ವಿಶೇಷ ಸೂಚನೆ

ನಾಡು-ನುಡಿ

ಗಂಗರು
ಕದಂಬರಿಗೆ ಸಮಕಾಲೀನರಾಗಿ ಕರ್ನಾಟಕದ ದಕ್ಷಿಣ ಭಾಗವನ್ನು ಮೊದಲಿಗೆ ಕುವಳಾಲಪುರ(ಕೋಲಾರ)ದಿಂದಲೂ, ನಂತರ ತಲಕಾಡಿನಿಂದಲೂ ಆಳಿದ ಗಂಗರ ಮೊದಲ ದೊರೆ ಕೊಂಗುಣಿವರ್ಮ, ಅವನ ನಂತರ ಕ್ರಮವಾಗಿ 1ನೆಯ ಮಾಧವ, ಹರಿವರ್ಮ, 2ನೆಯ ಮಾಧವ, ವಿಷ್ಣುಗೋಪ, 3ನೆಯ ಮಾಧವ ಮತ್ತು ಅವಿನೀತ ಅವರುಗಳು ಕ್ರಿ.ಶ. 350ರಿಂದ 469ರ ವರೆಗೆ ಆಳಿದರು. 3ನೆಯ ಮಾಧವನು ಕದಂಬ ಕಾಕುಸ್ಥವರ್ಮನ ಮಗಳನ್ನು ಮದುವೆಯಾಗಿದ್ದ. ಅವನ ಮಗ ಅವಿನೀತನು ಗಂಗರಾಜ್ಯವನ್ನು 60 ವರ್ಷಗಳ ಕಾಲ ಆಳಿ ರಾಜ್ಯವನ್ನು ವಿಸ್ತರಿಸಿದ. ಅವಿನೀತನ ಮಗ ದುರ್ವಿನೀತನು ಗಂಗ ವಂಶದ ಪ್ರಖ್ಯಾತ ದೊರೆಗಳಲ್ಲೊಬ್ಷ. ಪುನ್ನಾಟ ಮತ್ತು ಬಾಣ ರಾಜ್ಯಗಳನ್ನು ವಶಪಡಿಸಿಕೊಂಡ ದುರ್ವಿನೀತನು ಕವಿಯೂ ಆಗಿದ್ದ. ಅವನ ಆಸ್ಥಾನಕ್ಕೆ ಬಂದಿದ್ದ ಭಾರವಿಯ ಕಿರಾತಾರ್ಜುನೀಯದ 15ನೆಯ ಸರ್ಗಕ್ಕೆ ಸ್ವತಃ ಟೀಕೆಯನ್ನು ಬರೆದಿದ್ದ. ಗುಣಾಢ್ಯನ ವಡ್ಡಕಥೆಯನ್ನು ಸಂಸ್ಕತಕ್ಕೆ ಭಾಷಾಂತರ ಮಾಡಿದ ದುರ್ವಿನೀತನ ನಂತರ ಪೆÇಲವೀರ, ಮುಷ್ಕರ, ಶ್ರೀವಿಕ್ರಮ, ಭೂವಿಕ್ರಮರು ಕ್ರಿ.ಶ. 539ರಿಂದ 679ರ ವರೆಗೆ ಗಂಗ ರಾಜ್ಯವನ್ನಾಳಿದರು. ಕ್ರಿ.ಶ. 679ರಲ್ಲಿ ಪಟ್ಟಕ್ಕೆ ಬಂದ 1ನೆಯ ಶಿವಮಾರ ರಾಜ್ಯವನ್ನು ಆಕ್ರಮಿಸಲು ಬಂದ ಪಲ್ಲವರನ್ನು ಸೋಲಿಸಿದ. ಅವನ ನಂತರ ಅವನ ಮೊಮ್ಮಗ ಶ್ರೀಪುರುಷ(ಕ್ರಿ.ಶ. 725-788)ನು ಪಲ್ಲವರು ಮತ್ತು ರಾಷ್ಟ್ರಕೂಟರೊಡನೆ ಸದಾ ಯುದ್ಧನಿರತನಾಗಿದ್ದ. ನೊಳಂಬರು ಮತ್ತು ಪಾಂಡ್ಯರೊಡನೆಯೂ ಹಲವು ಯುದ್ಧಗಳನ್ನು ಮಾಡಿದ. ಶ್ರೀಪುರುಷನ ನಂತರ ಪಟ್ಟಕ್ಕೆ ಬಂದ ಅವನ ಮಗ 2ನೆಯ ಶಿವಮಾರನು, ಹಲವಾರು ರಾಷ್ಟ್ರಕೂಟ - ಗಂಗ ಯುದ್ಧಗಳಲ್ಲಿ ಸೋತು ತನ್ನ ಜೀವಿತಾವಧಿಯ ಬಹುಕಾಲ ರಾಷ್ಟ್ರಕೂಟರ ಸೆರೆಮನೆಯಲ್ಲೇ ಇರಬೇಕಾಯಿತು. ಆ ಸಂದರ್ಭದಲ್ಲೇ ರಾಷ್ಟ್ರಕೂಟ ಸ್ತಂಭ (ಕಂಬಯ್ಯ) ಗಂಗವಾಡಿಯ ರಾಜ್ಯಪಾಲನಾದ. ರಾಷ್ಟ್ರಕೂಟ ಸಿಂಹಾಸನಕ್ಕೆ ಧ್ರುವನ ಮಕ್ಕಳಲ್ಲಿ ಘರ್ಷಣೆ ನಡೆದಾಗ, ರಾಜಕೀಯ ಕಾರಣಗಳಿಂದ, ಶಿವಮಾರ ಬಿಡುಗಡೆ ಹೊಂದಿದರೂ ಮತ್ತೆ ಬಂಧಿತನಾದ. ವೃದ್ಧಾಪ್ಯದಲ್ಲಿ ಬಿಡುಗಡೆ ಹೊಂದಿದ. `ಗಜಾಷ್ಟಕ' ಮತ್ತು `ಸೇತುಬಂಧ' ಎಂಬ ಕೃತಿಗಳನ್ನು ರಚಿಸಿದ. 2ನೆಯ ಶಿವಮಾರನ ನಂತರ ಗಂಗರು ರಾಷ್ಟ್ರಕೂಟರ ಅಧೀನರಾಗಿ ಆಳ್ವಿಕೆ ಮುಂದುವರೆಸಿದರು. 1ನೆಯ ರಾಜಮಲ್ಲ, ನೀತಿಮಾರ್ಗ ಎರೆಗಂಗ, ಬೂತುಗ, ಇಮ್ಮಡಿ ರಾಚಮಲ್ಲ, ಎರೆಯಪ್ಪ, ಇಮ್ಮಡಿ ಬೂತುಗ, ಇಮ್ಮಡಿ ಮಾರಸಿಂಹ, 4ನೆಯ ರಾಚಮಲ್ಲ ಇತ್ಯಾದಿ ಗಂಗವಂಶದ ರಾಜರುಗಳು ಆಳ್ವಿಕೆ ನಡೆಸಿದರು. ಅವರ ಕಾಲದಲ್ಲಿ ನೊಳಂಬ ಮತ್ತು ಚೋಳರೊಂದಿಗಿನ ಘರ್ಷಣೆಗಳು ಹೆಚ್ಚಿದವು. ಚೋಳರ ದಾಳಿಯಂತೂ ಅಧಿಕಗೊಂಡಿತು. ತಮ್ಮ ಅಂತಿಮ ದಿನಗಳವರೆಗೆ ರಾಷ್ಟ್ರಕೂಟರ ನಿಷ್ಠಾವಂತ ಸಾಮಂತರಾಗಿಯೇ ಮುಂದುವರಿದ ಗಂಗರ, ಇಮ್ಮಡಿ ಮಾರಸಿಂಹನ ಕಾಲದಲ್ಲಿ ಅವನ ಮಂತ್ರಿ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಅದ್ಭುತವಾದ ಗೊಮ್ಮಟ ವಿಗ್ರಹವನ್ನು ನಿರ್ಮಿಸಿದ. ಕ್ರಿ.ಶ. ಸುಮಾರು 350ರಿಂದ ಕ್ರಿ.ಶ. ಸುಮಾರು 999ರ ವರೆಗೆ ಸುಮಾರು 650 ವರ್ಷಗಳಷ್ಟು ಸುದೀರ್ಘ ಕಾಲ ಕರ್ನಾಟಕದ ದಕ್ಷಿಣ ಭಾಗದ ಬಹುತೇಕ ಪ್ರದೇಶವನ್ನು ಗಂಗವಾಡಿ 96000 ಎಂಬ ಹೆಸರಿನಿಂದ ಆಳಿದ ಗಂಗರು ಕರ್ನಾಟಕದ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾರೆ.
