ವಿಶೇಷ ಸೂಚನೆ

ಕೆ. ವೆಂಕಟಪ್ಪ

ಕಲೆಗಾಗಿಯೇ ಇಡೀ ಬದುಕನ್ನು ಸವೆಸಿ, ಜೀವನದ ಪ್ರತಿಗಳಿಗೆಯೂ ಕಲೆಯ ಗುಂಗಿನಲ್ಲೆ ಕಳೆದು, ಕಲೆಗೆ ದುಡಿಯಲೆಂದೇ ಒಂಟಿಯಾಗಿ ಉಳಿದು, ಚಿತ್ರಕಲೆಯ ತಮ್ಮ ಅದ್ಭುತ ಪ್ರತಿಭೆಯಿಂದ ಕರ್ನಾಟಕಕ್ಕೆ ಕೀರ್ತಿತಂದ ಕಲಾ ತಪಸ್ವಿ ವೆಂಕಟಪ್ಪನವರು ಜನಿಸಿದ್ದು, ೧೮೮೬ರಲ್ಲಿ.

ವೆಂಕಟಪ್ಪನವರ ಪೂರ್ವಿಕರು ಚಿತ್ರಕಲೆಯಲ್ಲಿ ಪ್ರಸಿದ್ಧಿ ಪಡೆದಿದ್ದರು. ತಂದೆ ಕೃಷ್ಣಪ್ಪನವರು ಸಹ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನ ಕಲಾವಿದರು. ಹೀಗಾಗಿ ಬಾಲಕ ವೆಂಕಟಪ್ಪನಿಗೆ ಸಹಜವಾಗಿಯೇ ಚಿಕ್ಕಂದಿನಲ್ಲಿ ಕಲಾಸಕ್ತಿ ಮೂಡಿತು. ಬಾಲಕ ವೆಂಕಟಪ್ಪನ ಸಿಂಹ ಸಿಂಹಿಣಿ ಕಲಾಕೃತಿ ಮಹಾರಾಜರ ಮೆಚ್ಚುಗೆಗೆ ಪಾತ್ರವಾದ್ದರಿಂದ, ವೆಂಕಟಪ್ಪನ ಕಲಾಭ್ಯಾಸಕ್ಕೆ ಮಹಾರಾಜರು ಅನುಕೂಲ ಮಾಡಿಕೊಟ್ಟರು. ಮದ್ರಾಸಿನ ಕಲಾಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಡಿಪ್ಲೋಮಾ ಪಾಸು ಮಾಡಿದ ವೆಂಕಟಪ್ಪನವರು ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತಾದ ಪರ್ಸಿಬ್ರೌನ ಹಾಗೂ ಅವನೀಂದ್ರನಾಥ � ಾಗೂರ್ರಲ್ಲಿಗೆ ಹೋದರು. ಈ ಅವಧಿಯಲ್ಲಿಯೇ ವೆಂಕಟಪ್ಪನವರ ಅಜಂತ ಚಿತ್ರಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿ, ಅವರ ಕೀರ್ತಿ ದೇಶ - ವಿದೇಶಗಳಲ್ಲಿ ಹರಡಿತು.

