ವಿಶೇಷ ಸೂಚನೆ

ಬಿ.ಎಂ.ಶ್ರೀ

ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಆಚಾರ್ಯಪುರುಷ ಎಂದು ಖ್ಯಾತನಾಮರಾದ ಪ್ರೋಫೆಸರ್ ಬಿ.ಎಂ.ಶ್ರೀಕಂ� ಯ್ಯನವರು ಹುಟ್ಟಿದ್ದು ೧೮೮೪ರ ಜನವರಿ ೩ರಂದು ತುಮಕೂರು ಜಿಲ್ಲೆಯ ಸಂಪಿಗೆಯಲ್ಲಿ.
೧೯ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ಕಾವ್ಯರಚನೆ ಜಡಗಟ್ಟಿ ಅರ್ಥಹೀನವಾಗಿದ್ದ ಲಕ್ಷಣಗಳಿಗೆ ಕಟ್ಟುಬಿದ್ದು ಶುಷ್ಕವಾಗಿತ್ತು. ಇಂಗ್ಲೀಷ್ ವಿದ್ಯೆಯ ಪರಿಣಾಮವಾಗಿ ಹೊಮ್ಮಿ ಹರಡುತ್ತಿದ್ದ ಆಧುನಿಕ ವಿಚಾರಗಳನ್ನುಳ್ಳ ಗದ್ಯಗ್ರಂಥಗಳ ರಚನೆಯ ಅಗತ್ಯ ಇದೆ ಎಂಬ ಅರಿವು ಕರ್ನಾಟಕದ ಎಲ್ಲ ಕಡೆಯ ವಿದ್ಯಾವಂತರಲ್ಲಿ ಮೂಡುತ್ತಿತ್ತು. ಕನ್ನಡ ಕಾವ್ಯದಿಗಂತದಲ್ಲಿ ಝುಗಝುಗಿಸುತ್ತ ಇರುಳ ಬಸಿರಿಂದ ಹೊರಬಂದು ಸುತ್ತೆಲ್ಲ ಹೊಸ ಬೆಳ್ಳಂಬೆಳಕನ್ನು ಹರಡುವ ಸೂರ್ಯನ ಹುಟ್ಟಿಗಾಗಿ ನಾಡು ಕಾದಿತ್ತು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮೊತ್ತಮೊದಲಿಗೆ ಶ್ರೀ ಕಾವ್ಯನಾಮವನ್ನು ಧರಿಸಿದ ಬಿ.ಎಂ.ಶ್ರೀ ಅವರ ಇಂಗ್ಲೀಷ್ ಗೀತೆಗಳು ಸಂಕಲನವನ್ನು ೧೯೨೬ರಲ್ಲಿ ಪ್ರಕಟಿಸಿದಾಗ, ಮೂಡಿದನು ರವಿ ಮೂಡಿದನು ಹೊಸ ಕನ್ನಡ ಕವಿ ಮೂಡಿದನು. ಕನ್ನಡ ಕಾವ್ಯಪ್ರಪಂಚದಲ್ಲಿ ನವೋದಯ ಯುಗ ಪ್ರಾರಂಭವಾಯಿತು. 'ಶ್ರೀ' ಅದರ ಹರಿಕಾರ, ಪ್ರವರ್ತಕರೆಂದೇ ಪ್ರಸಿದ್ಧರಾದರು.