ಬಾದಾಮಿಯ ಚಾಲುಕ್ಯರು
ಕನ್ನಡ ಭಾಷಿಕರನ್ನೆಲ್ಲ ಒಂದುಗೂಡಿಸಿ ನರ್ಮದೆಯವರೆಗೆ ಆಳಿದ ಬಾದಾಮಿ ಚಾಲುಕ್ಯರ (ಅವರ ರಾಜಧಾನಿ ಬಾದಾಮಿ) ಮೂಲ ಪುರುಷ ಜಯಸಿಂಹ. ಆ ವಂಶದ ಮೊದಲ ಪ್ರಖ್ಯಾತ ದೊರೆ 1ನೆಯ ಪುಲಕೇಶಿ. ಇವನ ಕಾಲದಲ್ಲಿ ಬಾದಾಮಿಯಲ್ಲಿ ಕೋಟೆಯ ನಿರ್ಮಾಣವಾಯಿತು. ಈ ವಿಷಯವನ್ನು ಬಾದಾಮಿಯ ಬಂಡೆಗಲ್ಲು ಶಾಸನ ತಿಳಿಸುತ್ತದೆ. 1ನೆಯ ಪುಲಕೇಶಿ ನಂತರ ಕೀರ್ತಿವರ್ಮ ಮತ್ತು ಮಂಗಳೀಶರು ಆಳಿದ ಕಾಲದಲ್ಲಿ ರಾಜ್ಯ ವಿಸ್ತಾರವಾದರೂ, ನಂತರದ 2ನೆಯ ಪುಲಿಕೇಶಿಯ ಕಾಲದಲ್ಲಿ ಕರ್ನಾಟಕವು ನರ್ಮದಾ ನದಿಯ ದಕ್ಷಿಣ ತೀರದವರೆಗೆ ವಿಸ್ತರಿಸಿತು. ಆಗ ಉತ್ತರಾಪಥೇಶ್ವರನೆಂದು ಪ್ರಸಿದ್ಧನಾಗಿದ್ದ ಕನೋಜದ ಹರ್ಷವರ್ಧನನನ್ನು ಸೋಲಿಸಿ ಕೀರ್ತಿಪಡೆದ 2ನೆಯ ಪುಲಿಕೇಶಿಯ ಕಾಲದಲ್ಲಿ ಪರ್ಷಿಯಾ ದೇಶ ಮತ್ತು ಕರ್ನಾಟಕಗಳ ನಡುವೆ ಪರಸ್ಪರ ರಾಯಭಾರಿಗಳು ನೇಮಕಗೊಂಡಿದ್ದರು. ಇವನ ಕಾಲದಲ್ಲೇ ಚೀನಿ ಪ್ರವಾಸಿ ಹ್ಯುಯೆನ್‍ತ್ಸಾಂಗನು ಕರ್ನಾಟಕಕ್ಕೆ ಭೇಟಿ ನೀಡಿದ್ದ. ಮೊದಲು ಪಲ್ಲವರನ್ನು ಸೋಲಿಸಿದ್ದ 2ನೆಯ ಪುಲಿಕೇಶಿಯು ನಂತರ ಪಲ್ಲವ ನರಸಿಂಹವರ್ಮನಿಂದ ಕ್ರಿ.ಶ. 642ರಲ್ಲಿ ಸೋಲಬೇಕಾಯಿತು. 