ವಿಶೇಷ ಸೂಚನೆ

ಗಿರೀಶ್ ಕಾರ್ನಾಡ್

ಕನ್ನಡ ರಂಗಭೂಮಿಗೆ ಹೊಸ ಆಯಾಮ, ಕೀರ್ತಿ ತಂದುಕೊಟ್ಟ ಶ್ರೇಯಸ್ಸು ಶ್ರೀ ಗಿರೀಶ್ ಕಾರ್ನಾಡರಿಗೆ ಸಲ್ಲುತ್ತದೆ. ೧೯೭೦ ರ ದಶಕದ ಕನ್ನಡ ರಂಗಭೂಮಿ ಚಳುವಳಿಯಲ್ಲಿ ಸುವರ್ಣಕಾಲ. ಹೊಸ ನಾಟಕಗಳು, ಹೊಸ ನಟರು, ನಿರ್ದೇಶಕರು ರಂಗಭೂಮಿಗೆ ಸಂಭ್ರಮ ತಂದ ಕಾಲ. ಬದುಕಿನ ಪುಟಗಳನ್ನು ಪುರಾಣ ಪ್ರತೀಕಗಳ ಮೂಲಕ ಅವರು ತೆರೆದದ್ದು ಗಮನಾರ್ಹ, ಬರಿ ಕಲೆಯಲ್ಲ, ಘಟನೆಯಲ್ಲ, ಮನಸ್ಸನ್ನು ತಲ್ಲಣಗೊಳಿಸುವ ಮಾತುಗಳಲ್ಲಿ ಇವರ ನಾಟಕಗಳ ಯಶಸ್ಸು ಇದೆ. ಅವರು ಕಟ್ಟಿಕೊಡುತ್ತಿದ್ದುದು ಯಾವುದೋ ಕಾಲದ ವಿಚಾರವಲ್ಲ. ನಿತ್ಯ ಬದುಕಿನ ಅನುಭವಗಳು, ಹುಡುಕಾಡುವ ಪ್ರಶ್ನೆಗಳು, ಹೆಣ್ಣು ಗಂಡಿನ ಸಂಬಂಧಗಳು, ಧರ್ಮ ರಾಜಕಾರಣ, ಶೃಂಗಾರ ಮನೋಧರ್ಮ, ಹೀಗೆ ಸರ್ವಕಾಲಕ್ಕೂ ಪ್ರಸ್ತುತವಾದ ವಿಷಯಗಳು.

ಕನ್ನಡ ಚಲನಚಿತ್ರ ಪ್ರಪಂಚಕ್ಕೂ ಗಿರೀಶರು ಕೊಟ್ಟ ಕಾಣಿಕೆ ಅನನ್ಯ. ಸಂಸ್ಕಾರ, ವಂಶವೃಕ್ಷ,ಒಂದಾನೊಂದು ಕಾಲದಲ್ಲಿ, ಹೀಗೆ. ಇವರು ನಿರ್ದೇಶಿಸಿದ ಉತ್ಸವ ಒಂದು ಮರೆಯಲಾಗದ ಚಿತ್ರ. ಎಲ್ಲಾ ಭಾಷೆಯಲ್ಲಿ ನಟಿಸಿದ ಪ್ರತಿಭಾನ್ವಿತ ನಟ ಇವರು.

ಗಿರೀಶರ ಪ್ರಗತಿಶೀಲ ಮನೋಧರ್ಮ, ಮಾನವೀಯ ಅನುಕಂಪ, ಕೋಮು ಸಾಮರಸ್ಯಕ್ಕಾಗಿ ಅವಿರತ ಅನುದಿನದ ಹೋರಾಟ ಅವರನ್ನು ಬರಿ ಕಲಾವಿದನ್ನಾಗಿಸದೆ ಸಮಾಜದ ಆರೋಗ್ಯಕ್ಕಾಗಿ ಸದಾ ಚಿಂತನೆಯ ಶ್ರೇಷ್� ಚಿಂತಕರನ್ನಾಗಿ ಮಾಡಿದೆ.