೧೯೨೦ರಲ್ಲಿ ಮೈಸೂರಿಗೆ ಹಿಂದುರಿಗಿದ ವೆಂಕಟಪ್ಪನವರು ಸ್ಟುಡಿಯೋ ಆರಂಭಿಸಿ, ರಾಮಾಯಣ, ಮಹಾಭಾರತದ ಕಥಾವಸ್ತುಗಳನ್ನೊಳಗೊಂಡ ಚಿತ್ರಗಳು, ಹಾಗೂ ಐತಿಹಾಸಿಕ ಮಹಾಪುರುಷರಾದ ಶಂಕರಾಚಾರ್ಯ, ಬುದ್ಧ, ಟಿಪ್ಪುಸುಲ್ತಾನ್ ಹಾಗೂ ಪ್ರತಾಪಸಿಂಹ, ಅರ್ಧನಾರೀಶ್ವರ, ಬಂಗಾಳಿ ಪಕ್ಷಿ ಮುಂತಾದ ಅಪೂರ್ವ ಕಲಾಕೃತಿಗಳನ್ನು ರಚಿಸಿದರು. ವೆಂಕಟಪ್ಪನವರು ಕೇವಲ ಚಿತ್ರರಚನೆಯಲ್ಲಿ ಮಾತ್ರವಲ್ಲ ಶಿಲ್ಪದಲ್ಲೂ ಪ್ರವೀಣರಾಗಿದ್ದರು. ಬುದ್ಧನ ಮಹಾತ್ಯಾಗ, ಶಿವತಾಂಡವ, ವೀಣೆಶೇಷಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ ಹೀಗೆ ಅನೇಕ ಕಲಾಕೃತಿಗಳು ಇವರ ಪ್ರತಿಭೆಗೆ ಸಾಕ್ಷಿಯೆನಿಸಿವೆ.

ವೆಂಕಟಪ್ಪನವರಿಗೆ ಚಿತ್ರ, ಶಿಲ್ಪಕಲೆ ಅಷ್ಟೇಯಲ್ಲ ಸಂಗೀತದಲ್ಲೂ ಅಪಾರ ಆಸಕ್ತಿ. ಅಂತೆಯೇ ವೀಣೆ ಶೇಷಣ್ಣನವರಲ್ಲಿ ಏಳು ವರ್ಷಗಳ ಕಾಲ ವೀಣೆಯ ಅಭ್ಯಾಸ ಮಾಡಿದರಲ್ಲದೇ, ಸ್ವತಃ ಇಪ್ಪತ್ತೇರಡು ತಂತಿಗಳ ಶೃತಿವೀಣೆ ರೂಪಿಸಿದ ಹಿರಿಮೆ ಇವರದು.

ಕಲೆಯ ಸಾಧನೆಗಾಗಿ ಬ್ರಹ್ಮಚಾರಿಯಾಗಿಯೇ ಉಳಿದ ವೆಂಕಟಪ್ಪನವರು ಪ್ರಕೃತಿ ಪ್ರಿಯರು. ಭೂಮಿಯ ಏರು - ತಗ್ಗು, ಹಸಿರು ಗಿಡ-ಮರ- ಬಳ್ಳಿಗಳು, ವರ್ಣರಂಜಿತ ಆಕಾಶ, ಪ್ರಾಣಿ-ಪಕ್ಷಿ, ಹಿಮಾಲಯ ಪರ್ವತಗಳ ಮನಮೋಹಕ ದೃಶ್ಯ, ತಿಳಿನೀರಿನ ಸರೋವರ, ಸೂರ್ಯಾಸ್ತದ ರಂಗು, ಬೆಳ್ಳಿಯಂಚಿನ ಮೋಡ, ಹೀಗೆ ಇವರು ರಚಿಸಿದ ಕಲಾಕೃತಿಗಳು ಪ್ರಕೃತಿಯ ವೈಚಿತ್ರ್ಯಕ್ಕೆ ಬರೆದ ಬಾಷ್ಯಗಳೆನಿಸುತ್ತವೆ. ಪ್ರಕೃತಿಯ ಚಿತ್ರಕಲಾ ಪ್ರಪಂಚಕ್ಕೆ ಅನನ್ಯ ಕೊಡುಗೆ ನೀಡಿದ ಈ ಹಿರಿಯ ಸಾಧಕನಿಗೆ ೧೯೬೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು. ರಸಋಷಿ, ಕಲಾತಪಸ್ವಿ ವೆಂಕಟಪ್ಪ ೧೯೬೫ರಲ್ಲಿ ಕಲಾಪ್ರಪಂಚದಿಂದ ಶಾಶ್ವತವಾಗಿ ದೂರ ಸರಿದರು.