13 ವರ್ಷಗಳ ನಂತರ 2ನೆಯ ಪುಲಕೇಶಿಯ ಮಗ 1ನೆಯ ವಿಕ್ರಮಾದಿತ್ಯನು ಮತ್ತೆ ಪಲ್ಲವರಿಂದ ಚಾಲುಕ್ಯ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಕ್ರಿ.ಶ. 670ರಲ್ಲಿ ಅವನೇ ಪಲ್ಲವರನ್ನು ಕಾಂಚಿಯವರೆಗೆ ಓಡಿಸಿಕೊಂಡು ಹೋದ. ಪಲ್ಲವ ನರಸಿಂಹವರ್ಮ ಬಾದಾಮಿಯನ್ನು ಗೆದ್ದಾಗ, ಅಲ್ಲಿನ ಕೋಟೆ ಮತ್ತು ಊರುಗಳನ್ನು ಹಾಳು ಮಾಡಿದ್ದ. ಅನಂತರ ಚಾಲುಕ್ಯ ಸಾಮ್ರಾಜ್ಯವನ್ನು ವಿಜಯಾದಿತ್ಯ, 2ನೆಯ ವಿಕ್ರಮಾದಿತ್ಯ, ಇಮ್ಮಡಿ ಕೀರ್ತಿವರ್ಮ ಆಳಿದರು. 2ನೆಯ ವಿಕ್ರಮಾದಿತ್ಯ ಪಲ್ಲವರನ್ನು ಗೆದ್ದಾಗ ಕಾಂಚೀ ನಗರವನ್ನು ಹಾಳು ಮಾಡದೆ, ಅಲ್ಲಿನ ರಾಜಸೀಂಹೇಶ್ವರ ದೇವಾಲಯಕ್ಕೆ ದಾನ ನೀಡಿದ. ಅವನ ಕಾಲದಲ್ಲೇ ಪಟ್ಟದಕಲ್ಲಿನಲ್ಲಿ ಎರಡು ಉತ್ತಮ ಶಿವಾಲಯಗಳನ್ನು ಅವನ ಇಬ್ಷರು ರಾಣಿಯರು ಕಟ್ಟಿಸಿದರು. ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ಬಾದಾಮಿ ಚಾಲುಕ್ಯ ವಂಶದ ಆಳ್ವಿಕೆ ಕೊನೆಗೊಂಡಿತು.
ಬಾದಾಮಿಯ ಚಾಲುಕ್ಯರ ಕಾಲದಲ್ಲಿ ವಿಸ್ತಾರವಾದ, ಕರ್ನಾಟಕದ ಸೇನೆಯನ್ನು `ಕರ್ನಾಟಕ ಬಲ' ಎಂದು ಎಲ್ಲರೂ ಹೊಗಳುತ್ತಿದ್ದರು. ಅವರ ಕಾಲದಲ್ಲಿ ಬಾದಾಮಿಯ ಗುಹಾಲಯಗಳು ಮತ್ತು ಹಲವು ದೇವಾಲಯಗಳು, ಐಹೊಳೆ ಮತ್ತು ಪಟ್ಟದಕಲ್ಲಿನಲ್ಲಿ ಅನೇಕ ಉತ್ತಮ ದೇವಾಲಯಗಳು ನಿರ್ಮಾಣವಾದುವು.