ಹೆಸರಾಂತ ಕಾರ್ನಾಡ್ ಮನೆತನದಲ್ಲಿ, ಉತ್ತರ ಕನ್ನಡದಲ್ಲಿ ಹುಟ್ಟಿದ ಕಾರ್ನಾಡ್ ಶಾಲಾಶಿಕ್ಷಣ ಪಡೆದದ್ದು ಸಿರ್ಸಿ, ಧಾರವಾಡ ಹಾಗೂ ಮುಂಬಯಿಯಲ್ಲಿ. ರೋಡ್ಸ್ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ಇಂಗ್ಲೆಂಡಿನ ನಾಟಕಗಳ ಪ್ರಭಾವಕ್ಕೊಳಗಾದವರು. ಅವರ ಮೊದಲ ನಾಟಕ ಯಯಾತಿ; ಈ ನಾಟಕ ಎಲ್ಲಾ ವೃತ್ತಿಪರ ತಂಡದವರೂ ಆಲೋಚಿಸುವ ಇಷ್ಟಪಟ್ಟು ಆಡುವ ನಾಟಕ.

ತೊಗಲಕ್, ತಲೆದಂಡ, ಟಿಪ್ಪು ಸುಲ್ತಾನ್, ಧರ್ಮ, ರಾಜಕಾರಣ, ಭಕ್ತಿ, ಆರ್ಥಿಕತೆ ಹೀಗೆ ಹಲವು ವಿಷಯಗಳ ಮೂಲದ ಹಿನ್ನೆಲೆಯು. ಪ್ರತಿಬಾರಿಯೂ ಪ್ರೇಕ್ಷಕರನ್ನು ಅಲುಗಾಡಿಸುವ ನಾಟಕಗಳು. ಅವರ ನಾಟಕದ ಗುಂಗಿನಿಂದ ಹೊರಬರಲು ಅನೇಕ ದಿನಗಳೇ ಬೇಕು.

ಗಿರೀಶರು ಅನೇಕ ಕಲಾಕೇಂದ್ರಗಳಲ್ಲಿ ಕೆಲಸ ಮಾಡಿದ್ದಾರೆ. ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟ್ ನಿರ್ದೇಶಕರಾಗಿ, ಭಾರತ ಸರ್ಕಾರದ ಸಂಗೀತ ನಾಟಕ ಅಕಾಡಮಿಯ ಅಧ್ಯಕ್ಷರಾಗಿ, ಕಲಾಪ್ರಪಂಚಕ್ಕೆ ಅನನ್ಯ ಕಾಣಿಕೆ ನೀಡಿದ್ದಾರೆ. ಅವರ ನಾಟಕಗಳು ಯಯಾತಿ, ಹಿಟ್ಟಿನ ಹುಂಜ, ಅಗ್ನಿ ಮತ್ತು ಮಳೆ, ತುಘಲಕ್, ತಲೆದಂಡ, ಟಿಪ್ಪೂ ಸುಲ್ತಾನ್, ಹಯವದನ, ನಾಗಮಂಡಲ ಹಾಗೂ ಅಂಜುಮಲ್ಲಿಗೆ (ಏಕೈಕ ಸಾಮಾಜಿಕ ನಾಟಕ) ಅವರಿಗೆ ಸಂದ ಪ್ರಶಸ್ತಿಗಳ ಸರಮಾಲೆ. ಕರ್ನಾಟಕ ಸಾಹಿತ್ಯ ಅಕಾಡಮಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ಚಲನಚಿತ್ರಕ್ಕೆ ರಜತಕಮಲ, ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಹಾಗೂ ಇವೆಲ್ಲಕ್ಕೆ ಕಲಶವಿಟ್ಟಂತೆ ಜ್ಞಾನಪೀ� ಪ್ರಶಸ್ತಿ. ಕನ್ನಡಿಗರು ಹೆಮ್ಮೆಯಿಂದ ದೇಶದ ಎಲ್ಲಾ ಕಡೆ ಹಾಗೂ ವಿದೇಶಗಳಲ್ಲಿ ಹೇಳಿಕೊಳ್ಳುವ ಹೆಸರು "ಗಿರೀಶ್ ಕಾರ್ನಾಡ್".