾನ ಕಲಾಸೇವೆಗಾಗಿ ಸ್ವೀಡನ್ನಿನ ದ ಆರ್ಕೈವ್ಸ್ ದ ಇಂಟರ್ನ್ಯಾಷನಲ್ ಸಂಸ್ಥೆಯು ಅವರಿಗೆ ಕಂಚಿನ ಪದಕವನ್ನು ಕೊಟ್ಟು ಗೌರವಿಸಿದೆ. ಅವರು ನಿರ್ದೇಶಿಸಿದ ಯಕ್ಷಗಾನ ಪ್ರದರ್ಶನಗಳಿಗೆ ಜಪಾನಿನ ಡಾನ್ಸ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ ದೊರೆತಿದೆ. ೧೯೮೯ರಲ್ಲಿ ಡಾ||ಶಿವರಾಮ ಕಾರಂತರಿಗೆ ಕರ್ನಾಟಕದಲ್ಲಿ ಸಾಹಿತ್ಯ ಕೃತಿಗೆ ಸಲ್ಲಬಹುದಾದ ಅತ್ಯುಚ್ಚ ಪ್ರಶಸ್ತಿ ’ಪಂಪ ಪ್ರಶಸ್ತಿ' ಯು ಸಂದಿದೆ.