ವಿಶೇಷ ಸೂಚನೆ

ಎಸ್.ನಿಜಲಿಂಗಪ್ಪ

ಕರ್ನಾಟಕದ ಏಕೀಕರಣ, ಆ ಮೂಲಕ ಕನ್ನಡ ಭಾಷೆ ಹಾಗೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದ ಸಿದ್ಧವನವಳ್ಳಿ ನಿಜಲಿಂಗಪ್ಪನವರು ಜನಿಸಿದ್ದು, ೧೯೦೨ರ ಡಿಸೆಂಬರ್ ೧೦ ರಂದು.
ಕರ್ನಾಟಕದ ಮುಖ್ಯಮಂತ್ರಿ, ಹಾಗೂ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ಪದವಿಯೂ ಸೇರಿದಂತೆ ಸುಮಾರು ೩೦ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ನಿಸ್ವಾರ್ಥದಿಂದ ದುಡಿದ ಅಪರೂಪದ ಧುರೀಣರು. ಬಳ್ಳಾರಿ ಜಿಲ್ಲೆಯ ಹಲವಾಗಿಲು ಗ್ರಾಮದ ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಅಬ್ಷಲೂರು ಅಡಿವಪ್ಪ, ತಾಯಿ ನೀಲಮ್ಮ, ಮೂರು ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡ ಬಾಲಕ ನಿಜಲಿಂಗಪ್ಪ ಹಾಗೂ ತಾಯಿ ನೀಲಮ್ಮ, ತಾಯಿಯ ಸೋದರಿ ಸಾವಕ್ಕ ಮತ್ತು ಅವರ ಪತಿ ರುದ್ರಪ್ಪನವರ ಕೃಪಾಶ್ರಯದಲ್ಲಿ ಬೆಳೆದರು.

ಚಿತ್ರದುರ್ಗದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ನಿಜಲಿಂಗಪ್ಪನವರು, ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದು, ನಂತರ ಪುಣೆಯಲ್ಲಿ ಎಲ್.ಎಲ್.ಬಿ ವ್ಯಾಸಂಗ ಮಾಡಿದರು. ಕಲೆ - ಸಾಹಿತ್ಯ - ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ ಇವರು ೧೯೨೭ರಲ್ಲಿ ವಕೀಲಿ ವೃತ್ತಿಯನ್ನು ಚಿತ್ರದುರ್ಗದಲ್ಲಿ ಆರಂಭಿಸಿದರು.

ಬಸವೇಶ್ವರ, ಶಂಕರಾಚಾರ್ಯ ಹಾಗೂ ಗಾಂಧೀಜಿಯವರ ವಿಜಾರ ಧಾರೆಗಳಿಂದ ಪ್ರಭಾವಿತರಾದ ನಿಜಲಿಂಗಪ್ಪನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಅಸಹಕಾರ ಚಳುವಳಿಯಲ್ಲಿ ಭಾಗಿಯಾದರು. ಇವರು ’ಮೈಸೂರು ಕಾಂಗ್ರೆಸ್' ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿದರು. ಹಾಗೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸೆರೆಮನೆವಾಸ ಅನುಭವಿಸಿದರು. ರಾಜಕೀಯ ವಿಮೋಚನೆ, ಸಮಾಜ ಸುಧಾರಣೆ, ಸಾಂಸ್ಕತಿಕ ಹಾಗೂ ರಾಜಕೀಯ ಕರ್ನಾಟಕ ಏಕೀಕರಣ, ಗ್ರಾಮೀಣ ಅರ್ಥ ವ್ಯವಸ್ಥೆಯ ಪುನರುದ್ಧಾರ, ಸ್ತ್ರೀ-ಪುರುಷರ ಸಮಾನತೆ, ವಿಧವಾ ವಿವಾಹ ಹೀಗೆ ಹತ್ತು - ಹಲವು ವಿಚಾರಗಳಲ್ಲಿ ನಿಸ್ವಾರ್ಥಿಯಾಗಿ ದುಡಿದ ಅಪರೂಪದ ರಾಜಕೀಯ ನಿಜಲಿಂಗಪ್ಪನವರು.

ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡನೆಯಾಗಬೇಕೆಂಬ ಇವರ ’ಕರ್ನಾಟಕ ಏಕೀಕರಣ'ದ ವಾದವನ್ನು ನೆಹರು ಕೂಡ ಒಪ್ಪಿಕೊಂಡು ಸಮ್ಮತಿಸಿದರು. ನಿಜಲಿಂಗಪ್ಪನವರೊಂದಿಗೆ ಸಾವಿರಾರು ಕನ್ನಡಿಗರು ದನಿಗೂಡಿಸಿದ್ದರ ಫಲವಾಗಿ ಇವರ ಕನಸು ನನಸಾಗಿ ಕರ್ನಾಟಕ ಏಕೀಕರಣದ ಪ್ರಥಮ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾದರು. ಎರಡು ಬಾರಿ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ ಇವರ ಅವಧಿಯಲ್ಲಿ ಕೃಷಿ, ನೀರಾವರಿ, ವಿದ್ಯುತ್, ಅರಣ್ಯಾಭಿವೃದ್ದಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿ ಗಮನಾರ್ಹ.

ಕನ್ನಡ ನಾಡು - ನುಡಿ - ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ ನಿಜಲಿಂಗಪ್ಪನವರ ಸೇವೆ ಸಾಧನೆಗೆ ಸಂದ ಪ್ರಶಸ್ತಿ, ಗೌರವಗಳು ಹಲವು. ಅವುಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿ ಪ್ರಮುಖವಾದದ್ದು.