ರಾಷ್ಟ್ರಕೂಟರು
ಬಾದಾಮಿ ಚಾಲುಕ್ಯರ ಸಾಮಂತರಾಗಿದ್ದ ರಾಷ್ಟ್ರಕೂಟರು ಬಾದಾಮಿ ಚಾಲುಕ್ಯ ವಂಶದ ಇಮ್ಮಡಿ ಕೀರ್ತಿವರ್ಮನ ನಂತರ ಕ್ರಿ.ಶ. 733ರ ವೇಳೆಗೆ ಲಟ್ಟಲೂರನ್ನು (ಉಸ್ಮಾನಾಬಾದ್ ಜಿಲ್ಲೆಯ ಲಾತೂರು) ರಾಜಧಾನಿ ಮಾಡಿಕೊಂಡು ಆಳತೊಡಗಿದರು. ನಂತರ ಅವರ ರಾಜಧಾನಿ ಮಾನ್ಯಖೇಟ (ಗುಲ್ಷರ್ಗ ಜಿಲ್ಲೆಯ ಮಳಖೇಡ್)ಕ್ಕೆ ಬದಲಾಯಿತು. ರಾಷ್ಟ್ರಕೂಟ 1ನೆಯ ಕೃಷ್ಣನ ಕಾಲದಲ್ಲಿ ಎಲ್ಲೋರದ ಕೈಲಾಸದ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಯಿತು. ಅವನ ಕಾಲದಲ್ಲೇ ಗಂಗವಾಡಿಯೂ ರಾಷ್ಟ್ರಕೂಟರ ವಶವಾಯಿತು. ಅವನ ನಂತರ ಧ್ರುವ ಮತ್ತು ಗೋವಿಂದರ ನಡುವೆ ರಾಜ್ಯಾಧಿಕಾರಕ್ಕೆ ಹೋರಾಟ ನಡೆದು ಧ್ರುವನೇ ದೊರೆಯಾದ ಮತ್ತು ರಾಷ್ಟ್ರಕೂಟ ರಾಜ್ಯವನ್ನು ನರ್ಮದೆಯ ಆಚೆಗೂ ವಿಸ್ತರಿಸಿದ. ಧ್ರುವನ ನಂತರ 3ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ಇಮ್ಮಡಿಕೃಷ್ಣ, ಮುಮ್ಮಡಿ ಇಂದ್ರ, ಇಮ್ಮಡಿ ಅಮೋಘವರ್ಷ, ಮುಮ್ಮಡಿ ಕೃಷ್ಣ ಇತ್ಯಾದಿ ದೊರೆಗಳು ರಾಷ್ಟ್ರಕೂಟ ಸಾಮ್ರಾಜ್ಯವನ್ನಾಳಿದರು. ಅವರ ಪೈಕಿ ಅಮೋಘವರ್ಷ ನೃಪತುಂಗನು, ಅವನ ಕಾಲದಲ್ಲಿ ಶ್ರೀವಿಜಯನಿಂದ ರಚಿತವಾದ `ಕವಿರಾಜಮಾರ್ಗ' ಕೃತಿಯಿಂದ ಹೆಸರು ಪಡೆದಿದ್ದಾನೆ. ಮೊದಲಿಗೆ ಗಂಗರೊಡನೆ ಯುದ್ಧಗಳನ್ನು ಮಾಡಿ ಗೆಲುವು ಪಡೆದ ರಾಷ್ಟ್ರಕೂಟರು, ಅನಂತರ ಅವರೊಡನೆ ಉತ್ತಮ ಸಂಬಂಧ ಬೆಳೆಸಿ ಕೊನೆಯ ಕಾಲದಲ್ಲಿ ಚೋಳರೊಡನೆ ಹೋರಾಡುವಾಗ ಹೆಚ್ಚಿನ ನೆರವನ್ನು ಸ್ವೀಕರಿಸಿದರು. 1ನೆಯ ಕೃಷ್ಣ, ನೃಪತುಂಗ ಮತ್ತು ಮುಮ್ಮಡಿ ಕೃಷ್ಣ ರಾಷ್ಟ್ರಕೂಟ ವಂಶದ ಜನಾನುರಾಗಿ ದೊರೆಗಳಾಗಿದ್ದರು. ಇವರ ಕಾಲದಲ್ಲಿ ಕರ್ನಾಟಕವು ಮಧ್ಯಪ್ರದೇಶದವರೆಗೆ ವಿಸ್ತರಿಸಿತ್ತು.