’ಇಂಗ್ಲೀಷ್ ಗೀತೆಗಳು' ಒಂದು ಯುಗಪ್ರವರ್ತಕ ಕೃತಿ, ಭಾಷೆ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಕಾವ್ಯಪರಂಪರೆಯಲ್ಲಿ ಅದರ ಹೊಸತನದ ಛಾಪುಎದ್ದು ಕಾಣುವಂಥದು. ಅಷ್ಟೇ ಅಲ್ಲದೆ, ಕಾವ್ಯ ವಸ್ತುವಿನ ಆಯ್ಕೆಯ ವಿಷಯದಲ್ಲಿಯೂ, ಶ್ರೀಯವರು ಕ್ರಾಂತಿಕಾರರಾದರು. ಕವಿಸಮಯ, ಅರ್ಥಾಲಂಕಾರ ಶಿಲ್ಪಾಲಂಕಾರ, ಆಶೈಲಿಗೆ ಒಗ್ಗಿ ಬಂದ ವರ್ಣ ವೃತ್ತ ಕಂದಕಗಳ ಬಳಕೆ ಈ ಎಲ್ಲ ಸಾಂಪ್ರದಾಯಿಕ ಸಂಕೋಲೆಗಳನ್ನು ಕಡಿದುಹಾಕಿ, ಅಚ್ಚ ಕನ್ನಡ ನುಡಿಯಲ್ಲಿ, ಕನ್ನಡ ಛಂದಸ್ಸಿನ ಹೊಸ - ಹೊಸ ಮಟ್ಟುಗಳಲ್ಲಿ, ಸ್ವಾನುಭವ ನಿಷ್� ಭಾವಗೀತೆಗಳನ್ನು ಸಮೃದ್ದವಾಗಿ ರಚಿಸಬಲ್ಲ ಕನ್ನಡ ಕವಿಗಳ ಹೊಸ ಪೀಳಿಗೆಯೊಂದು ಹುಟ್ಟಲು ಕಾರಣಪುರುಷರಾದವರು ಶ್ರೀಯವರು.

ಕನ್ನಡ ಸಾಹಿತ್ಯಕ್ಕೆ ಶ್ರೀಯವರು ಕೊಟ್ಟ ಇನ್ನೊಂದು ಅಭೂತಪೂರ್ವ ಕೊಡುಗೆ ಎಂದರೆ, ಸಂಸ್ಕತ ಕಾವ್ಯ ಪ್ರಪಂಚದಲ್ಲಿ ಇಲ್ಲದ, ದುರಂತ ನಾಟಕ. ಶ್ರೀ ಅವರ 'ಅಶ್ವತ್ಥಾಮನ್' ನಾಟಕ ಇಂಗ್ಲೀಷ್ ಗೀತಗಳಂತೆಯೇ ಕನ್ನಡ ಸಾಹಿತ್ಯದ ನಾಟಕ ಪ್ರಕಾರ ಶಾಖೆ ಬೆಳೆಯಲು ಹೊಸದಾರಿ ಹಾಕಿಕೊಟ್ಟ ಮಾರ್ಗ ಪ್ರವರ್ತಕ ಕೃತಿ.

ಬಿ.ಎಂ.ಶ್ರೀಯವರು ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರಾಗಿ, ಪ್ರಾಚೀನ - ಆರ್ವಾಚೀನ ಕನ್ನಡ ಕವಿಗಳು ಕಂಡ ಕರ್ನಾಟಕವನ್ನು ವರ್ಣಿಸುವ ಕವನಗಳ ಸಂಕಲನವೊಂದನ್ನು ಕನ್ನಡದ ಬಾವುಟ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಕನ್ನಡ ಬಾವುಟವನ್ನು ಹಿಡಿದು ಕನ್ನಡ ನಾಡನ್ನೆಲ್ಲ ಸುತ್ತಿ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕನ್ನಡ ಜನಮನವನ್ನು ಸಿದ್ಧಗೊಳಿಸಿದರು. ಹೀಗೆ ಕನ್ನಡ ಭಾಷೆ ಸಾಹಿತ್ಯಗಳ ಸರ್ವತೋಮುಖ ಪ್ರಗತಿ, ಕನ್ನಡ ನಾಡಿನ ಮತ್ತು ಕನ್ನಡಿಗರ ಐಕ್ಯತೆಗೆ ನಿರಂತರವಾಗಿ ದುಡಿದ ಶ್ರೀಯವರು ೧೯೪೬ರಲ್ಲಿ ಇಹಲೋಕ ತ್ಯಜಿಸಿದರು.